ಬದಿಯಡ್ಕ: ಕುಂಬ್ಡಾಜೆ ಗ್ರಾಮ ಕಚೇರಿಯಲ್ಲಿ ಸಿಬ್ಬಂದಿ ನೇಮಿಸದ ಬಗ್ಗೆ ಬಿಜೆಪಿ ಕುಂಬ್ಡಾಜೆ ಪಂಚಾಯಿತಿ ಸಮಿತಿ ನೇತೃತ್ವದಲ್ಲಿ ಮಂಗಳವಾರ ಮಾರ್ಪನಡ್ಕದಲ್ಲಿ ಪ್ರತಿಭಟನೆ ನಡೆಯಿತು.
ಬಿಜೆಪಿ ದೇಶೀಯ ಸಮಿತಿ ಸದಸ್ಯ ಎಂ.ಸಂಜೀವ ಶೆಟ್ಟಿ ಉದ್ಘಾಟಿಸಿ ಮಾತನಾಡಿ, ಸ್ಮಾರ್ಟ್ ಗ್ರಾಮ ಕಚೇರಿ ಸ್ಥಾಪಿಸಿ ಸಿಬ್ಬಂದಿ ನೇಮಿಸದೆ ಸರ್ಕಾರ ಜನರನ್ನು ವಂಚಿಸಿದೆ. ತ್ರಿಪುರ ಮತ್ತು ಪಶ್ಚಿಮ ಬಂಗಾಳದಲ್ಲಿ ಇದೇ ರೀತಿ ಮಾಡಿದ ಸಿಪಿಎಂ ಪಕ್ಷವು ಇಂದು ಅಸ್ತಿತ್ವದಲ್ಲಿಲ್ಲದಂತಾಗಿದೆ ಎಂದರು.
ಕುಂಬ್ಡಾಜೆ ಪಂಚಾಯಿತಿ ಸಮಿತಿ ಅಧ್ಯಕ್ಷ ಹರೀಶ್ ಗೋಸಾಡ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಉಪಾಧ್ಯಕ್ಷ ಎಂ.ಸುಧಾಮ ಗೋಸಾಡ, ಮಂಡಲ ಉಪಾಧ್ಯಕ್ಷ ಕೃಷ್ಣಶರ್ಮ ಜಿ, ನಳಿನಿ ಕೆ, ಮಂಡಲ ಪ್ರಧಾನ ಕಾರ್ಯದರ್ಶಿ ರವೀಂದ್ರ ರೈ ಗೋಸಾಡ, ಜಿಲ್ಲಾ ಪಂಚಾಯಿತಿ ಸದಸ್ಯೆ ಶೈಲಜಾ ಭಟ್, ಮಹಿಳಾ ಮೋರ್ಚಾ ಮಂಡಲ ಪ್ರಧಾನ ಕಾರ್ಯದರ್ಶಿ ಯಶೋದಾ ಎಂ. ಮೊದಲಾದವರು ಪಾಲ್ಗೊಂಡಿದ್ದರು. ಶಶಿಧರ ತೆಕ್ಕೆಮೂಲೆ ಸ್ವಾಗತಿಸಿದರು. ರೋಶಿನಿ ಪೊಡಿಪ್ಪಳ್ಳ ವಂದಿಸಿದರು.