ಜಿಲ್ಲೆ

ತಾಲೂಕಿನಲ್ಲಿ ಕೆರೆ ಒತ್ತುವರಿ ತೆರವು ಶ್ರೀಘ್ರ

ಶ್ರೀನಿವಾಸಪುರ: ಕೆರೆಗಳನ್ನು ರಕ್ಷಣೆ ಮಾಡಿದರೆ ನಾಡಿನ ಸಂರಕ್ಷಣೆ ಆಗುತ್ತದೆ. ಇದರಿಂದ ರೈತರು ಸುಭಿಕ್ಷವಾಗಿರಲು ಸಾಧ್ಯ ಎಂದು ತಹಸೀಲ್ದಾರ್​ ಜಿ.ಎನ್​.ಸುಧೀಂದ್ರ ತಿಳಿಸಿದರು. ಪಟ್ಟಣದ ತಹಸೀಲ್ದಾರ್​ ಸಭಾಂಗಣದಲ್ಲಿ ಗುರುವಾರ ಕೆರೆಗಳ ಒತ್ತುವರಿ ವಿಚಾರಕ್ಕೆ ಸಂಬಂಧಿಸಿದಂತೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಹೈಕೋರ್ಟ್​, ಲೋಕಾಯುಕ್ತರ ಆದೇಶದ ಮೇರೆಗೆ ಕೆರೆಗಳ ಒತ್ತುವರಿ ತೆರವುಗೊಳಿಸಲು ಸರ್ವೇ ಕಾರ್ಯ ನಡೆಸಿ ಕೆರೆಗಳ ಸಂರಕ್ಷಣೆಗೆ ಕಟ್ಟುನಿಟ್ಟಿನ ಆದೇಶ ನೀಡಿದೆ. ಆ ಪ್ರಕಾರವಾಗಿ ನಮ್ಮ ಸಿಬ್ಬಂದಿ ಕೆಲಸ ಮಾಡುತ್ತಿದ್ದು, ಸಾರ್ವಜನಿಕರು ಸಹಕರಿಸಬೇಕು ಎಂದು ಮನವಿ ಮಾಡಿದರು.

ಈಗಾಗಲೇ ಕೆರೆ ಒತ್ತುವರಿ ತೆರವು ಕಾರ್ಯ ಪ್ರಾರಂಭಿಸಲಾಗಿದೆ. ಕೆರೆಗಳಲ್ಲಿ ಬೆಳೆ ಮಾಡದಂತೆ ಸೂಚಿಸಲಾಗಿದೆ. ನಾವು ಒತ್ತುವರಿ ತೆರವುಗೊಳಿಸಲು ಬಂದಾಗ ನಮ್ಮನ್ನು ಅಡ್ಡಿಪಡಿಸದಂತೆ ತಿಳಿಸಲಾಗಿದೆ. ಕೆರೆಗಳ ಒತ್ತುವರಿಗೆ ಪಿಡಿಒ, ಆರ್​ಐ, ವಿಎ, ಸರ್ವೇ ಸಿಬ್ಬಂದಿ ಬರುತ್ತಾರೆ. ಅವರ ಕೆಲಸಕ್ಕೆ ಅಡ್ಡಿಪಡಿಸಿದರೆ ನಿಮ್ಮ ಮೇಲೆ ಕ್ರಿಮಿನಲ್​ ಕೇಸ್​ ದಾಖಲು ಮಾಡಲು ಅವಕಾಶ ಮಾಡಿಕೊಟ್ಟಂತಾಗುತ್ತದೆ ಎಂದು ಎಚ್ಚರಿಸಿದರು.

ಒಂದು ವೇಳೆ ಕೆರೆಯಲ್ಲಿ ಬೆಳೆ ಬೆಳೆದಿದ್ದರೆ, ನಾವು ಸರ್ವೇ ಮಾಡಲು ಬಂದಾಗ ಅಡ್ಡಿಪಡಿಸಕೂಡದು. ಹಾಗೇನಾದರೂ ತೊಂದರೆ ಮಾಡಿದರೆ ಕ್ರಿಮಿನಲ್​ ಪ್ರಕರಣ ದಾಖಲಿಸಲಾಗುತ್ತದೆ. ನಾವು ಪ್ರತಿ 15 ದಿನಗಳಿಗೊಮ್ಮೆ ಜಿಲ್ಲಾಧಿಕಾರಿಯವರ ಮೂಲಕ ಹೈಕೋರ್ಟ್​, ಲೋಕಾಯುಕ್ತ ಸಂಸ್ಥೆಗೆ ಮಾಹಿತಿ ನೀಡಬೇಕಾಗಿದೆ. ಈ ವಿಚಾರವಾಗಿ ಜಿಲ್ಲಾಧಿಕಾರಿಯವರು ಕಾಳಜಿ ವಹಿಸಿದ್ದಾರೆ ಎಂದರು.

