ಜಿಲ್ಲೆ

ನೆಟ್ವರ್ಕ್​ ಅರಸಿ ಗುಡ್ಡಕ್ಕೆ ಹೋಗುತ್ತಿದ್ದ ಯುವತಿ; ಅಡ್ಡ ಹಾಕಿ ಮೊಬೈಲ್​ಫೋನ್​ ಕಿತ್ಕೊಂಡು ಕಿರುಕುಳ ಕೊಟ್ಟ..

Webdesk - Ravikanth

ಶಿವಮೊಗ್ಗ: ಆನ್​ಲೈನ್​ ಕ್ಲಾಸ್​ಗೆಂದು ನೆಟ್ವರ್ಕ್ ಹುಡುಕುತ್ತ ಗುಡ್ಡ ಪ್ರದೇಶದತ್ತ ಹೋಗುತ್ತಿದ್ದ ಯುವತಿಯನ್ನು ಯುವಕನೊಬ್ಬ ಅಡ್ಡಗಟ್ಟಿ ಮೊಬೈಲ್​ ಫೋನ್​ ಕಸಿದುಕೊಂಡು ಕಿರುಕುಳ ಕೊಟ್ಟ ಪ್ರಕರಣ ನಡೆದಿದೆ. ಊರಿನವರಿಗೆ ವಿಷಯ ತಿಳಿಯುತ್ತಿದ್ದಂತೆ ಮೊಬೈಲ್​ಫೋನ್​ ಹಾಗೂ ಬೈಕ್ ಬಿಟ್ಟು ಪರಾರಿಯಾಗಿದ್ದಾನೆ.

ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಮಾರಲಗೋಡು ಸಮೀಪ ಈ ಘಟನೆ ನಡೆದಿದೆ. ಆನ್​​ಲೈನ್​ ಕ್ಲಾಸ್​​ಗಾಗಿ ಯುವತಿಯೊಬ್ಬಳು ಮನೆಯಿಂದ ಅನತಿ ದೂರದ ಎತ್ತರದ ಪ್ರದೇಶಕ್ಕೆ ಹೋಗುತ್ತಿದ್ದಾಗ ಯುವಕನೊಬ್ಬ ದಾರಿಯಲ್ಲಿ ಅಡ್ಡ ಹಾಕಿ ಕಿರುಕುಳ ನೀಡಿದ್ದಾನೆ.

ಈ ಬಗ್ಗೆ ವಿಷಯ ತಿಳಿದು ಸ್ಥಳೀಯರು ಧಾವಿಸುತ್ತಿದ್ದಂತೆ ಮೊಬೈಲ್​ಫೋನ್​ ಹಾಗೂ ಬೈಕ್ ಬಿಟ್ಟು ಯುವಕ ಪರಾರಿಯಾಗಿದ್ದಾನೆ. ಕಿರುಕುಳ ಕೊಟ್ಟವ ಸಾಗರ ತಾಲೂಕಿನ ಅರಳಗೋಡು ಗ್ರಾಮದ ಯುವಕ ಎನ್ನಲಾಗಿದೆ. ಕಿರುಕುಳ ಕೊಟ್ಟವನಿಗಾಗಿ ಈಗ ಸ್ಥಳೀಯರು ಹುಡುಕಾಟ ಆರಂಭಿಸಿದ್ದಾರೆ. ಕಾರ್ಗಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಮಲೆನಾಡು ಭಾಗದಲ್ಲಿ ಆನ್​ಲೈನ್​ ಕ್ಲಾಸ್ ಹಾಗೂ ವರ್ಕ್ ಫ್ರಂ ಹೋಮ್​ನಲ್ಲಿರುವವರು ನೆಟ್ವರ್ಕ್​ ಹುಡುಕಿಕೊಂಡು ಗುಡ್ಡ ಏರುವ ಪರಿಸ್ಥಿತಿ ಸಾಮಾನ್ಯವಾಗಿದೆ. ನೆಟ್ವರ್ಕ್​ಗಾಗಿ ಈವರೆಗೆ ರೂಪಿಸಿದ ಎಲ್ಲ ಹೋರಾಟಗಳು ವ್ಯರ್ಥ‌ವಾಗಿವೆ. ಶರಾವತಿ ಹಿನ್ನೀರವಾಸಿಗಳ ಬೇಡಿಕೆಯನ್ನು ಪರಿಗಣಿಸದೆ ಜನಪ್ರತಿನಿಧಿಗಳು ಗಾಳಿಗೆ ತೂರಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.