ಹುಣಸೂರು ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಆಯೋಜಿಸಿದ್ದ ಸಾಮಾನ್ಯ ಸಭೆಯಲ್ಲಿ ಆಡಳಿತಾಧಿಕಾರಿ ಸಿದ್ದಗಂಗಮ್ಮ ಅಧಿಕಾರಿಗಳಿಂದ ಮಾಹಿತಿ ಪಡೆದರು. ಇಒ ಕೆ.ಹೊಂಗಯ್ಯ, ತಾಲೂಕು ಯೋಜನಾಧಿಕಾರಿ ರಾಜೇಶ್ ಇದ್ದಾರೆ. 
ಜಿಲ್ಲೆ

ಪಶು ಇಲಾಖೆಯಲ್ಲಿ ಸಿಬ್ಬಂದಿ ಕೊರತೆ

ಹುಣಸೂರು: ತಾಲೂಕಿನ ಪಶುಪಾಲನ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯಲ್ಲಿ ಸಿಬ್ಬಂದಿ ಕೊರತೆಯಿಂದಾಗಿ ಎರಡು ಪ್ರಾಥಮಿಕ ಪಶುಪಾಲನಾ ಕೇಂದ್ರಗಳನ್ನು ಮುಚ್ಚಲಾಗಿದೆ ಎಂದು ಪಶುಪಾಲನ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಚನ್ನಬಸಪ್ಪ ತಿಳಿಸಿದರು.

ನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಆಡಳಿತಾಧಿಕಾರಿ ಸಿದ್ದಗಂಗಮ್ಮ ಅಧ್ಯಕ್ಷತೆಯಲ್ಲಿ ಮಂಗಳವಾರ ಆಯೋಜಿಸಿದ್ದ ತಾ.ಪಂ. ಸಾಮಾನ್ಯ ಸಭೆಯಲ್ಲಿ ಮಾಹಿತಿ ನೀಡಿದ ಅವರು, ತಾಲೂಕಿನಲ್ಲಿ ನಿಗದಿಯಾಗಿರುವ ಒಟ್ಟು 23 ಹಿರಿಯ ಪಶು ಪರೀಕ್ಷಕ ಹುದ್ದೆಗಳ ಪೈಕಿ 17 ಹುದ್ದೆಗಳು ಖಾಲಿ ಇದೆ. ಪಶುವೈದ್ಯಾಧಿಕಾರಿಗಳ ಹುದ್ದೆಯ ಪೈಕಿ ನಗರ ವ್ಯಾಪ್ತಿಯಲ್ಲಿ ಇಬ್ಬರು, ಚಿಲ್ಕುಂದ ಮತ್ತು ಕಲ್ಲಹಳ್ಳಿ ಗ್ರಾಮಗಳ ಕೇಂದ್ರದಲ್ಲಿ ಎರಡು ಹುದ್ದೆಗಳು (ಒಟ್ಟು 4 ಹುದ್ದೆಗಳು) ಖಾಲಿಯಿವೆ. ಇನ್ನು ಡಿ ಗ್ರೂಪ್ ನೌಕರರ ಕೊರತೆಯೂ ಕಾಡುತ್ತಿದ್ದು, ಒಟ್ಟು 96 ವಿವಿಧ ವರ್ಗಗಳ ಹುದ್ದೆಗಳ ಪೈಕಿ 46 ಹುದ್ದೆಗಳು ಖಾಲಿಯಿವೆ. ತಾಲೂಕಿನ ಧರ್ಮಾಪುರ ಮತ್ತು ಸಿಂಗರಮಾರನಹಳ್ಳಿ ಪ್ರಾಥಮಿಕ ಕೇಂದ್ರಗಳಲ್ಲಿ ಪಶುಪಾಲನ ಪರೀಕ್ಷಕರು ಸೇರಿದಂತೆ ಯಾವುದೇ ಸಿಬ್ಬಂದಿ ಇಲ್ಲದ ಕಾರಣ ಮುಚ್ಚಲಾಗಿದೆ. ಈ ಭಾಗದ ರೈತರಿಗೆ ರತ್ನಪುರಿ ಕೇಂದ್ರವನ್ನು ಸಂಪರ್ಕಿಸುವಂತೆ ಕೋರಲಾಗಿದೆ ಎಂದು ತಿಳಿಸಿದರು.

ಇದೆಲ್ಲದರ ನಡುವೆ ತಾಲೂಕಿನಲ್ಲಿ ರಾಸುಗಳಿಗೆ ಕಾಲುಬಾಯಿ ಜ್ವರ, ಗಂಟುರೋಗ ನಿಯಂತ್ರಣ ಸೇರಿದಂತೆ ಕಾಲಕಾಲಕ್ಕೆ ಅಗತ್ಯವಾಗಿ ನೀಡಬೇಕಾಗಿರುವ ಲಸಿಕಾ ಅಭಿಯಾನವನ್ನು ಪೂರ್ಣಗೊಳಿಸಲಾಗಿದೆ. ಕಾಲುಬಾಯಿ ಜ್ವರ ನಿಯಂತ್ರಣಕ್ಕಾಗಿ 67,864 ರಾಸುಗಳಿಗೆ(ಶೇ.104) ಲಸಿಕೆ ಹಾಕಲಾಗಿದೆ. ಕುರಿ ಮತ್ತು ಮೇಕೆಗಳಿಗೆ ನೀಡಬೇಕಿರುವ ಪಿಪಿಆರ್ ಲಸಿಕೆಗಳನ್ನು ವಿವಿಧ ಕಾರಣಗಳಿಂದ ಸರ್ಕಾರ ಮುಂದೂಡಿದ್ದು, ಸರ್ಕಾರದ ಸೂಚನೆ ಸಿಕ್ಕ ಕೂಡಲೇ ಹಾಕಲಾಗುವುದು ಎಂದು ಮಾಹಿತಿ ನೀಡಿದರು.

ತಾಲೂಕಿನಲ್ಲಿ ಪ್ರಸ್ತುತ 3 ಡೆಂಘೆ ಪ್ರಕರಣಗಳು ಇದ್ದು, ಎಲ್ಲರಿಗೂ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಆರೋಗ್ಯ ಶಿಕ್ಷಣಾಧಿಕಾರಿ ರಾಜೇಶ್ವರಿ ತಿಳಿಸಿದರು. ಜಲ್‌ಜೀವನ್ ಮಿಷನ್ ಯೋಜನೆಯಡಿ ತಾಲೂಕಿನಲ್ಲಿ ಒಟ್ಟು 298 ಕಾಮಗಾರಿಗಳನ್ನು ಕೈಗೆತ್ತಿಕೊಂಡಿದ್ದು, ಈ ಪೈಕಿ 198 ಕಾಮಗಾರಿಗಳು ಸಂಪೂರ್ಣಗೊಂಡಿವೆ. ಮತ್ತು 96 ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದು ಜಿ.ಪಂ. ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಎಇಇ ಮಹಮದ್ ಖಲೀಂ ಮಾಹಿತಿ ನೀಡಿದರು.

ತಾ.ಪಂ. ತಾಲೂಕು ಯೋಜನಾಧಿಕಾರಿ ರಾಜೇಶ್ ಸೇರಿದಂತೆ ವಿವಿಧ ಇಲಾಖೆಗಳ ತಾಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.