ಗೋಮಾಳದಲ್ಲಿ ಅನಧಿಕೃತ ಬೆಳೆ ಬೆಳೆದಿದ್ದರೆ ಒಂದಿಷ್ಟು ದಿನ ಕಾಲಾವಕಾಶ ನೀಡಬಹುದಾಗಿತ್ತು. ಆದರೆ, ಕೆರೆ ಒತ್ತುವರಿ ವಿಚಾರದಲ್ಲಿ ನಾವು ಸಮಯಾವಕಾಶ ನೀಡಲು ಸಾಧ್ಯವಿಲ್ಲ. ಕೆರೆಯಂಗಳದಲ್ಲಿ ಅನಧಿಕೃತವಾಗಿ ಕೊಳವೆಬಾವಿ ಕೊರೆಸಿದ್ದರೆ ಅದನ್ನು ಪಂಚಾಯಿತಿಗೆ ಒಪ್ಪಿಸಲಾಗುತ್ತದೆ. ಅವರು ಕೊಳವೆಬಾವಿ ವಶಕ್ಕೆ ಪಡೆದು ಆ ಗ್ರಾಮದ ಕುಡಿಯುವ ನೀರಿಗಾಗಿ ಬಳಸಬಹುದಾಗಿದೆ. ಜಿಲ್ಲಾಧಿಕಾರಿಯವರು, ಜಿಪಂ ಸಿಇಒ ಅವರ ಮಾರ್ಗದರ್ಶನ ಪಡೆದು ಉಪಯೋಗಿಸಬಹುದು ಎಂದರು.

ರಾಜಕಾಲುವೆಗಳನ್ನು ಕೆರೆಗಳಿಗೆ ನೀರು ತುಂಬಿಸಲು ಉಪಯೋಗಿಸಲಾಗುತ್ತದೆ. ಒಂದು ವೇಳೆ ರಾಜುಕಾಲುವೆಗಳು ಒತ್ತುವರಿಯಾಗಿದ್ದರೆ ಅವುಗಳ ಒತ್ತುವರಿ ತೆರವುಗೊಳಿಸಲಾಗುವುದು. ಈಗಾಗಲೇ 200ಕ್ಕೂ ಹೆಚ್ಚು ಕೆರೆಗಳ ಒತ್ತುವರಿ ತೆರವುಗೊಳಿಸಲಾಗಿದೆ. ಕೆಲವೆಡೆ ಒತ್ತುವರಿಯಾಗಿರುವ ಬಗ್ಗೆ ಮಾಹಿತಿ ಲಭಿಸಿದ್ದು, ಶೀಘ್ರ ತೆರವುಗೊಳಸಲಾಗುವುದು.

ತಾಲೂಕಿನಲ್ಲಿ 600ಕ್ಕೂ ಹೆಚ್ಚು ಕೆರೆ, ಕುಂಟೆಗಳಿದ್ದು, ಕೆಲ ಕೆರೆಗಳು ಜಿಪಂ ಅಧೀನದಲ್ಲಿ ಇವೆ. ಕೆರೆಗಳ ಒತ್ತುವರಿ ತೆರವುಗೊಳಿಸಿ ಆ ಕೆರೆಗಳಿಗೆ ಅಳತೆಯ ಬಗ್ಗೆ ಬೋರ್ಡ್​ಗಳನ್ನು ಹಾಕಿಕೊಂಡು ಬರುತ್ತಿದ್ದೇವೆ ಎಂದರು.

ಸಾಮಾನ್ಯ ಅರಣ್ಯ ಇಲಾಖೆ ಸಹಯೋಗದಲ್ಲಿ ಗಿಡಗಳನ್ನು ನೆಟ್ಟು, ಅವುಗಳಿಗೆ ಕಾಂಪೌಂಡ್​ ಹಾಕಲಾಗುವುದು ಎಂದು ಮಾಹಿತಿ ನೀಡಿದರು.