ಜಿಲ್ಲೆ

ಕಸಾಪ ಆಯೋಜನೆಗೆ ಇಚ್ಛಾಶಕ್ತಿ ಕೊರತೆ

ಬಳ್ಳಾರಿ : ಜಿಲ್ಲೆಗೆ ಆರು ದಶಕಗಳ ನಂತರ ಒಲಿದಿದ್ದ 88ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಸ್ಥಳೀಯರ ಹಾಗೂ ಶಾಸಕರ ಇಚ್ಛಾಶಕ್ತಿ ಕೊರತೆಯಿಂದ 2025ರಲ್ಲಿಯೇ ನಡೆಯುವುದು ಅನುಮಾನವಿದೆ.

ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರ ವಿರುದ್ಧ ಭ್ರಷ್ಟಾಚಾರದ ಆರೋಪ, ತನಿಖೆ, ಆರೋಪ ಮಾಡಿದವರ ವಿರುದ್ದ ಕಸಾಪ ಅಧ್ಯಕ್ಷ ಮಹೇಶ ಜೋಶಿ ಕಾನೂನು ಹೋರಾಟ ಹಾಗೂ ಸರ್ಕಾರದಿಂದ ಕಸಾಪಕ್ಕೆ ಆಡಳಿತಾಧಿಕಾರಿ ನೇಮಕ ಸೇರಿದಂತೆ ಹಲವು ಬಗೆಯ ಗೊಂದಲಗಳಿಂದ ನೇರವಾಗಿ ಸಮ್ಮೇಳನದ ಮೇಲೆ ಪರಿಣಾಮ ಬೀರಿದೆ ಎನ್ನಬಹುದು. ಮತ್ತೊಂದಡೆ ಜಿಲ್ಲೆಯ ಶಾಸಕರ, ಜಿಲ್ಲಾ ಕಸಾಪ ಘಟಕ, ಸಂಘ, ಸಂಸ್ಥೆ ಪದಾಧಿಕಾರಿಗಳ ಹಾಗೂ ಸ್ಥಳೀಯರು ಆಸಕ್ತಿ ವಹಿಸುತ್ತಿಲ್ಲ ಎಂಬ ಗಂಭೀರ ಆರೋಪ ಕೇಳಿ ಬಂದಿದೆ. ಇದರಿಂದ ಆರು ದಶಕಗಳ ಬಳಿಕ ಬಳ್ಳಾರಿ ಜಿಲ್ಲೆಗೆ ಒಲಿದಿರುವ ಸಮ್ಮೇಳನದ ಅತಿಥ್ಯ ಬೇರೆ ಜಿಲ್ಲೆಯಲ್ಲಿ ನಡೆಯಬಹುದು ಅಥವಾ 2026ನೇ ಸಾಲಿನಲ್ಲಿ ನಡೆದರೂ ಅಚ್ಚರಿಯಿಲ್ಲ !.

ಜಿಲ್ಲಾಧ್ಯಕ್ಷರ ಕಡೆಗಣನೆ : ಕಳೆದ ವಾರ ಜಿಲ್ಲೆಗೆ ಭೇಟಿ ನೀಡಿದ್ದ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಖಾನ್ ಸಮ್ಮೇಳನ ಆಯೋಜನೆಗೆ ನಗರದ ಕೊಳಗಲ್ ರಸ್ತೆಯ ವಿಮಾನ ನಿಲ್ದಾಣ, ಕಪ್ಪಗಲ್ ರಸ್ತೆಯಲ್ಲಿನ ವಿಶಾಲ ಪ್ರದೇಶ ಹಾಗೂ ವಿವಿ ಆವರಣದ ಮುಂಭಾಗದ ಖಾಲಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಜಿಲ್ಲಾ ಕಸಾಪ ಪದಾಧಿಕಾರಿಗಳನ್ನು ಮುಂದಿಟ್ಟುಕೊಂಡು ಸ್ಥಳ ಗುರುತಿಸಿಬೇಕಿದ್ದ ಸಚಿವರು ಸ್ವತ ಕಸಾಪ ಜಿಲ್ಲಾಧ್ಯಕ್ಷರೆ ಇಲ್ಲದೆ ಸ್ಥಳ ಪರಿಶೀಲಿಸಿದ್ದು ಕಾಟಾಚಾರಕ್ಕೆ ಎಂಬಂತೆಯಿತು. ಕಳೆದ ಕೆಲ ತಿಂಗಳ ಹಿಂದಯೇ ಬೆಂಗಳೂರಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವ, ಜಿಲ್ಲಾಡಳಿತ ಹಾಗೂ ರಾಜ್ಯ ಕಸಾಪದೊಂದಿಗೆ ಸಮ್ಮೇಳನದ ಸಭೆಯಲ್ಲಿ ಕಸಾಪ ಜಿಲ್ಲಾಧ್ಯಕ್ಷ ನಿಷ್ಠಿ ರುದ್ರಪ್ಪ ಅನುಪಸ್ಥಿತಿಯಲ್ಲಿಯೇ ನಡೆದಿದ್ದು ಚರ್ಚೆಗೆ ಗ್ರಾಸವಾಗಿತ್ತು. ಒಟ್ಟಾರೆ ಸಮ್ಮೇಳನಕ್ಕೆ ಇನ್ನೂ ಒಂದೂವರೆ ತಿಂಗಳು ಉಳಿದಿದ್ದು ಈಗಾಗಲೇ ನಾನಾ ಚಟುವಟಿಕೆಗಳಿಂದ ಗರಿಗೆದರಿಬೇಕಿದ್ದ ಸಮ್ಮೇಳನವು ಮಂಕಾಗಿದೆ.

