ಜಿಲ್ಲೆ

ಮೆಕ್ಕೆಜೋಳ ಬೆಳೆಗೆ ಲದ್ದಿ ಹುಳು ಕಾಟ

ಬಸವರಾಜ ವೀರಪ್ಪ ಗರಗ

ಕರಿಯಪ್ಪ ಅರಳಿಕಟ್ಟಿ ರಾಣೆಬೆನ್ನೂರ

ಮಳೆ ಕೊರತೆಯಿಂದ ಮೆಕ್ಕೆಜೋಳ ಬೆಳೆ ಒಣಗಿ ಹಾಳಾಗುತ್ತಿರುವುದು ಒಂದೆಡೆಯಾದರೆ, ಹಾಗೂ ಅಲ್ಪಸ್ವಲ್ಪ ಮಳೆ ನೀರನ್ನು ಅವಲಂಬಿಸಿ, ಬೇರೆ ಯಾವುದೋ ಮೂಲದಿಂದ ನೀರಾವರಿ ವ್ಯವಸ್ಥೆ ಮಾಡಿಕೊಂಡು ಬೆಳೆದ ಮೆಕ್ಕೆಜೋಳ ಬೆಳೆಗೆ ಲದ್ದಿ ಹುಳುಗಳ ಕಾಟ ಶುರುವಾಗಿದೆ. ಇದು ಬೆಳೆಗಾರರ ನಿದ್ದೆಗೆಡಿಸಿದೆ.

ತಾಲೂಕಿನ ಅಂಕಸಾಪುರ, ಬೇಲೂರು, ಮೇಡ್ಲೇರಿ ಸೇರಿ ಹಲವು ಭಾಗದಲ್ಲಿ ನೀರಾವರಿ ಮಾಡಿಕೊಂಡು ಮೆಕ್ಕೆಜೋಳ ಬೆಳೆಯಲಾಗಿದೆ. ಅವುಗಳಿಗೆ ಲದ್ದಿ ಹುಳು ಬಾಧೆ ಶುರುವಾಗಿದೆ. ತೆನೆ ಕಟ್ಟುತ್ತಿರುವ ಮೆಕ್ಕೆಜೋಳ ಬೆಳೆಯನ್ನು ನಾಶಪಡಿಸುತ್ತಿವೆ. ಕಳೆದ ಮೂರು ವರ್ಷಗಳಿಂದ ಸತತವಾಗಿ ಲದ್ದಿ ಹುಳು ಬಾಧೆ ಮೆಕ್ಕೆಜೋಳ ಬೆಳೆಯುವ ರೈತರನ್ನು ಕಾಡುತ್ತಿದೆ. ಪ್ರಸಕ್ತ ವರ್ಷವೂ ಈ ಕೀಟದ ಕಾಟ ಶುರುವಾಗಿದೆ. ಹೀಗಾಗಿ, ಮೆಕ್ಕೆಜೋಳ ಕೈಗೆ ಸಿಗಲಾರದು ಎಂಬ ಕೊರಗು ರೈತರನ್ನು ಕಾಡುತ್ತಿದೆ.

ನಷ್ಟದ ಕಾರಣಕ್ಕೆ ಹತ್ತಿ ಬೆಳೆಯುವುದನ್ನು ಕೈ ಬಿಟ್ಟು ಮೆಕ್ಕೆಜೋಳ ಬೆಳೆಯುತ್ತಿರುವ ರೈತರಿಗೆ ಲದ್ದಿ ಹುಳುಗಳು ಇನ್ನಿಲ್ಲದ ಕಾಟ ಕೊಡುತ್ತಿವೆ. ಸಂಜೆ, ರಾತ್ರಿ ಸಮಯದಲ್ಲಿ ಮೆಕ್ಕೆಜೋಳದ ಎಲೆಗಳ ಮೇಲೆ ಸಮಾರೋಪಾದಿಯಲ್ಲಿ ದಾಳಿ ಮಾಡುವ ಲದ್ದಿ ಹುಳುಗಳ ನಿಯಂತ್ರಣ ದೊಡ್ಡ ಸವಾಲಾಗಿದೆ. ಲದ್ದಿ ಹುಳು ಬಾಧೆ ವಿವಿಧ ಗ್ರಾಮಗಳಿಗೂ ಹರಡುತ್ತಿದ್ದು, ಬೆಳೆಗಾರರ ಚಿಂತೆಯನ್ನು ಇಮ್ಮಡಿಗೊಳಿಸಿದೆ.

