ಜಿಲ್ಲೆ

ಪಡುಬಿದ್ರಿ ಠಾಣೆಗೆ ಜಾಗದ ಕೊರತೆ

ಹೇಮನಾಥ್ ಪಡುಬಿದ್ರಿ

ಗ್ರಾಮಗಳಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಶಿರ್ವ ಠಾಣಾ ವ್ಯಾಪ್ತಿಯಿಂದ ಪ್ರತ್ಯೇಕಗೊಂಡು 1992ರಲ್ಲಿ 10 ಗ್ರಾಮಗಳನ್ನೊಳಗೊಂಡು ರಚನೆಗೊಂಡ ಪಡುಬಿದ್ರಿ ಪೊಲೀಸ್ ಠಾಣೆ ಪ್ರಸ್ತುತ ಜಾಗದ ಕೊರತೆ ಎದುರಿಸುತ್ತಿದೆ. ಜಪ್ತಿ ಮಾಡಿದ ವಾಹನಗಳನ್ನು ಇಡಲು ಸ್ಥಳಾವಕಾಶದ ಕೊರತೆ ಇದೆ. ಪೊಲೀಸ್ ಠಾಣೆ ಗ್ರಾಮ ಪಂಚಾಯಿತಿ ಜಾಗದಲ್ಲಿ ನಿರ್ಮಾಣವಾಗಿದ್ದು, ಠಾಣೆಯೇ ಸ್ಥಳಾಂತರವಾಗಲಿ ಎಂಬ ಭಾವನೆ ಸ್ಥಳೀಯಾಡಳಿತದಲ್ಲಿದೆ.

1992ರಲ್ಲಿ ಅಂದಿನ ರಾಷ್ಟ್ರೀಯ ಹೆದ್ದಾರಿ 17ರ ಬಳಿಯ ಬಾಡಿಗೆ ಕಟ್ಟಡವೊಂದರಲ್ಲಿ ಆರಂಭಗೊಂಡ ಪಡುಬಿದ್ರಿ ಪೊಲೀಸ್ ಠಾಣೆ 2002ರವರೆಗೆ ಅಲ್ಲಿ ಕಾರ್ಯಾಚರಿಸಿತು. ಪಡುಬಿದ್ರಿ ಮಾರುಕಟ್ಟೆ ರಸ್ತೆ ಬಳಿಯ ಗ್ರಾಮ ಪಂಚಾಯಿತಿಗೆ ಸೇರಿದ 15 ಸೆಂಟ್ಸ್ ಜಾಗದಲ್ಲಿ ಪೊಲೀಸ್ ಠಾಣೆ ಕಟ್ಟಡ ನಿರ್ಮಾಣಗೊಂಡು 2003ರಲ್ಲಿ ಅಲ್ಲಿಗೆ ಸ್ಥಳಾಂತರಗೊಂಡಿತು. ಪಡುಬಿದ್ರಿ ಸಂತೆ ಮಾರುಕಟ್ಟೆಯ ತ್ಯಾಜ್ಯ ಸಂಗ್ರಹ ಠಾಣೆ ಸಮೀಪದಲ್ಲೇ ಆಗುತ್ತದೆ. ದುರ್ವಾಸನೆಯನ್ನು ಸಹಿಸಿಕೊಂಡೇ ಕಾರ್ಯಾಚರಿಸುತ್ತಿದ್ದ ಪೊಲೀಸ್ ಠಾಣೆಗೆ ಕಾಲಕ್ರಮೇಣ ಸಂಕಟ ಎದುರಾಗತೊಡಗಿತು.