ಇಚ್ಛಾಶಕ್ತಿ ಕೊರತೆ : ಕಳೆದ ಆರು ದಶಕಗಳ ನಂತರ ಒಲಿದಿರುವ ಸಮ್ಮೇಳನಕ್ಕೆ ಒಕ್ಕೂರಲಿನಿಂದ ಜತೆಗೂಡಿ ಜವಾಬ್ದಾರಿ ವಹಿಸಬೇಕಿದ್ದ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಜನಪ್ರತಿನಿಧಿಗಳು ಈವರೆಗೂ ಸಮ್ಮೇಳನದ ಕುರಿತಗಾಗಿ ಒಂದು ಸಭೆ ನಡೆಸಿಲ್ಲ. ಸಿಎಂ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರನ್ನು ಭೇಟಿಯಾಗಿ ಇಂತಿಷ್ಟು ಅನುದಾನಕ್ಕೆ ಚರ್ಚಿಸಿಲ್ಲ. ಜಿಲ್ಲೆಗೆ ಸಮ್ಮೇಳನ ಘೋಷಣೆಯಾದ ನಂತರ ಆರಂಭದಲ್ಲೇ ಕಸಾಪ ಅಧ್ಯಕ್ಷ ಮಹೇಶ ಜೋಷಿ ಜಿಲ್ಲೆಗೆ ಭೇಟಿ ನೀಡಿದ ವೇಳೆ ಜಿಲ್ಲೆಯ ಪ್ರಮುಖರು, ನಾನಾ ಸಂಘ ಹಾಗೂ ಸಂಸ್ಥೆಯ ಪದಾಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದು ಬಿಟ್ಟರೆ ಉಳಿದಂತೆ ಕಾಣೆಯಾಗಿದ್ದಾರೆ ಎನ್ನಬಹುದು. ಜಿಲ್ಲಾ ಕಸಾಪ ಘಟಕವೂ ಕೆಲವೊಂದು ದತ್ತಿ ಕಾರ್ಯಕ್ರಮಗಳು ಆಯೋಜನೆ ಸಕ್ರಿಯವಾಗಿರುವುದು ಬಿಟ್ಟರೆ ಸಮ್ಮೇಳನದ ಆಸಕ್ತಿ ಇಲ್ಲ ಎಂಬಂತೆ ತೋರುತ್ತಿದೆ. 87ನೇ ಸಾಹಿತ್ಯ ಸಮ್ಮೇಳನ ಮಂಡ್ಯದಲ್ಲಿ ನಡೆದಿದ್ದ ಸಮ್ಮೇಳನಕ್ಕೆ ಸ್ಥಳೀಯರ ಆಸಕ್ತಿ ಹಾಗೂ ಜನಪ್ರತಿನಿಧಿಗಳ ಇಚ್ಛಾಶಕ್ತಿಯಿಂದ ಅದ್ಧೂರಿಯಾಗಿ ನೆರವೇರಿತು ಹೊರತು, ಯಾವ ಸರ್ಕಾರ ಅಧಿಕಾರಿಗಳಿಂದ ಅಲ್ಲ ಎಂದು ಸಾಹಿತಿಯೊಬ್ಬರು ಅಭಿಪ್ರಾಯಪಟ್ಟರು.

ಕೋಟ್... ನಗರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಸಮ್ಮೇಳನದ ಸ್ಥಳ ಪರಿಶೀಲನೆಗೆ ಸೆ.30 ರಂದು ನಿಗದಿಯಾಗಿತ್ತು. ಆದರೆ, ಸಚಿವರು ಏಕಾಏಕಿ ಸೆ.29 ರಂದೇ ಪರಿಶೀಲಿಸಿದರು. ನಾನು ಅಂದು ಜಿಲ್ಲೆಯಲ್ಲಿ ಇಲ್ಲದೆ ಇದ್ದರಿಂದ ಸ್ಥಳ ವೀಕ್ಷಣೆಗೆ ಹೋಗಿಲ್ಲ.

- ನಿಷ್ಠಿ ರುದ್ರಪ್ಪ, ಜಿಲ್ಲಾಧ್ಯಕ್ಷ, ಕಸಾಪ, ಬಳ್ಳಾರಿ.

ಕೋಟ್... ಜಿಲ್ಲೆಯಲ್ಲಿನ ಜನಪ್ರತಿನಿಧಿಗಳು, ಸಂಘ ಹಾಗೂ ಸಂಸ್ಥೆ ಪದಾಧಿಕಾರಿಗಳಿಗೆ ಸಮ್ಮೇಳನ ಆಯೋಜನೆಯ ಆಸಕ್ತಿಯಿಲ್ಲ. ಸ್ಥಳೀಯ ಜನರಿಗೆ ಇಚ್ಛಾಶಕ್ತಿ ಕೊರತೆಯಿದೆ. ನನ್ನ ಮೇಲಿನ ಆರೋಪಗಳಿಗೆ ಕಾನೂನಿನ ಮೂಲಕ ಹೋರಾಟ ನಡೆಸುತ್ತಿರುವೆ. ಸಮ್ಮೇಳನ ಆಯೋಜನೆ ಹಾಗೂ ಆರೋಪಗಳಿಗೆ ಏನು ಸಂಬಂಧ. ಜಿಲ್ಲೆಯಲ್ಲಿ ಸಮ್ಮೇಳನ ನಡೆಯುವುದು ಬಹಳ ಕಷ್ಟ ಇದೆ.

- ಡಾ.ಮಹೇಶ್ ಜೋಷಿ, ಅಧ್ಯಕ್ಷ, ಕಸಾಪ.