ಜಿಲ್ಲೆ

ಪಪ್ಪಾಯ ತಿಂದು ಹೊಟ್ಟೆ ನೋವಿನಿಂದ ನರಳಿ ನರಳಿ ಮೃತಪಟ್ಟ ಮಹಿಳೆ

Udupi

ಉಡುಪಿ: ಕಳೆದ ವಾರ ಪಪ್ಪಾಯ ತಿಂದು ತೀವ್ರ ಅಸ್ವಸ್ಥರಾಗಿ ಸ್ಥಳೀಯ ಆದರ್ಶ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಾಗಿದ್ದ ಮಹಿಳೆಯೊಬ್ಬರು ಶನಿವಾರ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.

ಮೃತರನ್ನು 82 ಕುದಿ ಗ್ರಾಮದ ದೇವರಗುಂಡ ನಿವಾಸಿ ಶ್ರೀಮತಿ (43) ಎಂದು ಗುರುತಿಸಲಾಗಿದೆ. ಅವರ ಮನೆಯ ಹಿಂಬದಿಯಲ್ಲಿ ಒಂದು ಗೋಡಂಬಿ ಫ್ಯಾಕ್ಟರಿ ಇದೆ. ಆ ಫ್ಯಾಕ್ಟರಿಯವರು ಇಲಿಗಳನ್ನು ಸಾಯಿಸುವುದಕ್ಕಾಗಿ ಪಪ್ಪಾಯ ಹಣ್ಣಿನಲ್ಲಿ ಇಲಿ ಪಾಷಾಣ ಬೆರೆಸಿ ಅಕ್ಟೋಬರ್ 19ರಂದು ಇರಿಸಿದ್ದರು. ಮನೆಯ ಹಿಂದೆ ಬಿದ್ದಿದ್ದ ಪಪ್ಪಾಯ ಹಣ್ಣನ್ನು ಎತ್ತಿಕೊಂಡು ಮನೆಗೆ ಬಂದಿದ್ದ ಶ್ರೀಮತಿ ಅದನ್ನು ತುಂಡು ಮಾಡಿ ತಿಂದಿದ್ದರು. ಅದರಲ್ಲಿ ಇಲಿ ಪಾಷಾಣ ಬೆರೆಸಿಟ್ಟಿರುವ ವಿಚಾರ ಅವರಿಗೆ ತಿಳಿದಿರಲಿಲ್ಲ.

ಪಪ್ಪಾಯ ತಿಂದ ಕೂಡಲೇ ಶ್ರೀಮತಿ ಹೊಟ್ಟೆ ನೋವಿನಿಂದ ನರಳಿದ್ದರು. ಕೂಡಲೇ ಅವರನ್ನು ಸ್ಥಳೀಯ ಆದರ್ಶ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಅವರು ಶನಿವಾರ ಮೃತಪಟ್ಟಿದ್ದಾರೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.