ಜಿಲ್ಲೆ

ಪತಿಯಿಂದಲೇ ಪತ್ನಿ ಕೊಲೆ: ಕುಂಪಲದ ಮಹಿಳೆ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್

Udupi

ಉಳ್ಳಾಲ: ನಾಲ್ಕು ದಿನಗಳ ಹಿಂದೆ ಕುಂಪಲದಲ್ಲಿ ನಡೆದಿದ್ದ ಮಹಿಳೆಯ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ಪತಿಯೇ ದೊಣ್ಣೆಯಿಂದ ತಲೆಗೆ ಹೊಡೆದು ಕೊಲೆಗೈದಿರುವುದು ವಿಚಾರಣೆ ವೇಳೆ ಬೆಳಕಿಗೆ ಬಂದಿದೆ ಎಂದು ಪೊಲೀಸರು ನೀಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ಜೋಸೆಫ್ ಫ್ರಾನ್ಸಿಸ್(54)ನನ್ನು ಬಂಧಿಸಲಾಗಿದೆ.

ಕೊಚ್ಚಿ ನಿವಾಸಿ ಶೈಮಾ(44) ತನ್ನ ಪತಿ ಜೋಸೆಫ್ ಫ್ರಾನ್ಸಿಸ್ ಜತೆ ಕೆಲವು ಸಮಯಗಳಿಂದ ಉಳ್ಳಾಲ ಠಾಣಾ ವ್ಯಾಪ್ತಿಯ ಕುಂಪಲದಲ್ಲಿ ವಾಸವಾಗಿದ್ದರು. ಇವರ ನಡುವೆ ಆಗಾಗ ಜಗಳವಾತ್ತಿತ್ತು ಎನ್ನಲಾಗಿದ್ದು, ಮೇ 11ರಂದು ಮತ್ತೆ ಜಗಳ ನಡೆದಿತ್ತು. ಈ ಸಂದರ್ಭ ಕೋಪಗೊಂಡಿದ್ದ ಜೋಸೆಫ್ ಫ್ರಾನ್ಸಿಸ್, ಪತ್ನಿಯ ತಲೆಗೆ ದೊಣ್ಣೆಯಿಂದ ಹೊಡೆದಿದ್ದ ಎನ್ನಲಾಗಿದೆ. ನೋವಿನಿಂದ ನರಳಿದ ಶೈಮಾ ವಿಷ ಸೇವಿಸಿ ಗಂಭೀರ ಸ್ಥಿತಿಗೆ ತಲುಪಿದ್ದರು. ದೇರಳಕಟ್ಟೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದರೂ, ಅವರು ರಾತ್ರಿ ಮೃತಪಟ್ಟಿದ್ದರು. ಈ ಬಗ್ಗೆ ಶೈಮಾ ಅವರ ತಂದೆ ಜೋಸೆಫ್ ಉಳ್ಳಾಲ ಠಾಣೆಗೆ ದೂರು ನೀಡಿ ಮಗಳ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು.

ಪ್ರಕರಣ ದಾಖಲಿಸಿದ ಪೊಲೀಸರು ಜೋಸೆಫ್ ಫ್ರಾನ್ಸಿಸ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಪತ್ನಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆಂದು ತಿಳಿಸಿದರೂ ಅನುಮಾನಗೊಂಡ ಪೊಲೀಸರು ವಿಚಾರಣೆ ತೀವ್ರಗೊಳಿಸಿದ್ದರು.

ತಪ್ಪೊಪ್ಪಿಕೊಂಡ ಆರೋಪಿ: ಶನಿವಾರ ಶವ ಮಹಜರು ಪರೀಕ್ಷೆ ವರದಿ ಬಂದಿದೆ. ಇದರಲ್ಲಿ ಮಹಿಳೆ ವಿಷ ಸೇವಿಸಿರುವ ಬಗ್ಗೆ ಹಾಗೂ ತಲೆಗೆ ಗಂಭೀರ ಏಟು ಬಿದ್ದಿರುವ ಬಗ್ಗೆಯೂ ಉಲ್ಲೇಖಿಸಲಾಗಿದೆ. ಈ ಬಗ್ಗೆ ಪೊಲೀಸರು ತೀವ್ರ ವಿಚಾರಣೆ ನಡೆಸಿದ್ದು, ಪತ್ನಿಯ ತಲೆಗೆ ಹೊಡೆದಿರುವುದನ್ನು ಆರೋಪಿ ಜೋಸೆಫ್ ಫ್ರಾನ್ಸಿಸ್ ಒಪ್ಪಿಕೊಂಡ ಹಿನ್ನೆಲೆಯಲ್ಲಿ ಬಂಧಿಸಲಾಗಿದೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಹೆಚ್ಚುವರಿ ತನಿಖೆಗೆ ಪೊಲೀಸರು ಕಸ್ಟಡಿಗೆ ತೆಗೆದುಕೊಂಡಿದ್ದಾರೆ.