ಜಿಲ್ಲೆ

ಕೆರೆಗಳಲ್ಲಿ ಜೀವಜಲ ಉಕ್ಕಿಸಲು ಜೈನಸಂಘಟನೆಯ ಭಗೀರಥ ಪ್ರಯತ್ನ

ಸದೇಶ್ ಕಾರ್ಮಾಡ್

ಸದೇಶ್ ಕಾರ್ಮಾಡ್ ಮೈಸೂರು
ಜಿಲ್ಲೆಯಲ್ಲಿ ಬರಿದಾದ ಕೆರೆಗಳ ಹೂಳೆತ್ತಿ ಕೆರೆಗಳಲ್ಲಿ ಜೀವಜಲ ಉಕ್ಕುವಂತೆ ಮಾಡುವ ಭಗೀರಥ ಪ್ರಯತ್ನವನ್ನು ‘ಭಾರತೀಯ ಜೈನ ಸಂಘಟನೆ ಮೈಸೂರು ಅಧ್ಯಯ’ ಕೈಗೊಂಡಿದೆ.

ಭೀಕರ ಬರಗಾಲದಿಂದ ಜಿಲ್ಲೆಯ ಬಹುತೇಕ ಕೆರೆಗಳು ಬರಿದಾಗಿದ್ದು, ಅಂತರ್ಜಲ ಮಟ್ಟ ದಿನೇ ದಿನೆ ಕುಸಿತ ಕಾಣಲು ಪ್ರಾರಂಭವಾಗಿದೆ. ಇದರಿಂದ ಕೃಷಿ ಚಟುವಟಿಕೆ ಕೈಗೊಳ್ಳಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದ್ದು, ಮತ್ತೊಂದೆಡೆ ಕುಡಿಯುವ ನೀರಿನ ಸಮಸ್ಯೆಯೂ ಎದುರಾಗಿದೆ. ಮುಂದೆ ಇಂತಹ ಪರಿಸ್ಥಿತಿ ಬಾರದೆ ಇರಲಿ ಎಂಬ ಕಾರಣಕ್ಕೆ ಜೈನ ಸಂಘಟನೆ ವತಿಯಿಂದ ಜಿಲ್ಲೆಯ ಕೆರೆಗಳ ಹೂಳೆತ್ತುವ ಕಾರ್ಯ ಪ್ರಾರಂಭಿಸಲಾಗಿದೆ.

ಪ್ರಸಕ್ತ ವರ್ಷ ಜಿಲ್ಲೆಯ 5 ಕೆರೆಗಳ ಹೂಳೆತ್ತುವ ಕಾಮಗಾರಿ ಕೈಗೊಳ್ಳಲಾಗುತ್ತಿದ್ದು, ಮಳೆಗಾಲ ಮುಗಿದ ನಂತರ 50 ಕೆರೆಗಳ ಹೂಳೆತ್ತುವ ಕಾಮಗಾರಿ ಕೈಗೊಳ್ಳಲು ಉದ್ದೇಶಿಸಲಾಗಿದೆ. ಮುಂಗಾರು ಪ್ರಾರಂಭಕ್ಕೆ ಕೇವಲ ಒಂದು ತಿಂಗಳು ಬಾಕಿ ಇರುವ ಹಿನ್ನೆಲೆಯಲ್ಲಿ ಹೆಚ್ಚಿನ ಕೆರೆಗಳ ಹೂಳೆತ್ತುವ ಕಾಮಗಾರಿ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಮುಂಗಾರು ಮುಗಿದ ನಂತರ ಜಿಲ್ಲೆಯ ವಿವಿಧೆಡೆ ದೊಡ್ಡ ಸಂಖ್ಯೆಯಲ್ಲಿ ಕೆರೆಗಳ ಹೂಳೆತ್ತುವ ಕಾಮಗಾರಿ ಕೈಗೊಳ್ಳಲು ನಿರ್ಧರಿಸಲಾಗಿದೆ.

ಜೈನ ಸಂಘಟನೆಯಿಂದ ಪ್ರಸಕ್ತ ವರ್ಷ ಟಿ.ಕಾಟೂರು, ಗುಜ್ಜೇಗೌಡನಪುರ, ಬೋಗಾದಿ ರಸ್ತೆಯ ಗೊಲ್ಲನಬಿಡು ಸರಗೂರು, ನಗರದ ಪಿಂಜ್ರಾಪೋಲ್ ಸೊಸೈಟಿಯ ಕೆರೆಯ ಹೂಳೆತ್ತುವ ಕಾಮಗಾರಿ ಪ್ರಾರಂಭಗೊಂಡಿದ್ದು, ಸದ್ಯದಲ್ಲಿಯೇ ಗುಜ್ಜೇಗೌಡನಪುರ ಬಳಿಯ ಮಂಡನಹಳ್ಳಿ ಗ್ರಾಮದ ಕೆರೆಯ ಹೂಳೆತ್ತುವ ಕಾಮಗಾರಿ ಪ್ರಾರಂಭಿಸಲು ಉದ್ದೇಶಿಸಲಾಗಿದೆ.

