ಮುಂಡಗೋಡ: ತಾಲೂಕಿನಲ್ಲಿರುವ 13 ಪಶು ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆಯಿಂದ ಜಾನುವಾರು ಹಾಗೂ ಸಾಕುಪ್ರಾಣಿಗಳಿಗೆ ಸಮರ್ಪಕವಾದ ಚಿಕಿತ್ಸೆ ಸಿಗದೆ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ತಾಲೂಕಿನಲ್ಲಿ 27ಸಾವಿರಕ್ಕೂ ಅಧಿಕ ದನಕರುಗಳಿವೆ. ವೈದ್ಯರ ಕೊರತೆಯಿಂದ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಸಿಗದೆ ದನಕರುಗಳ ಗೋಳು ಕೇಳುವವರಿಲ್ಲದಂತಾಗಿದೆ. ತಾಲೂಕು ಮಟ್ಟದ ಪಶು ಸಂಗೋಪನಾ ಆಸ್ಪತ್ರೆ, ಪಾಳಾ ಪಶು ಸಂಗೋಪನಾ ಕೇಂದ್ರ, ವಿವಿಧ ಭಾಗಗಳಲ್ಲಿ ಆರು ಪಶು ಚಿಕಿತ್ಸಾಲಯಗಳು ಹಾಗೂ ಐದು ಪ್ರಾಥಮಿಕ ಪಶು ಚಿಕಿತ್ಸಾಲಯಗಳಿವೆ.
ಮುಖ್ಯ ಪಶು ವೈದ್ಯಾಧಿಕಾರಿಗಳು- 10, ಪಶು ಅಭಿವೃದ್ಧಿ ಅಧಿಕಾರಿ- 1, ಹಿರಿಯ ಪಶು ವೈದ್ಯಕಿಯ ಪರೀಕ್ಷಕರು -7, ಪಶು ವೈದ್ಯಕೀಯ ಪರೀಕ್ಷಕರು-8, ಕಿರಿಯ ಪಶು ವೈದ್ಯಕಿಯ ಪರೀಕ್ಷಕರು-9 ಹಾಗೂ ಡಿ ಗ್ರೂಪ್ ಸೇರಿದಂತೆ 45 ಹುದ್ದೆಗಳಿವೆ. ಆದರೆ ಇವುಗಳಲ್ಲಿ ಮುಖ್ಯ ಪಶು ವೈದ್ಯಾಧಿಕಾರಿಗಳು-1, ಹಿರಿಯ ಪಶು ವೈದ್ಯಕಿಯ ಪರೀಕ್ಷಕರು-1,ಪಶು ವೈದ್ಯಕೀಯ ಪರೀಕ್ಷಕರು-3, ಕಿರಿಯ ಪಶು ವೈದ್ಯಕಿಯ ಪರೀಕ್ಷಕರು-3, ಹಾಗೂ ಡಿ ಗ್ರೂಪ್-1, ಸೇರಿ 13 ಜನ ಮಾತ್ರ ಕಾರ್ಯ ನಿರ್ವಹಿಸುತ್ತಿದ್ದಾರೆ.
ಕೆಲವಡೆ ಗ್ರೂಪ್ ಡಿ ಸಿಬ್ಬಂದಿಯನ್ನು ಗುತ್ತಿಗೆ ಆಧಾರದಲ್ಲಿ ನೇಮಿಸಿಕೊಳ್ಳಲಾಗಿದೆ. ಇದನ್ನು ಹೊರತು ಪಡಿಸಿದರೆ ಉಳಿದೆಲ್ಲ ಹುದ್ದೆಗಳು ಖಾಲಿ ಉಳಿದಿವೆ.
ತಾಲೂಕಿನ ಬಡ್ಡಿಗೇರಿ, ಬ್ಯಾನಳ್ಳಿ, ಮೈನಳ್ಳಿ, ಗೋದ್ನಾಳ, ಅತ್ತಿವೇರಿ, ಗೌಳಿದಡ್ಡಿ, ಶಿರಗೇರಿ, ಜೋಡಿಕಟ್ಟ, ಹುಲಿಹೊಂಡ, ಮರಗಡಿ ಗೌಳಿದಡ್ಡಿ ಸೇರಿದಂತೆ ಹತ್ತಾರು ಗ್ರಾಮಗಳಲ್ಲಿ ಹೈನೋದ್ಯಮ ಉತ್ತಮವಾಗಿದೆ. ಈ ಗ್ರಾಮಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ದನಕರುಗಳು, ಎಮ್ಮೆ ಸಾಕಣೆ ಮಾಡಲಾಗುತ್ತದೆ. ದನಕರಗಳಿಗೆ ಜ್ವರ, ಬಾಯಿಬೇನೆ, ಕಾಲುಬೇನೆ ಸೇರಿದಂತೆ ಹಲವಾರು ಕಾಯಿಲೆಗಳು ಕಾಣಿಸಿಕೊಳ್ಳುತ್ತವೆ. ಈ ಹಿಂದೆ ಸಾಂಕ್ರಾಮಿಕ ಗಂಟುರೋಗವು ಹಲವಾರು ದನಕರುಗಳನ್ನು ಬಲಿ ಪಡೆದಿದೆ. ತಾಲೂಕಿನಲ್ಲಿನ ಪಶು ಆಸ್ಪತ್ರೆಯ ವೈದ್ಯರ ಹಾಗೂ ಸಿಬ್ಬಂದಿ ಕೊರತೆಯೂ ನೀಗುವುದಾದರೂ ಎಂದು ಎಂಬುದು ದನಕರುಗಳ ಮಾಲೀಕರ ಪ್ರಶ್ನೆಯಾಗಿದೆ.
ದನಕರುಗಳಿಗೆ ಅನಾರೋಗ್ಯವಾದರೆ ವೈದ್ಯರಿಗೆ ಫೋನ್ ಮಾಡಿ ಕರೆಯಬೇಕು. ವೈದ್ಯರ ಕೊರತೆಯಿಂದ ಸಮಯಕ್ಕೆ ಸರಿಯಾಗಿ ಬರುವುದಿಲ್ಲ. ಸರ್ಕಾರ ವೈದ್ಯರನ್ನು ನೇಮಿಸಿದರೆ ಹೆಚ್ಚು ಅನುಕೂಲವಾಗುತ್ತದೆ.ರಾಜು ಕೊಕರೆ, ಮೈನಳ್ಳಿ ಗ್ರಾಮಸ್ಥ ತಾಲೂಕಿನಲ್ಲಿ ಪಶು ವೈದ್ಯರು, ಸಿಬ್ಬಂದಿ ಸೇರಿದಂತೆ 45ಜನ ಕಾರ್ಯ ನಿರ್ವಹಿಸಬೇಕಿತ್ತು. ಆದರೆ, 13ಜನ ಮಾತ್ರ ಇದ್ದೇವೆ. ಇದರಿಂದ ದನಕರುಗಳ ಚಿಕಿತ್ಸೆಗೆ ಸ್ವಲ್ಪ ಹಿನ್ನಡೆಯಾಗುತ್ತಿದೆ.ಡಾ. ಕೃಷ್ಣಮೂರ್ತಿ ಹೆಗಡೆ, ಸಹಾಯಕ ನಿರ್ದೇಶಕರು ಪಶು ಆಸ್ಪತ್ರೆ ಮುಂಡಗೋಡ