ಕೊಪ್ಪಳ: ಆತ್ಮಹತ್ಯೆಗೆ ಯತ್ನಿಸಿ ಕೋಮಾ ಸ್ಥಿತಿಗೆ ತಲುಪಿದ್ದ ಯುವತಿಗೆ ನಿರಂತರ 78 ದಿನ ಚಿಕಿತ್ಸೆ ನೀಡಿ ಗುಣಪಡಿಸುವ ಮೂಲಕ ನಗರದ ಜಿಲ್ಲಾಸ್ಪತ್ರೆಯ ವೈದ್ಯರು ಯುವತಿಗೆ ಮರು ಜನ್ಮ ನೀಡಿದ್ದಾರೆ.
ಕುಷ್ಟಗಿ ತಾಲೂಕಿನ ಗ್ರಾಮವೊಂದರ 23 ವರ್ಷದ ಯುವತಿ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಳು. ಕುಷ್ಟಗಿ ತಾಲೂಕು ಆಸ್ಪತ್ರೆಗೆ ದಾಖಲಾಗಿ ಪ್ರಾಥಮಿಕ ಚಿಕಿತ್ಸೆ ನಂತರ ಮೇ 8ರಂದು ಜಿಲ್ಲಾಸ್ಪತ್ರೆಗೆ ದಾಖಲಿಸಲಾಯಿತು. ದೇಹದ ಬಹುಭಾಗಕ್ಕೆ ವಿಷ ಹರಡಿದ್ದರಿಂದ ಸ್ಥಿತಿ ಚಿಂತಾಜನಕವಾಗಿತ್ತು. ಕೋಮಾ ಸ್ಥಿತಿ ತಲುಪಿ ಉಸಿರಾಟ ವೈಲ್ಯ ಕಂಡುಬಂತು. ವೈದ್ಯರ ಸಮಯ ಪ್ರಜ್ಞೆಯಿಂದ ವೆಂಟಿಲೇಟರ್ ಅಳವಡಿಸಿ ಶ್ವಾಸಕೋಶನಾಳ ಚಿಕಿತ್ಸೆ ಆರಂಭಿಸಿದರು. ನಿರಂತರ 64 ದಿನಗಳ ಕಾಲ ವೆಂಟಿಲೇಟರ್ನಲ್ಲಿಟ್ಟು ಚಿಕಿತ್ಸೆ ಮುಂದುವರಿಸಿದರು.
ಉಸಿರಾಟ ಸಮಸ್ಯೆ ಗುಣವಾಗುತ್ತಲೇ ವೆಂಟಿಲೇಟರ್ ತೆರವುಗೊಳಿಸಲಾಯಿತು. ಆಕ್ಸಿಜನ್ನಲ್ಲಿಟ್ಟು ಚಿಕಿತ್ಸೆ ಮುಂದುವರಿಸಲಾಯಿತು. ಬಳಿಕ ಪ್ರಜ್ಞೆ ಬಂದ ಯುವತಿ ಚೇತರಿಕೆ ಕಂಡಳು. 78ನೇ ದಿನದವರೆಗೂ ಚಿಕಿತ್ಸೆ ಮುಂದುವರೆಸಿದ ವೈದ್ಯರು ಸಂಪೂರ್ಣ ಗುಣವಾಗುವವರೆಗೆ ಚಿಕಿತ್ಸೆ ನೀಡಿದರು. ಮಂಗಳವಾರ ಜಿಲ್ಲಾಸ್ಪತ್ರೆಯಿಂದ ಬಿಡುಗಡೆ ಹೊಂದಿದ ಯುವತಿ ನಡೆದುಕೊಂಡೇ ಮನೆಯವವರೊಂದಿಗೆ ಹೊರ ನಡೆದಳು. ಇದನ್ನು ಕಂಡು ಕುಟುಂಬದವರು ಹರ್ಷಪಟ್ಟರು. ವೈದ್ಯರ ಕಾರ್ಯ ಶ್ಲಾಘಿಸಿದರು.
ಕಿಮ್ಸ್ ಸಾಮಾನ್ಯ ವೈದ್ಯಶಾಸ್ತ್ರ ವಿಭಾಗ ಮುಖ್ಯಸ್ಥ ಡಾ.ಉಮೇಶ ರಾಜೂರ, ಯೂನಿಟ್ ಮುಖ್ಯಸ್ಥ ಡಾ.ಕೃಷ್ಣ ಕುಮಾರ ನಾಯಕ, ವೈದ್ಯಾಧಿಕಾರಿಗಳಾದ ಡಾ.ಶಿವಪ್ರಸಾದ, ಡಾ.ಗವಿಸಿದ್ದೇಶ, ಡಾ.ವಿನಾಯಕ, ಡಾ.ನವೀದ ಖಾನ್ ಹಾಗೂ ಇತರ ಸಿಬ್ಬಂದಿ ತಂಡ ಚಿಕಿತ್ಸೆಯಲ್ಲಿ ಭಾಗಿಯಾಗಿ ಯುವತಿಗೆ ಮರು ಜನ್ಮ ನೀಡಿದೆ.
ನನ್ನ ಸಹೋದರಿ ಸಾವಿನ ಅಂಚಿನಲ್ಲಿದ್ದಳು, ಜಿಲ್ಲಾಸ್ಪತ್ರೆಯ ವೈದ್ಯರ ನಿರಂತ ಚಿಕಿತ್ಸೆ, ಪ್ರಯತ್ನದಿಂದ ಇಂದು ಸಾವು ಗೆದ್ದಿದ್ದಾಳೆ. ವೈದ್ಯಾಧಿಕಾರಿಗಳಿಗೆ ಹಾಗೂ ಸಿಬ್ಬಂದಿಗಳಿಗೆ ಧನ್ಯವಾದ. ನಿರುಪಾದೆಪ್ಪ. ಯುವತಿ ಸಹೋದರ.ನಿರುಪಾದೆಪ್ಪ. ಯುವತಿ ಸಹೋದರ.