ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಗ್ರಾಮಾಂತರ ಜಿಲ್ಲೆಯ ರೇಷ್ಮೆ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಕಾಡುತ್ತಿದ್ದು, ಒಬ್ಬರೇ ಅಧಿಕಾರಿಗಳು ಹಲವು ಹುದ್ದೆಗಳ ಪ್ರಭಾರ ವಹಿಸಿಕೊಂಡು ಹೈರಾಣಾಗುತ್ತಿದ್ದಾರೆ. ಸರ್ಕಾರ ಖಾಲಿ ಇರುವ ಹುದ್ದೆಗಳ ಭರ್ತಿ ಮಾಡಲು ಮೀನಮೇಷ ಎಣಿಸುತ್ತಿರುವುದು ಇಲಾಖೆಯ ಕರ್ತವ್ಯಕ್ಕೆ ಸಂಕಷ್ಟ ಎದುರಾಗಿದೆ.
ಗ್ರಾಮಾಂತರ ಜಿಲ್ಲೆಯಲ್ಲಿ ಹೈನುಗಾರಿಕೆಯಂತೆ ರೇಷ್ಮೆ ಕೃಷಿಯೂ ರೈತರ ಪ್ರಮುಖ ಆರ್ಥಿಕ ಮೂಲವಾಗಿದ್ದು, ರೇಷ್ಮೆ ಇಲಾಖೆ ಯೋಜನೆಗಳನ್ನು ರೇಷ್ಮೆ ಬೆಳೆಗಾರರಿಗೆ ತಲುಪಿಸಲು ಸಿಬ್ಬಂದಿ ಪರದಾಡುವಂತಾಗಿದೆ. ಸಿಬ್ಬಂದಿ ಕೊರತೆಯಿಂದ ಮೇಲಾಧಿಕಾರಿಗಳೇ ಎಲ್ಲ ಕರ್ತವ್ಯಗಳನ್ನು ನಿಭಾಯಿಸಬೇಕಾಗಿದ್ದು, ರೇಷ್ಮೆ ಬೆಳೆ ಪ್ರೋತ್ಸಾಹ ನಿರೀಕ್ಷಿತ ಮಟ್ಟಕ್ಕೆ ತಲುಪಲು ಸಾಧ್ಯವಾಗದ ಪರಿಸ್ಥಿತಿ ಎದುರಾಗಿದೆ.
ಮಾಹಿತಿ ತರಬೇತಿ ನೀಡಲು ಸಂಕಷ್ಟ: ಜಿಲ್ಲೆಯ ನಾಲ್ಕೂ ತಾಲೂಕುಗಳ ಪೈಕಿ ದೇವನಹಳ್ಳಿ ಹಾಗೂ ಹೊಸಕೋಟೆ ರೇಷ್ಮೆಕೃಷಿಯಲ್ಲಿ ಮುಂಚೂಣಿಯಲ್ಲಿದೆ ಇತ್ತೀಚಿನ ದಿನಗಳಲ್ಲಿ ಹಿಪ್ಪುನೇರಳೆ ಕೃಷಿ ದೊಡ್ಡಮಟ್ಟದಲ್ಲಿ ನಡೆಯುತ್ತಿದೆ
ಈ ಹಿನ್ನೆಲೆಯಲ್ಲಿ ಇಲಾಖೆಯ ಸಿಬ್ಬಂದಿ ಅವಶ್ಯಕತೆ ಹೆಚ್ಚು ಕಂಡುಬರುತ್ತಿದೆ ಹಿಪ್ಪು ನೇರಳೆ ಸೊಪ್ಪುಗಳಲ್ಲಿ ಆಗಾಗ ಕಾಣಿಸಿಕೊಳ್ಳು ಕೀಟಬಾಧೆ ಮತ್ತಿತರರ ರೋಗಗಳ ಹತೋಟಿ ಬಗ್ಗೆ ಬೆಳೆಗಾರರಿಗ ಸರಿಯಾದ ಮಾಹಿತಿ ದೊರಕಿಸಿಕೊಡುವಲ್ಲಿ ಇಲಾಖೆ ಸಿಬ್ಬಂದಿ ಪ್ರಮುಖ ಪಾತ್ರ ವಹಿಸುತ್ತದೆ ಆದರೆ ಇರುವಷ್ಟು ಸಿಬ್ಬಂದಿಯಿಂದ ಇದು ಸಾಧ್ಯವಾಗದ ಪರಿಸ್ಥಿತಿ ಎದುರಾಗಿದೆ ಎಂಬ ಮಾತು ಕೇಳಿಬರುತ್ತಿದೆ. ರೇಷ್ಮೆ ಬೆಳೆ ನಿರ್ವಹಣೆ ಸೂಕ್ಷ್ಮವಾಗಿದ್ದು ಸರಿಯಾದ ಮಾಹಿತಿ ಹಾಗೂ ತರಬೇತಿ ಮೂಲಕ ಕೃಷಿ ಮಾಡಬೇಕಿದೆ, ರೇಷ್ಮೆ ಹುಳುಗಳಿಗೆ ನೀಡುವ ಹಿಪ್ಪು ನೇರಳೆ ಗುಣಮಟ್ಟ ಇದರಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಈ ಹಿನ್ನೆಲೆಯಲ್ಲಿ ಹಿಪ್ಪುನೇರಳೆ ಬೆಳೆಗಾರರಿಗೆ ತಕ್ಷಣಕ್ಕೆ ಸಿಬ್ಬಂದಿಯನ್ನು ಸಂಪರ್ಕಿಸುವುದು ಕಷ್ಟಸಾಧ್ಯ ಎಂಬ ಪರಿಸ್ಥಿತಿ ಎದುರಾಗಿದೆ.
60 ಹುದ್ದೆಗಳ ಖಾಲಿ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ರೇಷ್ಮೆ ಇಲಾಖೆಯಲ್ಲಿ ಶೇ.60 ಸಿಬ್ಬಂದಿ ಕೊರತೆ ಎದುರಾಗಿದೆ ಎಂಬ ಮಾತು ಕೇಳಿಬರುತ್ತಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನಾಲ್ಕು ತಾಲೂಕಿನ ರೇಷ್ಮೆ ಇಲಾಖೆ ಸಹಾಯಕ ನಿರ್ದೇಶಕರ ಕಚೇರಿ, ಜಿಲ್ಲಾ ಉಪ ನಿರ್ದೇಶಕರ ಕಚೇರಿಗಳನ್ನೊಳಗೊಂಡಂತೆ ಜಿಲ್ಲಾ ಮಟ್ಟದ ಅಧಿಕಾರಿಗಳ ಹುದ್ದೆಗಳೂ ಖಾಲಿ ಇವೆ. ಹಲವು ವರ್ಷದಿಂದ ನೇಮಕಾತಿ ಪ್ರಕ್ರಿಯೆ ಸ್ಥಗಿತಗೊಂಡಿದ್ದು ಅಧಿಕಾರಿಗಳ ಕುರ್ಚಿಗಳು ಖಾಲಿಯೇ ಇವೆ. ಇತರೆ ಇಲಾಖೆಗಳಲ್ಲಿ ಬಹಳಷ್ಟು ಹೊರಗುತ್ತಿಗೆ ನೌಕರರಿದ್ದಾರೆ ಆದರೆ ರೇಷ್ಮೆ ಇಲಾಖೆಯಲ್ಲಿ ಅದೂ ಸಾಧ್ಯವಾಗಿಲ್ಲ ಎನ್ನಲಾಗಿದ್ದು, ಇರುವ ಬೆರಳೇಣಿಕೆ ಸಿಬ್ಬಂದಿ ಹಾಗೂ ಅಧಿಕಾರಿಗಳ ಮೇಲೆ ಎಲ್ಲ ಕರ್ತವ್ಯದ ಭಾರ ಬಿದ್ದಿದೆ. ಇದರಿಂದ ದಿನನಿತ್ಯದ ಕರ್ತವ್ಯ ನಿರ್ವಹಿಸಲು ಸಿಬ್ಬಂದಿ ಏದುಸಿರು ಬಿಡುವಂತಾಗಿದೆ.ರೇಷ್ಮೆ ಇಲಾಖೆಯಲ್ಲಿ 62 ಹುದ್ದೆಗಳು ಖಾಲಿ ಇದೆ. ಬೆಂಗಳೂರು ಗ್ರಾಮಾಂತರ ರೇಷ್ಮೆ ಇಲಾಖೆ ಅಡಿಯಲ್ಲಿ ರೇಷ್ಮೆ ವಿಸ್ತರಣಾಧಿಕಾರಿ, ರೇಷ್ಮೆ ನಿರೀಕ್ಷಕರು, ಕಚೇರಿ ಸಹಾಯಕರು, ಡಿ ಗ್ರೂಪ್ ಸಿಬ್ಬಂದಿ ಸೇರಿ ಜಿಲ್ಲೆಗೆ ರೇಷ್ಮೆ ಇಲಾಖೆಯಿಂದ 