ಹುಬ್ಬಳ್ಳಿ: ಧಾರವಾಡ ಜಿಲ್ಲೆಯಲ್ಲಿ ಕಳೆದೆರಡು ದಿನಗಳಿಂದ ಸುರಿದ ವರ್ಷಧಾರೆಗೆ ಗ್ರಾಮೀಣ ಜನರು ನಲುಗಿ ಹೋಗಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಅವರು ಶುಕ್ರವಾರ ಮಳೆ ಹಾನಿ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಶುಕ್ರವಾರ ಬೆಳಗ್ಗೆ ನಗರದಿಂದ ವಾರ್ತಾ ಇಲಾಖೆಯ ವಾಹನದಲ್ಲಿಯೇ ಪತ್ರಕರ್ತರ ಜತೆಯಲ್ಲಿ ಪ್ರಯಾಣ ಬೆಳೆಸಿದ ಸಚಿವ ಲಾಡ್ ಅವರು, ಕುಂದಗೋಳ ತಾಲೂಕಿನ ವಿವಿಧ ಕಡೆಗಳಲ್ಲಿ ಪರಿಶೀಲನೆ ನಡೆಸಿದರು.
ಕುಂದಗೋಳ ತಾಲೂಕಿನ ಹಂಚಿನಾಳ ಬಳಿ ಹಳ್ಳದಲ್ಲಿ ಟ್ರಾಕ್ಟರ್ ಸಮೇತ ಸಿಲುಕಿ ಗಾಯಗೊಂಡು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವಾಸು ಹೈಬತ್ತಿ ಅವರ ಆರೋಗ್ಯ ವಿಚಾರಿಸಿದರು. ಘಟನೆಯಲ್ಲಿ ಮೃತಪಟ್ಟ ಶಿವಯ್ಯ ವಟ್ನಾಳಮಠ ಅವರ ಮನೆಗೆ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದರು.
ಈ ಸಮಯದಲ್ಲಿ ಐದು ಲಕ್ಷ ರೂ. ಪರಿಹಾರದ ಆದೇಶ ಪತ್ರ ನೀಡಿದರು. ಹಂಚಿನಾಳ ಬಳಿ ಹಳ್ಳದ ಹರಿವಿನ ಪ್ರದೇಶವನ್ನು ವೀಕ್ಷಣೆ ಮಾಡಿದರು.
ಜನರಲ್ಲಿ ಜಾಗೃತಿ ಅಗತ್ಯ:
ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಲಾಡ್ ಅವರು, ಬುಧವಾರ ರಾತ್ರಿಯಿಂದ ಈವರೆಗೆ ಸುರಿದ ಮಳೆಗೆ ಜಿಲ್ಲೆಯಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಜಿಲ್ಲೆಯಾದ್ಯಂತ 130 ಮನೆಗಳಿಗೆ ಹಾನಿಯಾಗಿದೆ. ಮಳೆಗಾಲದಲ್ಲಿ ಸಹಜವಾಗಿ ಬಯಲು ಸೀಮೆಯ ಹಳ್ಳಗಳು ತುಂಬಿ ಹರಿಯುತ್ತವೆ. ಹೀಗಾಗಿ ರೈತರು, ಸಾರ್ವಜನಿಕರು ಜಾಗೃತಿ ವಹಿಸಬೇಕು. ಒಂದಿಷ್ಟು ನೀರಿನ ಪ್ರಮಾಣ ಹೆಚ್ಚಾದರೆ ದಾಟುವ ಸಾಹಸ ಮಾಡಬಾರದು ಎಂದು ಮನವಿ ಮಾಡಿದರು.
