ಉಪ್ಪಿನಬೆಟಗೇರಿ: ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಮಳೆಗೆ ಜನ ಜೀವನ ಅಸ್ತವ್ಯಸ್ತಗೊಂಡಿದ್ದಲ್ಲದೆ, ಹಲವಾರು ದುರ್ಘಟನೆಗಳು ಸಂಭವಿಸುತ್ತಿವೆ.
ನಿರಂತರವಾಗಿ ಸುರಿಯುತ್ತಿರುವ ಮಳೆಗೆ ಹೊಲಗಳಲ್ಲಿಯ ಬದುಗಳು ಕೊಚ್ಚಿಕೊಂಡು ಹೋಗಿದ್ದಲ್ಲದೆ, ಫಲವತ್ತಾದ ಮಣ್ಣು ಸಹ ಮಳೆ ನೀರಿನ ಜೊತೆಗೆ ಹಳ್ಳ ಸೇರುತ್ತಿದೆ. ಗ್ರಾಮದ ಯಡಹಳ್ಳಿ ಗ್ರಾಮಕ್ಕೆ ತೆರಳುವ ಮುಖ್ಯ ರಸ್ತೆಯ ಪಕ್ಕದಲ್ಲಿರುವ ಸುಮಾರು 12 ಎಕರೆ ಪ್ರದೇಶದ ಬೃಹತ್ ಕೆರೆಯು ನೀರಿನ ಒತ್ತಡಕ್ಕೆ 12 ಅಡಿ ಎತ್ತರದ ಒಡ್ಡು ಒಡೆದು ಪಕ್ಕದಲ್ಲಿರುವ ಹಿರೆಹಳ್ಳಕ್ಕೆ ಸೇರಿಕೊಂಡಿದೆ.
ಗ್ರಾಪಂ ಅಧ್ಯಕ್ಷ ಬಸೀರ ಅಹ್ಮದ ಮಾಳಗಿಮನಿ ಹಾಗೂ ಪಿಡಿಒ ಬಿ.ಎ. ಬಾವಾಕಾನವರ ಅವರು ಹಾನಿಯಾದ ಯಡಹಳ್ಳಿ ಕೆರೆಗೆ ಶುಕ್ರವಾರ ಭೇಟಿ ನೀಡಿ ಪರಿಶೀಲಿಸಿದರು. ಪಂಚಾಯಿತಿ ಮೂಲಕ ಕೆರೆಯ ರಕ್ಷಣೆಗೆ ಕೈಗೊಳ್ಳಬೇಕಾದ ಕ್ರಮದ ಬಗ್ಗೆ ಚರ್ಚಿಸಿದರು.
ಈ ವೇಳೆ ಪ್ರತಿಕ್ರಿಯೆ ನೀಡಿದ ಗ್ರಾಪಂ. ಅಧ್ಯಕ್ಷ ಬಸೀರಅಹ್ಮದ, ‘ನಿರಂತರವಾಗಿ ಮಳೆ ಸುರಿಯುತ್ತಿರುವುದರಿಂದ ಹಳ್ಳದ ಅಕ್ಕಪಕ್ಕ ರೈತರು, ಸಾರ್ವಜನಿಕರು ಅಪಾಯದ ಸ್ಥಳಗಳಿಗೆ ತೆರಳದಂತೆ ಡಂಗೂರ ಸಾರಲಾಗಿದೆ. ಹೊಲಗಳಲ್ಲಿ ಕೆಲಸ ನಿರ್ವಹಿಸುವವರು ಮಳೆ ಆರಂಭಕ್ಕೂ ಮುನ್ನ ಮನೆಗೆ ತೆರಳಬೇಕು ಎಂದು ತಿಳಿಸಿದ್ದಾರೆ. ಗ್ರಾಮ ಆಡಳಿತಾಧಿಕಾರಿ ಚೈತನ್ಯ ಮಳಿಯೆ, ಸೈಯದ್‌ಸಾಬ್ ಮದ್ನಿ, ಫಕೀರಪ್ಪ ಶಿವಳ್ಳಿ, ಬಸವರಾಜ ಕಣಿಕಿ ಇತರರಿದ್ದರು.