90 ಹುದ್ದೆ ಮಂಜೂರಾಗಿದೆ. ಇದುವರೆಗೆ ಕೇವಲ 28 ಹುದ್ದೆಗಳು ಮಾತ್ರ ಭರ್ತಿಯಾಗಿದೆ. ಉಳಿದಂತೆ 62 ಹುದ್ದೆಗಳು ಖಾಲಿ ಉಳಿದಿವೆ. ಮುಂದಿನ ನಾಲ್ಕು ತಿಂಗಳ ಅವಧಿಯಲ್ಲಿ 5ಕ್ಕೂ ಹೆಚ್ಚು ಮಂದಿ ನಿವೃತ್ತರಾಗಲಿದ್ದಾರೆ. ಈ ಮೂಲಕ ಮತ್ತಷ್ಟು ಹುದ್ದೆಗಳು ಖಾಲಿಯಾಗಲಿದ್ದು ಇದು ಅಧಿಕಾರಿಗಳಿಗೆ ಮತ್ತಷ್ಟು ದುಬಾರಿಯಾಗಲಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ರೇಷ್ಮೆ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ನಡುವೆಯೂ ರೇಷ್ಮೆ ಬೆಳೆಗಾರರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಇಲಾಖೆ ವತಿಯಿಂದ ಎಲ್ಲ ನೆರವು ಸಹಕಾರ ನೀಡಲಾಗುತ್ತಿದೆ. ಪ್ರಸ್ತುತ 60 ಹುದ್ದೆಗಳು ಖಾಲಿ ಇರುವ ಬಗ್ಗೆ ಸರ್ಕಾರದ ಗಮನಕ್ಕೆ ತರಲಾಗಿದೆ ಶೀಘ್ರದಲ್ಲೇ ಸಿಬ್ಬಂದಿ ಭರ್ತಿಯಾಗುವ ನಿರೀಕ್ಷೆ ಇದೆ. ರೇಷ್ಮೆ ಬೆಳೆಗಾರರು ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಿ ನೆರವು ಪಡೆಯಬಹುದು.
ಲಕ್ಷಣ್, ಉಪನಿರ್ದೇಶಕ ರೇಷ್ಮೆ ಇಲಾಖೆ ಬೆಂ.ಗ್ರಾಮಾಂತರ
ದಶಕಗಳ ಹಿಂದೆ ಹೋಲಿಸಿದರೆ ಗ್ರಾಮಾಂತರ ಜಿಲ್ಲೆಯಲ್ಲಿ ಇತ್ತೀಚಿನ ವರ್ಷಗಳಲ್ಲಿ ತೋಟಗಾರಿಕೆ ಬೆಳೆಗಳು ಹೆಚ್ಚು ಪ್ರವರ್ಧಮಾನಕ್ಕೆ ಬರುತ್ತಿವೆ, ರಾಗಿ, ಜೋಳ ಮತ್ತಿತರ ಬೆಳೆಗಳ ಜತೆಗೆ ಹೈನುಗಾರಿಕೆಯೂ ಹೆಚ್ಚಾಗುತ್ತಿದೆ ಇದರ ನಡುವೆ ರೇಷ್ಮೆಕೃಷಿಯತ್ತ ರೈತರು ಒಲವು ತೋರಿಸುತ್ತಿದ್ದಾರೆ. ಇಲಾಖೆ ಉತ್ತಮ ಮಾರ್ಗದರ್ಶನ, ಸಲಹೆ ಸೂಚನೆ ನೆರವು ನೀಡುವ ಮೂಲಕ ರೇಷ್ಮೆಕೃಷಿಯನ್ನು ಮತ್ತಷ್ಟು ಪ್ರೋತ್ಸಾಹಿಸಬೇಕಿದೆ ಈ ನಿಟ್ಟಿನಲ್ಲಿ ಅಗತ್ಯ ಸಿಬ್ಬಂದಿ ಅವಶ್ಯಕವಾಗಿದೆ.
ಬಸವರಾಜು, ರೇಷ್ಮೆಬೆಳೆಗಾರ ಹೊಸಕೋಟೆ