ಮಂಡ್ಯ: ಡಿಎಂಸಿ ಪ್ರೊಡಕ್ಷನ್ ನಿರ್ಮಿಸಿರುವ ಸಾಮಾಜಿಕ ಕಳಕಳಿಯುಳ್ಳ ಲೇಡಿಸ್‌ಬಾರ್ ಚಿತ್ರ ಫೆ.16ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ ಎಂದು ಚಿತ್ರ ನಿರ್ದೇಶಕ ಎ.ಎನ್.ಮುತ್ತು ತಿಳಿಸಿದರು.
ಪ್ರಸ್ತುತ ನಡೆಯುವ ಸನ್ನಿವೇಶದೊಂದಿಗೆ ಮಹಿಳೆಯರಿಗಾಗಿ ಪ್ರತ್ಯೇಕ ಬಾರ್ ಇದ್ದರೆ ಏನೆಲ್ಲ ಅವಾಂತರ ನಡೆಯುತ್ತವೆ ಎಂಬುದರ ಬಗ್ಗೆ ಕಥಾ ಹಂದರ ಹೊಂದಿದೆ. ಪ್ರಸ್ತುತ ದಿನಗಳಲ್ಲಿ ಹೆಣ್ಣು ಮಕ್ಕಳು ಸಹ ಬಾರ್‌ನಲ್ಲಿ ಹೇಗೆ ವರ್ತಿಸುತ್ತಾರೆ ಎಂಬುದನ್ನು ಚಿತ್ರಿಸಲಾಗಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಬೆಂಗಳೂರಿನಲ್ಲಿ ಶೇ.75ರಷ್ಟು ಚಿತ್ರೀಕರಣ ಮಾಡಲಾಗಿದೆ. ಉಳಿದಂತೆ ಮದ್ದೂರು ಮತ್ತು ಮಾಗಡಿಯಲ್ಲಿ ನಡೆದಿದೆ. ಚಿತ್ರದಲ್ಲಿ ನಾಲ್ಕು ಹಾಡು, ಮೂರು ಸಾಹಸ ದೃಶ್ಯಗಳಿವೆ. ಚಿತ್ರಕಥೆಯೇ ಪ್ರಧಾನವಾಗಿದೆ ಎಂದರು.
ಚಿತ್ರನಿರ್ಮಾಪಕ ಟಿ.ಎಂ. ಸೋಮಶೇಖರ್ ಮಾತನಾಡಿ, ಮದ್ದೂರಿನ ತೈಲೂರಿನವನಾದ ನಾನು ರೈತ ಕುಟುಂಬದಿಂದ ಬಂದಿದ್ದು, ಚಿತ್ರೋದ್ಯಮದಲ್ಲಿ ಕೆಲಸ ಮಾಡಿದ್ದೇನೆ. ಇದೀಗ ನಾನೇ ಚಿತ್ರ ನಿರ್ಮಾಣ ಮಾಡಬೇಕೆಂಬ ಬಯಕೆಯಿಂದ ಲೇಡಿಸ್ ಬಾರ್ ಬಂಡವಾಳ ಹೂಡಿದ್ದೇನೆ. ಸಾಮಾಜಿಕ ಕಳಕಳಿ ಇಟ್ಟುಕೊಂಡು ಚಿತ್ರಮಾಡಿದ್ದೇವೆ. ಇದೊಂದು ವಿಭಿನ್ನ ಚಿತ್ರಕಥೆಯನ್ನು ಹೊಂದಿದೆ. ರಾಜ್ಯಾದ್ಯಂತ 100ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಎಂದು ಮನವಿ ಮಾಡಿದರು.
ನಟಿಯರಾದ ಪ್ರೇರಣಾ, ಶಿವಾನಿಗೌಡ, ಛಾಯಾಗ್ರಾಹಕ ವೀನಸ್ ಮೂರ್ತಿ ಇದ್ದರು.