ಜಿಲ್ಲೆ

ಲೋಡ್‌ಶೆಡ್ಡಿಂಗ್ ಅನಿವಾರ್ಯ ಎಂದ ಗೃಹ ಸಚಿವ ಜಿ.ಪರಮೇಶ್ವರ

ಜಗನ್ನಾಥ್ ಕಾಳೇನಹಳ್ಳಿ

ತುಮಕೂರು: ಮಳೆ ಕೊರತೆಯಿಂದ ಜಲ ವಿದ್ಯುತ್ ಉತ್ಪಾದನೆ ಕಡಿಮೆ ಆಗಿರುವುದರಿಂದ ಲೋಡ್‌ಶೆಡ್ಡಿಂಗ್ ಅನಿವಾರ್ಯ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ಹೇಳಿದರು.

ನಗರದ ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ ಮಂಗಳವಾರ ಸ್ವಾತಂತ್ರೊೃೀತ್ಸವ ಧ್ವಜಾರೋಹಣ ನೆರವೇರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅನಿಯಮಿತ ಲೋಡ್‌ಶೆಡ್ಡಿಂಗ್‌ಗೆ ಗೃಹಜ್ಯೋತಿ ಕಾರಣವಲ್ಲ, ಮಳೆ ಕ್ಷೀಣಿಸಿರುವುದರಿಂದ ಜಲ ವಿದ್ಯುತ್ ಉತ್ಪಾದನೆ ಘಟಕಗಳಲ್ಲಿ ವಿದ್ಯುತ್ ಉತ್ಪಾದನೆ ಸಹ ಕಡಿಮೆ ಆಗಿದೆ. ಅದನ್ನು ನಿರ್ವಹಣೆ ಮಾಡಲಿಕ್ಕೆ ಲೋಡ್‌ಶೆಡ್ಡಿಂಗ್ ಮಾಡಲಾಗುತ್ತಿದೆ ಎಂದು ಸ್ಪಷ್ಟಪಡಿಸಿದರು.

ಅಕ್ಕಿ ನಮಗೆ ಸಿಕ್ಕಿ 10 ಕೆಜಿ ಕೊಡುವವರೆಗೆ 170 ರೂ., ಹಣವನ್ನು ನೀಡುವುದು ನಿಲ್ಲಿಸಲಾಗುವುದಿಲ್ಲ. ಇನ್ನೂ 3-4 ತಿಂಗಳು ಅನ್ನಭಾಗ್ಯದ ಜತೆಗೆ ಧನಭಾಗ್ಯವು ಮುಂದುವರೆಯಲಿದೆ. ನಮಗೆ ಅಗತ್ಯ ಇರುವಷ್ಟು ಅಕ್ಕಿ ಸಿಕ್ಕಿದ ಬಳಿಕವಷ್ಟೇ ಫಲಾನುಭವಿಗಳ ಖಾತೆಗೆ ಹಣ ಹಾಕುವುದನ್ನು ನಿಲ್ಲಿಸಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಪರಂ ಪ್ರತಿಕ್ರಿಯಿಸಿದರು.

ಕೋಮುವಾದ ನಿಗ್ರಹ ದಳ: ಮಂಗಳೂರಿನಲ್ಲಿ ಕೋಮುವಾದ ನಿಗ್ರಹ ದಳ (ಆ್ಯಂಟಿ ಕಮುನಲ್ ವಿಂಗ್) ಸ್ಥಾಪಿಸಿದ್ದು ಅನಿವಾರ್ಯವಾಗಿತ್ತು. ಅಲ್ಲಿ ನೈತಿಕ ಪೊಲೀಸ್‌ಗಿರಿ ಹೆಚ್ಚಾಗಿದ್ದು ಈಗ ಹತೋಟಿಗೆ ಬಂದಿದೆ. ಅಗತ್ಯಬಿದ್ದರೆ ಬೇರೆ ಕಡೆ ವಿಸ್ತರಣೆ ಮಾಡಲಾಗುವುದು. ತುಮಕೂರಿನಲ್ಲಿ ನೈತಿಕ ಪೊಲೀಸ್ ಗಿರಿ ಕಂಡುಬಂದಿಲ್ಲ ಎಂದರು.