ಹಾನಿಯಾದ ಮನೆಗಳನ್ನು ಅಧಿಕಾರಿಗಳು ಪರಿಶೀಲನೆ ಮಾಡುವರು. ಶೀಘ್ರ ಪರಿಹಾರ ವಿತರಣೆ ಮಾಡಲಾಗುವುದು. ಜಿಲ್ಲೆಯಲ್ಲಿ ಇನ್ನೂ ಕೆಲ ದಿನ ಹೆಚ್ಚಿನ ಮಳೆಯಾಗುವ ಸಾಧ್ಯತೆ ಇದೆ. ಜಿಲ್ಲಾಡಳಿತ ಸೂಚಿಸುವ ಮುಂಜಾಗ್ರತಾ ಕ್ರಮಗಳನ್ನು ಸಾರ್ವಜನಿಕರು ಅನುಸರಿಸಬೇಕು ಎಂದರು.
ಶ್ರೀ ಸೇತುವೆ ನಿರ್ಮಾಣ:
ಘಟನೆ ನಡೆದ ಹಳ್ಳಕ್ಕೆ ಶ್ರೀ ಸೇತುವೆ ನಿರ್ಮಿಸುವ ಕುರಿತು ಅಧಿಕಾರಿಗಳಿಗೆ ಸೂಚಿಸಲಾಗುವುದು ಎಂದ ಸಚಿವರು, ಬಯಲು ಸೀಮೆಯಲ್ಲಿ ಹರಿಯುವ ಹಳ್ಳಗಳಿಗೆ ಬಹಳಷ್ಟು ಕಡೆ ಸೇತುವೆಗಳ ಅವಶ್ಯಕತೆ ಇದೆ. ರಾಜ್ಯದ ಅನೇಕ ಶಾಸಕರು ಈ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದಾರೆ. ಧಾರವಾಡ ಜಿಲ್ಲೆಯಲ್ಲಿ ತೀವ್ರ ಅಗತ್ಯ ಇರುವ ಕಡೆ ಸೇತುವೆ ನಿರ್ಮಿಸಲಾಗುವುದು. ಇದಕ್ಕಾಗಿ ಸಂಬಂಧಪಟ್ಟ ಸಚಿವರನ್ನು ಭೇಟಿ ಮಾಡುವೆ ಎಂದರು.
ಪ್ರವಾಹ ಸಂದರ್ಭದಲ್ಲಿ ಹಳ್ಳದ ಅಕ್ಕ ಪಕ್ಕ ಹಾನಿಗೀಡಾಗುವ ಜಮೀನುಗಳ ಮಾಲೀಕರಿಗೆ ಸೂಕ್ತ ಪರಿಹಾರ ನೀಡಲು ಕ್ರಮ ಜರುಗಿಸಲಾಗುವುದು ಎಂದು ಉತ್ತರಿಸಿದರು.
ಅಗಲೀಕರಣಕ್ಕೆ ಅಡ್ಡಿ: ಜಿಲ್ಲೆಯಲ್ಲಿನ ಹಳ್ಳಗಳ ಅಗಲೀಕರಣಕ್ಕೆ ಹಲವು ಸಮಸ್ಯೆಗಳು ಎದುರಾಗುತ್ತಿವೆ. ಅಧಿಕಾರಿಗಳು ಜೆಸಿಬಿ ಸಮೇತ ಬಂದಾಗ ರೈತರು ತಮ್ಮ ಬದುವಿನಲ್ಲಿ ಕೆಲಸ ಮಾಡಲು ಬಿಡುವುದಿಲ್ಲ. ಇದರಿಂದ ಸಮಸ್ಯೆ ಮುಂದುವರಿಯುತ್ತಿದೆ. ಆದಾಗ್ಯೂ ಹಳ್ಳಗಳಲ್ಲಿ ಸಂಗ್ರಹವಾಗಿರುವ ಹೂಳು ತೆಗೆಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಬೆಣ್ಣೆ ಹಳ್ಳ ಹೂಳೆತ್ತಲು ಈಗಾಗಲೇ ಸರ್ಕಾರ 200 ಕೋಟಿ ರೂ. ಬಿಡುಗಡೆ ಮಾಡಿದೆ ಎಂದರು.
ಶಾಸಕ ಎಂ.ಆರ್. ಪಾಟೀಲ, ಮಾಜಿ ಶಾಸಕ ಎಂ.ಎಸ್. ಅಕ್ಕಿ, ಕಂದಾಯ, ಜಿಲ್ಲೆಯ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.