ಜಿಲ್ಲೆ

ಮತ್ತೆ 'ಸೈಲೆಂಟ್' ಸದ್ದು: ದೇವಾಲಯದಲ್ಲಿ ಭಕ್ತರಿಗೆ ಕೊಡುವ ಲಡ್ಡು ಪೊಟ್ಟಣಗಳ ಮೇಲೂ ರೌಡಿ ಸುನೀಲನ ಚಿತ್ರ!

Webdesk - Ravikanth

ಬೆಂಗಳೂರು: ಕೆಲವು ದಿನಗಳ ಹಿಂದೆ ರಕ್ತದಾನ ಶಿಬಿರದಲ್ಲಿ ಬಿಜೆಪಿಯ ಶಾಸಕರು, ಸಂಸದರೊಂದಿಗೆ ವೇದಿಕೆ ಹಂಚಿಕೊಂಡು ಸುದ್ದಿಯಾಗಿದ್ದ ನಗರದ ಕುಖ್ಯಾತ ರೌಡಿ ಶೀಟರ್ ಸೈಲೆಂಟ್ ಸುನೀಲ ಮತ್ತೊಮ್ಮೆ ಸುದ್ದಿಯಲ್ಲಿದ್ದಾನೆ. ಮಹಾಶಿವರಾತ್ರಿ ಹಿನ್ನೆಲೆಯಲ್ಲಿ ಚಾಮರಾಜಪೇಟೆಯ ದೇವಾಲಯಗಳಲ್ಲಿ ಭಕ್ತರಿಗೆ ಸೈಲೆಂಟ್ ಸುನಿಲನ ಕಡೆಯಿಂದ ಲಡ್ಡು ವಿತರಣೆ ಜೋರಾಗಿ ನಡೆದಿದೆ.

ಸದ್ಯ ರೌಡಿಸಂ ಬಿಟ್ಟಿರುವುದಾಗಿ ಹೇಳುತ್ತಲೇ ಚಾಮರಾಜಪೇಟೆ ವ್ಯಾಪ್ತಿಯಲ್ಲಿ ಸಕ್ರಿಯವಾಗಿರುವ ಸೈಲೆಂಟ್ ಸುನೀಲ ಭಕ್ತರಿಗೆ ಲಡ್ಡು ಪ್ರಸಾದ ಹಂಚಿದ್ದಾನೆ. ಲಡ್ಡು ಪ್ರಸಾದದ ಕವರ್‌ ಮೇಲೆ ಸೈಲೆಂಟ್ ಸುನೀಲನ ಫೋಟೋ ಜತೆ ಸಮಾಜ ಸೇವಕರು ಎಂಬ ಅಡಿಬರಹ ರಾರಾಜಿಸಿವೆ. ಈ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.

ಇಷ್ಟು ದಿನ ಹಳೆಯ ಪ್ರಕರಣಗಳಿಂದಾಗಿ ಪೊಲೀಸ್ ಠಾಣೆ, ಕೋರ್ಟ್ ಅಂತ ಅಲೆದಾಡುತ್ತಿದ್ದ ಸುನೀಲ ಸೈಲೆಂಟಾಗಿ ಸಮಾಜಮುಖಿ ಕಾರ್ಯಗಳು, ಟೆಂಪಲ್ ರನ್‌ನಲ್ಲಿ ತೊಡಗಿರುವುದರಿಂದ ಚುನಾವಣಾ ಅಖಾಡಕ್ಕೆ ಧುಮುಕಲಿದ್ದಾನೆ ಎಂಬ ಮಾತಿಗೆ ಇದು ಮತ್ತಷ್ಟು ಪುಷ್ಟಿ ನೀಡುತ್ತಿದೆ.

ಇತ್ತೀಚಿಗೆ ಚಾಮರಾಜಪೇಟೆಯಲ್ಲಿ ಆಯೋಜಿಸಿದ್ದ ರಕ್ತದಾನ ಶಿಬಿರದಲ್ಲಿ ಬಿಜೆಪಿ ಸಂಸದರಾದ ತೇಜಸ್ವಿ ಸೂರ್ಯ, ಪಿ.ಸಿ.ಮೋಹನ್, ಚಿಕ್ಕಪೇಟೆ ಶಾಸಕ ಉದಯ ಗರುಡಾಚಾರ್ ಜತೆ ಕೇಸರಿ ಶಾಲು ಧರಿಸಿ ಸೈಲೆಂಟ್ ಸುನೀಲ ವೇದಿಕೆ ಹಂಚಿಕೊಂಡಿದ್ದ. ಆ ವಿಡಿಯೋ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದ್ದಲ್ಲದೇ ಪ್ರತಿಪಕ್ಷಗಳ ಟೀಕೆಗೆ ಕಾರಣವಾಗಿತ್ತು.