ಆಸೆಗೆ ತಣ್ಣಿರು: ಬಹುತೇಕ ರೈತರು ಹತ್ತಿ, ಸೂರ್ಯಕಾಂತಿ, ಶೇಂಗಾ ಬೆಳೆಗಳನ್ನು ಕೈಬಿಟ್ಟು ಅಧಿಕ ಲಾಭ ಎನ್ನುವ ಕಾರಣ ಮೆಕ್ಕೆಜೋಳ ಬೆಳೆಯನ್ನೇ ಬೆಳೆದಿದ್ದಾರೆ. ಹೀಗಾಗಿ, ತಾಲೂಕಿನಲ್ಲಿ ಪ್ರಸಕ್ತ ವರ್ಷ 42 ಸಾವಿರಕ್ಕೂ ಅಧಿಕ ಹೆಕ್ಟೇರ್ ಪ್ರದೇಶದಲ್ಲಿ ಮೆಕ್ಕೆಜೋಳ ಬಿತ್ತನೆಯಾಗಿದೆ.

ಜುಲೈನಲ್ಲಿ ಚೆನ್ನಾಗಿ ಮಳೆ ಸುರಿದ ಕಾರಣ ಜೂನ್​ನಲ್ಲಿ ಬೀಜ ಬಿತ್ತನೆ ಮಾಡಿದ ಮೆಕ್ಕೆಜೋಳ ಹಾಗೂ ನೀರಾವರಿ ಮಾಡಿಕೊಂಡು ಬೆಳೆದಿರುವ ಮೆಕ್ಕೆಜೋಳ ಬಲಿಷ್ಠವಾಗಿ ಬೆಳೆದಿದ್ದು, ತೆನೆ ಕೂಡ ಉತ್ತಮವಾಗಿ ಕಟ್ಟಿದೆ. ಹೀಗಾಗಿ, ಈ ಬಾರಿ ಉತ್ತಮ ಬೆಳೆ ಬರುವ ನಿರೀಕ್ಷೆಯಲ್ಲೂ ಇದ್ದರು ರೈತರು. ಆದರೆ, ಲದ್ದಿ ಹುಳು ಕಾಟ ಶುರುವಾಗಿದ್ದು, ರೈತರ ಆಸೆಗೆ ತಣ್ಣೀರು ಎರಚಿದಂತಾಗುತ್ತಿದೆ. ಮತ್ತೊಂದೆಡೆ ಜುಲೈ ಮಳೆ ನಂತರ ಬಿತ್ತನೆ ಮಾಡಿದ ಮೆಕ್ಕೆಜೋಳ ಸಂಪೂರ್ಣ ಒಣಗಿ ಈಗಾಗಲೇ ಹಾಳಾಗಿ ಹೋಗಿದೆ.

