ಜಿಲ್ಲೆ

ಕೆರೆ ಹೂಳೆತ್ತುವಿಕೆ ತುರ್ತು ಅಗತ್ಯ

Davangere - Desk - Mahesh Babu E

ಚಿತ್ರದುರ್ಗ: ಭೂಮಿಯಿಂದ ಶೇ.80 ಪ್ರಮಾಣದಲ್ಲಿ ಈಗಾಗಲೇ ನೀರನ್ನು ಹೊರ ತೆಗೆದಿದ್ದೇವೆ ಎಂದು ಅಂತರ್ಜಲ ತಜ್ಞ ಎನ್.ಜೆ.ದೇವರಾಜರೆಡ್ಡಿ ಹೇಳಿದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ನಗರದ ವೈ.ಆರ್.ಆದಿಶೇಷ ರೋಟರಿ ಬಾಲಭವನದಲ್ಲಿ ಶುಕ್ರವಾರ ಏರ್ಪಡಿಸಿದ್ದ ಕೆರೆ ಸಮಿತಿ ಪದಾಧಿಕಾರಿಗಳ ಸಭೆ ಉದ್ಘಾಟಿಸಿ ಮಾತನಾಡಿ, ಭೂಮಿಯಲ್ಲಿ ಈಗ ಶೇ.20 ಪ್ರಮಾಣದಲ್ಲಿ ಉಳಿದಿದೆ ಎಂದು ತಿಳಿಸಿದರು.

ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರ ಮಾರ್ಗದರ್ಶನದಂತೆ ಗ್ರಾಮಾಭಿವೃದ್ಧಿ ಯೋಜನೆಯಿಂದ ಕೆರೆಗಳ ಹೂಳೆತ್ತಲಾಗುತ್ತಿದೆ. ಇದರಿಂದ ಮಳೆ ನೀರು ಸಂಗ್ರಹದೊಂದಿಗೆ ಕೃಷಿಗೆ ಫಲವತ್ತಾದ ಮಣ್ಣು ಸಿಗುತ್ತದೆ ಎಂದರು.

ಯೋಜನೆ ಶುದ್ಧ ಗಂಗಾ ವಿಭಾಗದ ಕೇಂದ್ರ ಕಚೇರಿ ನಿರ್ದೇಶಕ ಶಿವಾನಂದ ಆಚಾರ್ಯ ಮಾತನಾಡಿ, ಬೋರ್‌ವೆಲ್‌ಗಳೆಡೆ ಗಮನ ಹೆಚ್ಚಾಗಿ ಕೆರೆಗಳು ಒಣಗುತ್ತಿವೆ. ರಾಜ್ಯದಲ್ಲಿ ಅಂದಾಜು 36 ಸಾವಿರ ಕೆರೆಗಳಿದ್ದು, ಅನೇಕ ಕಡೆ ಒತ್ತುವರಿಯಾಗಿವೆ ಎಂದು ಹೇಳಿದರು.

ಐದಾರು ವರ್ಷಗಳಲ್ಲಿ ಯೋಜನೆಯಿಂದ ಕೆರೆಗಳ ಹೂಳೆತ್ತಲು 42 ಕೋಟಿ ರೂ. ಖರ್ಚು ಮಾಡಲಾಗಿದೆ. ರೈತರ ಜೀವಾಳ ಕೆರೆಗಳನ್ನು ಉಳಿಸುವತ್ತ ಕೆರೆ ಸಮಿತಿ ಪದಾಧಿಕಾರಿಗಳು ಗಮನ ಕೊಡಬೇಕು ಎಂದರು.

ಯೋಜನೆ ಪ್ರಾದೇಶಿಕ ನಿರ್ದೇಶಕಿ ಬಿ.ಗೀತಾ, ಜಿಲ್ಲಾ ನಿರ್ದೇಶಕ ದಿನೇಶ್ ಪೂಜಾರಿ ಇದ್ದರು.