ಬಾಗಲಕೋಟೆ: ರಸ್ತೆ ಬದಿಯಲ್ಲಿ ಹತ್ತಾರು ಜನರ ಎದುರೇ ವಕೀಲೆಯೊಬ್ಬರ ಮೇಲೆ ವ್ಯಕ್ತಿಯೊಬ್ಬ ಗಂಭೀರವಾಗಿ ಹಲ್ಲೆ ನಡೆಸಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದ ವಿಡಿಯೋ ವೈರಲ್ ಆಗಿದೆ. ಮಾತ್ರವಲ್ಲ, ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಸಂಗೀತಾ ಸಿಕ್ಕೇರಿ ಎಂಬಾಕೆ ಹಲ್ಲೆಗೊಳಗಾದ ವಕೀಲೆ. ಮಹಾಂತೇಶ್ ಚೊಳಚಗುಡ್ಡ ಎಂಬಾತ ಬಂಧನಕ್ಕೆ ಒಳಗಾಗಿರುವ ಆರೋಪಿ. ಬಾಗಲಕೋಟೆಯಲ್ಲಿ ಇಂದು ಬೆಳಗ್ಗೆ ಈ ಘಟನೆ ನಡೆದಿತ್ತು. ಸಂಜೆಯೊಳಗಾಗಿ ಬಾಗಲಕೋಟೆ ಪೊಲೀಸರು ಆರೋಪಿಯನ್ನು ಪತ್ತೆ ಮಾಡಿ ಬಂಧಿಸಿದ್ದಾರೆ.
ರಸ್ತೆ ಬದಿಯಲ್ಲಿ ಸಾರ್ವಜನಿಕರ ಎದುರೇ ಸಂಗೀತಾ ಮೇಲೆ ಮಹಾಂತೇಶ್ ಹಲ್ಲೆ ನಡೆಸಿದ್ದು, ಒದೆ ಕೂಡ ಕೊಟ್ಟಿದ್ದಾನೆ. ಈ ಸಂದರ್ಭದಲ್ಲಿ ಆಕೆಯ ಜತೆಗಿದ್ದ ಪತಿಗೂ ಹಲ್ಲೆ ಮಾಡಿದ್ದಾನೆ. ಗಾಯಗೊಂಡ ಇಬ್ಬರನ್ನೂ ಬಳಿಕ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ಹಲ್ಲೆಯ ದೃಶ್ಯಾವಳಿ ಇರುವ ವಿಡಿಯೋ ವೈರಲ್ ಆಗಿದ್ದು, ಸಾರ್ವಜನಿಕರಿಂದ ವ್ಯಾಪಕ ಟೀಕೆ ಕೂಡ ವ್ಯಕ್ತವಾಗಿದೆ. ಆರೋಪಿ ಮಹಾಂತೇಶ್ನನ್ನು ಬಂಧಿಸಿದ್ದು ನ್ಯಾಯಾಲಯಕ್ಕೆ ಒಪ್ಪಿಸಲಾಗುವುದು ಎಂದು ಎಸ್ಪಿ ಲೋಕೇಶ್ ಜಗಲಾಸರ್ ತಿಳಿಸಿದ್ದಾರೆ.
ಮತ್ತೊಂದೆಡೆ ಬಾಗಲಕೋಟೆ ಜಿಲ್ಲಾ ಆಸ್ಪತ್ರೆಗೆ ಮಾಜಿ ಸಚಿವ ಎಚ್.ವೈ. ಮೇಟಿ ಸೇರಿ ಕಾಂಗ್ರೆಸ್ನ ಹಲವು ಮುಖಂಡರು ಭೇಟಿ ನೀಡಿ ಆರೋಗ್ಯ ವಿಚಾರಿಸಿ, ಹಲ್ಲೆ ಘಟನೆಯನ್ನು ಖಂಡಿಸಿದ್ದಾರೆ.