ಹುಳು ಹತೋಟಿಗೆ ಹೀಗೆ ಮಾಡಿ: ಲದ್ದಿ ಹುಳು ಕಾಟ ತಡೆಯಲು ರೈತರು ಪ್ರತಿ ಹೆಕ್ಟೇರ್​ಗೆ 50 ಕೆ.ಜಿ. ಭತ್ತದ ತೌಡು, 5 ಕೆ.ಜಿ. ಬೆಲ್ಲ, 625 ಎಂ.ಎಲ್. ಮಾನೋಕ್ರೋಟೊಫಾಸ್, 10 ಲೀ. ನೀರು ತೆಗೆದುಕೊಂಡು ಬೆಲ್ಲವನ್ನು ನೀರಿನಲ್ಲಿ ಕರಗಿಸಿ ಮಾನೋಕ್ರೋಟೊಫಾಸ್ ಔಷಧ ಮತ್ತು ಭತ್ತದ ತೌಡನ್ನು ನೀರಿನಲ್ಲಿ ಬೆರೆಸಿ ಚೆನ್ನಾಗಿ ಮಿಶ್ರಣ ಮಾಡಿ ರಾತ್ರಿಯಿಡಿ ಕಳಿಯಲು ಬಿಡಬೇಕು. ಮರುದಿನ ಸಂಜೆ 5 ಗಂಟೆಗೆ ಕೈಕವಚ ಧರಿಸಿಕೊಂಡು ಮಿಶ್ರಣ ಮಾಡಿದ ಔಷಧವನ್ನು ಬೆಳೆಗಳಿಗೆ ಸಿಂಪಡಿಸಬೇಕು. ಜತೆಗೆ ಒಂದು ಜಮೀನಿನಿಂದ ಮತ್ತೊಂದು ಜಮೀನಿಗೆ ಹುಳು ಬಾರದಂತೆ ತಡೆಯಲು ಜಮೀನಿನ ಬದುನಲ್ಲಿ 2 ಅಡಿ ಗುಂಡಿ ತೋಡಿದರೆ, ಹುಳು ಹಾವಳಿ ತಡೆಗಟ್ಟಬಹುದು ಎಂದು ಕೃಷಿ ಅಧಿಕಾರಿಗಳು ಸಲಹೆ ನೀಡಿದ್ದಾರೆ.

ಒಂದು ವಾರದಿಂದ ನಮ್ಮ ಭಾಗದಲ್ಲಿ ಮೆಕ್ಕೆಜೋಳ ಬೆಳೆಗೆ ಲದ್ದಿ ಹುಳು ಬಾಧೆ ತಗುಲಿದೆ. ನಿಯಂತ್ರಣಕ್ಕೆ ಸೂಕ್ತ ಔಷಧ ಸಿಂಪಡಣೆ ಮಾಡಿದರೂ ಹುಳುಗಳ ಕಾಟ ದೂರ ಮಾಡಲು ಸಾಧ್ಯವಾಗುತ್ತಿಲ್ಲ. ಬೆಳೆದು ನಿಂತ ಮೆಕ್ಕೆಜೋಳ ಸಂರಕ್ಷಣೆ ಮಾಡಿಕೊಳ್ಳುವುದು ದೊಡ್ಡ ಸವಾಲಾಗಿದೆ. ಕೃಷಿ ಅಧಿಕಾರಿಗಳು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು. | ದಿಳ್ಳೆಪ್ಪ ಸತ್ಯಪ್ಪನವರ ಅಂಕಸಾಪುರ ರೈತ
ಲದ್ದಿ ಹುಳು ಹತೋಟಿಗಾಗಿ ರೈತರಿಗೆ ಉಪಯುಕ್ತ ಸಲಹೆ ನೀಡಲಾಗಿದೆ. ಹುಳುಗಳ ನಿಯಂತ್ರಣಕ್ಕಾಗಿ ಸಾಮೂಹಿಕ ಔಷಧ ಸಿಂಪಡಣೆಗೆ ಅಧಿಕ ಒತ್ತು ನೀಡಬೇಕಾಗುತ್ತದೆ. ಆದ್ದರಿಂದ ರೈತರು ಕೃಷಿ ಇಲಾಖೆಯಿಂದ ಸೂಚಿಸುವ ಮಾರ್ಗಸೂಚಿಯಂತೆ ಔಷಧ ಸಿಂಪಡಣೆ ಮಾಡಬೇಕು. | ಶಿವಾನಂದ ಹಾವೇರಿ ಕೃಷಿ ತಾಂತ್ರಿಕ ಅಧಿಕಾರಿ ರಾಣೆಬೆನ್ನೂರ