ವಾಹನಗಳನ್ನಿಡಲೂ ಜಾಗವಿಲ್ಲ

ಎನ್‌ಎಚ್ 17 ಆಗಿದ್ದ ರಾ.ಹೆ. 66 ಆಗಿ ಚತುಷ್ಪಥಗೊಂಡರೆ, ಠಾಣಾ ವ್ಯಾಪ್ತಿಯ ಗ್ರಾಮಗಳಲ್ಲಿ ಬೃಹತ್ ಕೈಗಾರಿಕೆಗಳು ತಲೆಎತ್ತಿವೆ. ಪರಿಣಾಮವಾಗಿ ಠಾಣಾ ವ್ಯಾಪ್ತಿಯಲ್ಲಿ ಅಪಘಾತ, ಅಕ್ರಮ ಚಟುವಟಿಕೆಗಳ ಪ್ರಕರಣಗಳೂ ಹೆಚ್ಚಿದವು. ಈ ಪ್ರಕರಣಗಳಲ್ಲಿ ಜಪ್ತಿ ವಾಡಿದ ವಾಹನಗಳನ್ನು ಇಡಲು ಠಾಣೆ ಆವರಣದಲ್ಲಿ ಜಾಗವಿಲ್ಲದ ಕಾರಣ ಠಾಣೆ ಮುಂದಿನ ಸಾರ್ವಜನಿಕ ರಸ್ತೆಯಲ್ಲಿ ತಂದಿಡಬೇಕಾದ ಅನಿವಾರ್ಯತೆ ಸೃಷ್ಟಿಯಾಯಿತು.

ತ್ತೀಚಿನ ವರ್ಷದಲ್ಲಿ ವಾಹನಗಳ ನಿಲುಗಡೆಯಿಂದ ಗ್ರಾಮದ ಅಂದ, ಸಂಚಾರಕ್ಕೆ ಧಕ್ಕೆ ಬಂದಾಗ ಸಾರ್ವಜನಿಕರು ಈ ಬಗ್ಗೆ ಸ್ಥಳೀಯಾಡಳಿತಕ್ಕೆ ದೂರು ನೀಡಲಾರಂಭಿಸಿದರು. ದೂರಿನ ಮೇರೆಗೆ ಗ್ರಾಮ ಪಂಚಾಯಿತಿಯು ಸಾರ್ವಜನಿಕ ರಸ್ತೆಯಲ್ಲಿ ನಿಲ್ಲಿಸಿರುವ ಜಪ್ತಿ ವಾಹನಗಳನ್ನು ತೆರವು ಮಾಡುವಂತೆ ಪೊಲೀಸ್ ಠಾಣೆಗೆ ಒತ್ತಡ ಹೇರಲಾರಂಭಿಸಿತು. ಠಾಣೆಯನ್ನು ವಿಸ್ತರಿಸಿ ಅಭಿವೃದ್ಧಿ ಮಾಡುವಂತೆ ಪೊಲೀಸ್ ಇಲಾಖೆ ಗ್ರಾಪಂಗೆ ಪತ್ರ ಬರೆದು ಮನವಿ ಮಾಡಿತು. ಆದರೆ ಈ ಬಗ್ಗೆ ಹೆಚ್ಚು ಒಲವು ತೋರದ ಗ್ರಾಪಂ, ಠಾಣೆ ಅಭಿವೃದ್ಧಿಗೆ ಅವಕಾಶ ನೀಡಬಾರದೆಂದು ಇತ್ತೀಚೆಗೆ ನಡೆದ ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಂಡಿದೆ. ಇದರಿಂದಾಗಿ ಪೊಲೀಸ್ ಠಾಣೆ ಬೇರೆಡೆಗೆ ಸ್ಥಳಾಂತರವಾಗುವ ಸಾಧ್ಯತೆಗಳಿವೆ.