ಕೆರೆಗಳ ಆಯ್ಕೆ ಹೇಗೆ?

ಭಾರತೀಯ ಜೈನ್ ಸಂಘಟನೆಯ ಪದಾಧಿಕಾರಿಗಳು ಜಿಲ್ಲೆಯ 30 ಕೆರೆಗಳಿಗೆ ಭೇಟಿ ನೀಡಿ ಪರಿಶೀಲಿಸಿದ ನಂತರ 5 ಕೆರೆಗಳ ಹೂಳೆತ್ತುವ ಕಾಮಗಾರಿ ಕೈಗೆತ್ತಿಕೊಂಡಿದೆ. ಹೂಳೆತ್ತುವ ಕೆರೆಯಲ್ಲಿ ಹೆಚ್ಚು ಹೂಳು ದೊರೆಯಬೇಕು ಹಾಗೂ ಗ್ರಾಮದ ರೈತರು ಹೂಳನ್ನು ಕೊಂಡೊ ಯ್ಯುವ ಆಸಕ್ತಿ ತೋರಬೇಕು. ಅಂತಹ ಗ್ರಾಮದ ಕೆರೆಗಳಲ್ಲಿ ಮಾತ್ರ ಹೂಳೆತ್ತುವ ಕಾಮಗಾರಿ ಕೈಗೊಳ್ಳಲಾಗುವುದು.

ಹೂಳೆತ್ತುವ ಕಾಮಗಾರಿಗೆ ವೆಚ್ಚವಾಗುವ ಹಣವನ್ನು ಭಾರತೀಯ ಜೈನ ಸಂಘಟನೆ ಭರಿಸುತ್ತಿದೆ. ಈ ಹೂಳನ್ನು ರೈತರಿಗೆ ಉಚಿತವಾಗಿ ನೀಡಲಾಗುತ್ತಿದ್ದು, ರೈತರು ಟ್ರಾೃಕ್ಟರ್ ಮೂಲಕ ಹೂಳನ್ನು ತಮ್ಮ ಜಮೀನಿಗೆ ಸಾಗಾಟ ಮಾಡುತ್ತಿದ್ದಾರೆ. ಈ ಹೂಳಿನಿಂದ ಭೂಮಿಯ ಫಲವತ್ತತೆ ಹೆಚ್ಚಾಗುವ ಹಿನ್ನೆಲೆಯಲ್ಲಿ ರೈತರು ಸಹ ಹೂಳನ್ನು ಕೊಂಡೊಯ್ಯಲು ಉತ್ಸಾಹ ತೋರುತ್ತಿದ್ದಾರೆ. ಕೆರೆಯಿಂದ ಎಲ್ಲ ಹೂಳನ್ನು ತೆಗೆದು ಹೊರ ಹಾಕಿದರೆ ಮಳೆಗೆ ಮತ್ತೆ ಕೆರೆಯಲ್ಲಿ ಹೂಳು ತುಂಬಿಕೊಳ್ಳುತ್ತದೆ ಎಂಬ ಕಾರಣಕ್ಕೆ ಗ್ರಾಮದ ರೈತರಿಗೆ ಎಷ್ಟು ಹೂಳಿನ ಅವಶ್ಯಕತೆ ಇದೆಯೋ ಅಷ್ಟು ಹೂಳನ್ನು ಮಾತ್ರ ಕೆರೆಯಿಂದ ತೆಗೆಯಲಾಗುತ್ತಿದೆ. ಕೆರೆಯ ಹೂಳೆತ್ತುವ ಕಾಮಗಾರಿಯಿಂದ ಮುಂದಿನ ಬಾರಿ ಸಾಕಷ್ಟು ಪ್ರಮಾಣದಲ್ಲಿ ನೀರು ಸಂಗ್ರಹವಾಗಿ ಗ್ರಾಮದಲ್ಲಿ ಅಂತರ್ಜಲ ಮಟ್ಟವೂ ಏರಿಕೆಯಾಗುವ ನಿರೀಕ್ಷೆ ಹೊಂದಲಾಗಿದೆ.

