ಜಿಲ್ಲೆ

ಅರಣ್ಯ ಹಕ್ಕು ಕಾಯ್ದೆ ಅನುಷ್ಠಾನಕ್ಕೆ ಇಚ್ಛಾಶಕ್ತಿ ಕೊರತೆ

ವಿವೇಕಾನಂದ ದಾಸನಕೊಪ್ಪ

ಮುಂಡಗೋಡ: ವಾಸ್ತವ್ಯ ಮತ್ತು ಸಾಗುವಳಿಗೆ ಸಂಬಂಧಿಸಿ ಜಾರಿಗೆ ಬಂದಿರುವ ಅರಣ್ಯಹಕ್ಕು ಕಾಯ್ದೆಯಡಿ ಅರಣ್ಯವಾಸಿಗಳಿಗೆ ಭೂಮಿ ಹಕ್ಕು ನೀಡಲು ಅರಣ್ಯ ಹಕ್ಕು ಕಾಯ್ದೆ ತಿದ್ದುಪಡಿ ಅವಶ್ಯಕತೆಯಿಲ್ಲ. ಪ್ರಚಲಿತ ಕಾನೂನಿನಡಿ ಅರಣ್ಯ ಹಕ್ಕು ನೀಡಲು ಅವಕಾಶವಿದೆ ಎಂದು ಅರಣ್ಯಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದರು.

ಪಟ್ಟಣದ ಪ್ರವಾಸಿ ಮಂದಿರದ ಬಳಿ ಸೋಮವಾರ ಮುಂಡಗೋಡ ತಾಲೂಕಿನ ಅರಣ್ಯವಾಸಿಗಳಿಗೆ ಗುರುತಿನ ಪತ್ರ ನೀಡಿ ಅವರು ಮಾತನಾಡಿದರು.

ಕಾನೂನಿಗೆ ವ್ಯತಿರಿಕ್ತವಾಗಿ, ಕಾನೂನಿನ ವಿಧಿ-ವಿಧಾನ ಅನುಸರಿಸದೆ ಅರ್ಜಿಗಳು ತಿರಸ್ಕಾರವಾಗುತ್ತಿರುವುದು ವಿಷಾದಕರ. ಅರಣ್ಯ ಹಕ್ಕು ನೀಡುವಲ್ಲಿ ಕಾನೂನು ತಿಳಿವಳಿಕೆ ಹಾಗೂ ಇಚ್ಛಾಶಕ್ತಿ ಕೊರತೆಯಿಂದ ಅರಣ್ಯ ಹಕ್ಕು ಕಾಯ್ದೆ ಅನುಷ್ಠಾನದಲ್ಲಿ ವೈಫಲ್ಯವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಅರಣ್ಯ ಹಕ್ಕು ಕಾಯ್ದೆ ತಿದ್ದುಪಡಿ ಮತ್ತು ಕೇಂದ್ರ ಸರ್ಕಾರದ ಸುತ್ತೋಲೆಗಳು ಅರಣ್ಯವಾಸಿಗಳ ಪರವಾಗಿದ್ದು, ಅರಣ್ಯವಾಸಿಗಳಿಗೆ ಅರಣ್ಯಭೂಮಿ ಹಕ್ಕು ನೀಡಲು ಪೂರಕವಾಗಿದೆ. ಅರಣ್ಯ ಹಕ್ಕು ಕಾಯ್ದೆ ಅರಣ್ಯವಾಸಿಗಳ ಪರವಾಗಿರುವ ಕುರಿತು ವ್ಯಾಪಕವಾದ ಜನ ಜಾಗೃತಿ ಮೂಡಿಸಲಾಗುವುದು ಎಂದರು.

ವೇದಿಕೆ ತಾಲೂಕು ಅಧ್ಯಕ್ಷ ಶಿವಾನಂದ ಜೋಗಿ ಅಧ್ಯಕ್ಷತೆ ವಹಿಸಿದ್ದರು. ಮಲ್ಲಿಕಾರ್ಜುನ ಓಣಿಕೇರಿ, ಮಹೇಶ ಗಣೇಶಪುರ, ಅಭಿಲಾಶ ಚಿಗಳ್ಳಿ, ಜಗದೀಶ ಶೆಟ್ಟರ ಮಲವಳ್ಳಿ, ಸುರೇಶ್ ಕಟಗಿ, ವೀರಣ್ಣ ಬಾಳೆಮಠ, ಮೌಲಾಲಿ ದುಂಡಶಿ ಮಲವಳ್ಳಿ, ಹನುಮಂತಸಿಂಗ, ಕೃಷ್ಣ ಕಾತೂರ, ಚಿಕ್ಕಪ್ಪ ಬಸಪ್ಪ ಹಿರೇಹಳ್ಳಿ, ನಾಸೀರಸಾಬ ಬೊಮ್ಮನಳ್ಳಿ, ದುರ್ಗಪ್ಪ ಭಜಂತ್ರಿ, ಯಲ್ಲಪ್ಪ ಜಿನ್ನೂರು, ಶಿವರುದ್ರಪ್ಪ ನಿಲೇಕಣಿ ಉಪಸ್ಥಿತರಿದ್ದರು.