ಅಭಿವೃದ್ಧಿಗೆ ಗ್ರಾಮಾಡಳಿತದಿಂದಲೇ ವಿರೋಧ

ಸರ್ಕಾರಿ ಇಲಾಖೆಯೇ ಆದರೂ ಠಾಣೆಯ ಜಾಗದ ಪಹಣಿ ಗ್ರಾ.ಪಂ. ಹೆಸರಲ್ಲಿರುವ ಕಾರಣ ಶಾಶ್ವತವಾಗಿ ಪೊಲೀಸ್ ಠಾಣೆ ಇಲ್ಲಿಯೇ ತಳವೂರಿದಲ್ಲಿ ಮುಂದೊಂದು ದಿನ ಗ್ರಾಪಂ ಆದಾಯಕ್ಕೆ ಧಕ್ಕೆಯಾಗಬಹುದೆಂಬ ಕಾರಣವೊಡ್ಡಿ ಐದಾರು ತಿಂಗಳ ಹಿಂದೆ ನಡೆದ ಸಾವಾನ್ಯ ಸಭೆಯಲ್ಲಿ ಠಾಣೆ ಅಭಿವೃದ್ಧಿಗೆ ಅವಕಾಶ ನೀಡದಂತೆ ಗ್ರಾವಾಡಳಿತ ನಿರ್ಣಯ ಕೈಗೊಂಡಿದೆ. ಈ ಬಗ್ಗೆ ಕಂದಾಯ ಇಲಾಖೆಗೂ ಪತ್ರ ಬರೆದಿದ್ದು, ಪೊಲೀಸರಿಗೆ ಮೌಖವಾಗಿ ತಿಳಿಸಿದೆ ಎಂಬ ವಾಹಿತಿ ಮೂಲಗಳಿಂದ ಲಭ್ಯವಾಗಿದೆ. ಪೊಲೀಸ್ ಇಲಾಖೆ ಪಡುಬಿದ್ರಿ ಗ್ರಾಮದಲ್ಲಿ ಬೇರೆಕಡೆ ಸರ್ಕಾರಿ ಜಮೀನು ಗುರುತಿಸಿಕೊಡುವಂತೆ ಗ್ರಾಮಾಡಳಿತ, ಕಂದಾಯ ಇಲಾಖೆಗೆ ಮನವಿ ಮಾಡಿದೆ. ಅದರಂತೆ ಸರ್ಕಾರಿ ಜಮೀನು ಹುಡುಕಾಟ ಮುಂದುವರೆದಿದೆ. ಒಂದು ವೇಳೆ ಪಡುಬಿದ್ರಿಯಲ್ಲಿ ಜಮೀನು ಲಭ್ಯವಾಗದಿದ್ದಲ್ಲಿ ಪೊಲೀಸ್ ಠಾಣೆ ಬೇರೆ ಗ್ರಾಮಕ್ಕೆ ಹೋಗುವುದರಲ್ಲಿ ಸಂಶಯವಿಲ್ಲ.

ಮಾರುಕಟ್ಟೆ ಪ್ರದೇಶದಲ್ಲಿರುವ ಪೊಲೀಸ್ ಠಾಣೆ ಮುಂಭಾಗ ಜಪ್ತಿ ವಾಡಿದ ವಾಹನಗಳ ನಿಲುಗಡೆಯಿಂದ ಸಂಚಾರಕ್ಕೆ ತೊಂದರೆಯಾಗುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರು ಬಂದಿವೆ. ಗ್ರಾವಾಡಳಿತವು ಠಾಣೆ ಅಭಿವೃದ್ಧಿಗೆ ಅವಕಾಶ ನೀಡದಂತೆ ನಿರ್ಣಯ ಕೈಗೊಂಡಿದೆ. ಗ್ರಾಮಾಡಳಿತದ ನಿರ್ಧಾರವನ್ನು ಕಂದಾಯ, ಪೊಲೀಸ್ ಇಲಾಖೆಗೆ ತಿಳಿಸಲಾಗಿದೆ. -ಮಂಜುನಾಥ ಶೆಟ್ಟಿ, ಪಡುಬಿದ್ರಿ ಗ್ರಾಪಂ ಪಿಡಿಒ ಸುಸಜ್ಜಿತವಾದ ಪೊಲೀಸ್ ಠಾಣೆ ನಿರ್ವಾಣಕ್ಕೆ 50 ಸೆಂಟ್ಸ್ ಜಮೀನಿನ ಅವಶ್ಯಕತೆಯಿದೆ. ಈಗಿರುವ ಠಾಣೆ ಕಟ್ಟಡದ ಜಮೀನು ಪಹಣಿ ಗ್ರಾಪಂ ಹೆಸರಲ್ಲಿದೆ. ಕಟ್ಟಡ ಇಲಾಖಾಯಡಿಯಲ್ಲಿದೆ. ಜಪ್ತಿ ವಾಡಿದ ವಾಹನಗಳನ್ನಿಡಲು ಸ್ಥಳಾವಕಾಶದ ಕೊರತೆಯಿದೆ. ಗ್ರಾಪಂ ವ್ಯಾಪ್ತಿಯಲ್ಲಿ ಬೇರೆ ಸರ್ಕಾರಿ ಜಮೀನು ಗುರುತಿಸುವಂತೆ ಕಂದಾಯ ಇಲಾಖೆಗೆ ಮನವಿ ವಾಡಲಾಗಿದೆ.-ಸಕ್ತಿವೇಲು, ಠಾಣಾಧಿಕಾರಿ, ಪಡುಬಿದ್ರಿ ಪೊಲೀಸ್ ಠಾಣೆ