ಜೆಸಿಬಿ ಬಳಕೆ ಮಾಡಿಕೊಂಡು ಕೆರೆಗಳ ಹೂಳೆತ್ತುವ ಕಾಮಗಾರಿ ಕೈಗೊಳ್ಳಲಾಗುತ್ತಿದೆ. ಒಂದು ಕೆರೆಗೆ ಒಂದು ಜೆಸಿಬಿ ಬಳಕೆ ಮಾಡಲಾಗುತ್ತಿದೆ. ಅಂತರ್ಜಲ ಹೆಚ್ಚು ಕುಸಿತ ಕಂಡಿರುವ ಗ್ರಾಮಗಳು, ಕಾಲುವೆ ಹಾಗೂ ನದಿ ಮೂಲ ಇಲ್ಲದ ಗ್ರಾಮಗಳ ಕೆರೆಗಳ ಹೂಳೆತ್ತಲು ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಪ್ರಸ್ತುತ ಗ್ರಾಮ ಪಂಚಾಯಿತಿಗಳಿಂದ ಅನುಮತಿ ಪಡೆದು ಕೆರೆಗಳ ಹೂಳೆತ್ತುವ ಕಾಮಗಾರಿ ಕೈಗೊಳ್ಳಲಾಗುತ್ತಿದ್ದು, ಮುಂದಿನ ವರ್ಷ ಜಿಲ್ಲಾ ಪಂಚಾಯಿತಿ ಅನುಮತಿ ಪಡೆದು ಜಿಲ್ಲೆಯಲ್ಲಿ 50 ಕೆರೆಗಳ ಹೂಳೆತ್ತುವ ಕಾಮಗಾರಿ ಕೈಗೊಳ್ಳಲು ಉದ್ದೇಶಿಸಲಾಗಿದೆ. ಕೆರೆಗಳ ಹೂಳೆತ್ತುವ ಕಾಮಗಾರಿಗೆ ಪ್ರಸ್ತುತ ಫೋರ್ಸ್ ಮೋಟಾರ್ಸ್‌ ಸಂಸ್ಥೆಯು ಸಿಎಸ್‌ಆರ್ ನಿಧಿಯನ್ನು ನೀಡುತ್ತಿದೆ. ಒಂದುವೇಳೆ ಹಣದ ಕೊರತೆ ಎದುರಾದರೆ ದಾನಿಗಳಿಂದ ನೆರವು ಪಡೆದು ಹೂಳೆತ್ತುವ ಕಾಮಗಾರಿ ಮುಂದುವರಿಸಲು ಉದ್ದೇಶಿ ಸಲಾಗಿದೆ.

ಜಿಲ್ಲೆಯಲ್ಲಿ ಅಂತರ್ಜಲ ಪ್ರಮಾಣ ಹೆಚ್ಚು ಮಾಡುವ ಉದ್ದೇಶದಿಂದ ಭಾರತೀಯ ಜೈನ ಸಂಘಟನೆ ಮೈಸೂರು ಅಧ್ಯಯ’ ವತಿಯಿಂದ ಕೆರೆಗಳ ಹೂಳೆತ್ತುವ ಕಾಮಗಾರಿ ಪ್ರಾರಂಭಿಸಿದ್ದೇವೆ. ಸಮಯಾವಕಾಶದ ಕೊರತೆಯಿಂದ ಈ ಬೇಸಿಗೆಯಲ್ಲಿ ಜಿಲ್ಲೆಯ 5 ಕೆರೆಗಳ ಹೂಳನ್ನು ಮಾತ್ರ ಎತ್ತಲಾಗುವುದು. ಮಳೆಗಾಲ ಮುಗಿದ ನಂತರ ಜಿಲ್ಲೆಯ 50 ಕೆರೆಗಳ ಹೂಳೆತ್ತುವ ಕಾಮಗಾರಿ ಕೈಗೊಳ್ಳಲು ಉದ್ದೇಶಿ ಸಲಾಗಿದೆ. ಇದರಿಂದ ಮುಂಬರುವ ವರ್ಷಗಳಲ್ಲಿ ಹೂಳೆತ್ತಿದ ಗ್ರಾಮಗಳಲ್ಲಿ ಅಂತರ್ಜಲಮಟ್ಟ ವೃದ್ಧಿಯಾಗಿ ಜನರ ನೀರಿನ ಸಮಸ್ಯೆ ಎದುರಿಸುವುದು ತಪ್ಪಲಿದೆ. ನಮ್ಮ ಈ ಪ್ರಯತ್ನಕ್ಕೆ ಸ್ಥಳೀಯ ಗ್ರಾಮ ಪಂಚಾಯಿತಿ ಹಾಗೂ ರೈತರಿಂದ ಉತ್ತಮ ಸ್ಪಂದನೆ ದೊರೆಯುತ್ತಿದೆ.
ಜೈನ್ ಪ್ರಕಾಶ್ ಗುಲೇಚ,
ಕೆರೆ ಹೂಳೆತ್ತುವ ಯೋಜನೆಯ ಸಂಯೋಜಕ