ಜಿಲ್ಲೆ

ಕಾಲುವೆ ಒತ್ತುವರಿಗೆ ಬರಿದಾದ ಕೆರೆಗಳು, ಉತ್ತಮ ಮಳೆಯಾದರೂ ಕೆರೆಗಳಲ್ಲಿ ನೀರಿಲ್ಲ, ಬಡಾವಣೆ ನಿರ್ಮಾಣದಿಂದ ಸಮಸ್ಯೆ

Bengaluru Rural

ನವೀನ್‌ಚಂದ್ರ ಶೆಟ್ಟಿ ಆನೇಕಲ್ ತಾಲೂಕಿನಲ್ಲಿ ಉತ್ತಮ ಮಳೆಯಾಗುತ್ತಿದ್ದರೂ ತಾಲೂಕಿನ ಅನೇಕ ಕೆರೆಗಳಲ್ಲಿ ನೀರಿನ ಸೆಲೆಯೇ ಇಲ್ಲದಂತಾಗಿದೆ. ಪಟ್ಟಣಕ್ಕೆ ನೀರುಣಿಸುವ ದೊಡ್ಡಕೆರೆಯಲ್ಲಿ ಹನಿ ನೀರು ಇಲ್ಲದಂತಾಗಿದೆ. ಒಂದು ಕೆರೆ ತುಂಬಿದಾಗ ಆ ಕೆರೆ ನೀರು ಇನ್ನೊಂದು ಕೆರೆಗೆ ಹರಿಯುತ್ತಿತ್ತು. ಆದರೆ ಬಡಾವಣೆಗಳು ನಿರ್ಮಾಣವಾದಂತೆಲ್ಲ ರಾಜಕಾಲುವೆಗಳು ಒತ್ತುವರಿಯಾಗಿ ಕೆರೆಯಿಂದ ಕೆರೆಗೆ ನೀರು ಹರಿಯುವುದಕ್ಕೆ ತೊಡಕಾಗಿದೆ. ಈ ಕಾರಣದಿಂದ ಉತ್ತಮ ಮಳೆಯಾಗುತ್ತಿದ್ದರೂ ಕೆಲವೊಂದು ಕೆರೆಗಳಲ್ಲಿ ಹನಿ ನೀರು ನಿಲ್ಲಂದಂತಾಗಿದೆ. ಹೆನ್ನಾಗರ ಕೆರೆ ತುಂಬಿದಾಗ ಅಕ್ಕಪಕ್ಕದಲ್ಲಿದ್ದ ಬಡಾವಣೆಗಳ ಮೇಲೆ ನೀರು ಹರಿದಿರುವುದು ಇದಕ್ಕೆ ಸಾಕ್ಷಿಯಾಗಿದೆ. ಸಮರ್ಪಕ ರಾಜಕಾಲುವೆ ಇದ್ದಿದ್ದರೆ ತಾಲೂಕಿನ 150ಕ್ಕೂ ಹೆಚ್ಚು ಕೆರೆಗಳಿಗೆ ನೀರು ಹರಿದು ಬರಬೇಕಿತ್ತು. ಆದರೆ ಕೆರೆಗೆ ನೀರು ಹರಿದು ಬರಲು ಜಾಗವಿಲ್ಲದಂತಾಗಿದೆ. ಕೆಲವೊಂದಷ್ಟು ಕೆರೆಗಳಿಗೆ ನೀರು ಬಂದು ಕೋಡಿ ಹರಿದಿದ್ದರೂ ಪಟ್ಟಣದ ದೊಡ್ಡಕೆರೆ ಸೇರಿ ಬಹುತೇಕ ಕೆರೆಗಳು ಬಣಗುಡುತ್ತಿವೆ. ಬಿದರಗುಪ್ಪೆ ಕೆರೆ ತುಂಬಿ ನೀರು ತಮಿಳುನಾಡಿಗೆ ಹರಿಯುತ್ತಿದೆ. ಈ ನೀರನ್ನು ಅಡ್ಡಗಟ್ಟಿ ತಾಲೂಕಿನ ಕೆರೆಗಳಿಗೆ ನೀರನ್ನು ಹರಿಸಬಹುದು. ಆದರೆ ಈ ಬಗ್ಗೆ ಅಧಿಕಾರಿಗಳು ಯೋಜನೆ ರೂಪಿಸುತ್ತಿಲ್ಲ. ಆದ್ದರಿಂದ ಮಳೆ ಬಂದರೂ ತಾಲೂಕು ಬರಗಾಲ ಪೀಡಿತ ಪ್ರದೇಶವಾಗಿಯೇ ಉಳಿಯುವಂತಾಗಿದೆ ಎಂದು ಸಾರ್ವಜನಿಕರು ಬೇಸರ ವ್ಯಕ್ತಪಡಿಸಿದ್ದಾರೆ.

ಬಿದರಗುಪ್ಪೆ ಕೆರೆ ತುಂಬಿ 10 ದಿನವಾಗಿದೆ, ಹೆನ್ನಾಗರ ಚಂದಾಪುರ ಕೆರೆಗೆ ನೀರು ಬಂದು ಕೋಡಿ ಹರಿದಿದ್ದು, ಈ ನೀರು ತಮಿಳುನಾಡು ಸೇರುತ್ತದೆ. ಬಿದರಗುಪ್ಪೆ ಕೆರೆಯಲ್ಲಿನ ನೀರನ್ನು ಸಮರ್ಪಕವಾಗಿ ಬಳಸಿಕೊಂಡು ಅಕ್ಕಪಕ್ಕದ ರೈತರಿಗೆ ನೀರು ಸರಬರಾಜು ಮಾಡಿದರೆ ವರ್ಷವೆಲ್ಲ ಉತ್ತಮ ಬೆಳೆ ಬೆಳೆಯಬಹುದು. ಸುವರ್ಣಮ್ಮ, ಬಿದರಗುಪ್ಪೆ ಮಳೆಯಾಗುತ್ತಿದ್ದರೂ ಕೆಲವೊಂದು ಕೆರೆಗಳಲ್ಲಿ ನೀರು ಬಂದಿಲ್ಲ, ಅಲ್ಲಲ್ಲಿ ಬಡಾವಣೆಗಳನ್ನು ನಿರ್ಮಿಸಿ ರಾಜಕಾಲುವೆ ಒತ್ತುವರಿ ಮಾಡಿರುವುದರಿಂದ ಈ ಸಮಸ್ಯೆ ಎದುರಾಗಿದೆ. ಸಣ್ಣ ನೀರಾವರಿ ಇಲಾಖೆ ಕೆರೆಗಳಿಗೆ ನೀರು ಹರಿದು ಬಂದಾಗ ಶೇಖರಣೆಯ ಬಗ್ಗೆ ಗಮನಹರಿಸಬೇಕು. ದೇವರಾಜೇಗೌಡ ತಾಪಂ ಕಾರ್ಯನಿರ್ವಹಣಾಧಿಕಾರಿ ರಾಜಕಾಲು ಒತ್ತುವರಿ ಮಾಡಿರುವ ಬಗ್ಗೆ ಸ್ಥಳೀಯರು ಎಲ್ಲಿ ಒತ್ತುವರಿಯಾಗಿದೆ ಎನ್ನುವ ಮಾಹಿತಿ ನೀಡಿದರೆ ಅವುಗಳನ್ನು ತೆರವು ಮಾಡಿ ಕೆರೆಗೆ ನೀರು ಬರುವಂತೆ ಮಾಡಲಾಗುವುದು. ಮಹದೇವಯ್ಯ ತಹಸೀಲ್ದಾರ್