ದರೋಜಿ ಕರಡಿಧಾಮದಲ್ಲಿ ಕರಡಿಗಳ ವಿಹಾರ. 
ಜಿಲ್ಲೆ

ಮಳೆ ಕೊರತೆ ಪರಿಣಾಮ -ಕಾಡು ಪ್ರಾಣಿಗಳಿಗೆ ಜಲವೇದನೆ

ಹೊಸಪೇಟೆ: ಸದಾ ಹಸಿರಿನಿಂದ ಕಂಗೊಳಿಸುತ್ತಿದ್ದ ಬೆಟ್ಟಗುಡ್ಡಗಳಲ್ಲಿ ಗಣಿಧೂಳು, ಝರಿಗಳಲ್ಲಿ ಹರಿಯದ ನೀರು, ಹಕ್ಕಿಗಳ ಕಲರವವೇ ತುಂಬಿರುತ್ತಿದ್ದ ಅರಣ್ಯದಲ್ಲಿ ಸ್ಮಶಾನ ಮೌನ, ಜೀವಜಲ, ಆಹಾರ ಸಿಗದೆ ಕಂಗೆಟ್ಟ ಪ್ರಾಣಿಗಳು…

ಬರಗಾಲದಿಂದ ಅವಳಿ ಜಿಲ್ಲೆಯ ಅರಣ್ಯ ಪ್ರದೇಶಗಳಲ್ಲಿರುವ ಸದ್ಯದ ಪರಿಸ್ಥಿತಿ ಇದು. 40 ಡಿಗ್ರಿ ಸೆಲ್ಸಿಯಸ್‌ಗೂ ಹೆಚ್ಚು ಉಷ್ಣಾಂಶ ವಿದ್ದು, ಕೆರೆಕಟ್ಟೆ,ಹಳ್ಳಕೊಳ್ಳಗಳಲ್ಲಿ ನೀರಿಲ್ಲದೆ ಪ್ರಾಣಿ, ಪಕ್ಷಿಗಳು ಹಾಹಾಕಾರ ಅನುಭವಿಸುತ್ತಿವೆ. ನೀರು, ಆಹಾರ ಅರಸಿ, ಬೇರೆ, ಬೇರೆ ಕಡೆ ಪಕ್ಷಿಗಳು ವಲಸೆ ಹೋಗುತ್ತಿವೆ.

ಯುಗಾದಿ ಸಮಯದಲ್ಲಿ ಒಂದೆರಡು ಮಳೆ ಬಿದ್ದು ಕನಿಷ್ಠ ಗುಂಡಿಗಳೆಲ್ಲಾದರೂ ನಿಲ್ಲುತ್ತಿತ್ತು. ಆದರೆ, ಈ ಬಾರಿ ನಿರೀಕ್ಷೆ ಹುಸಿಯಾಗಿದೆ. ಮಳೆ ಬಾರದೆ ಪ್ರಾಣಿ, ಪಕ್ಷಿಗಳ ಸ್ಥಿತಿ ಹೇಳತೀರದಾಗಿದೆ. ವರ್ಷದಿಂದ ವರ್ಷಕ್ಕೆ ಅಂತರ್ಜಲ ಪ್ರಮಾಣ ಕುಸಿತ ಕಾಣುತ್ತಿರುವುದು ಜನರಿಗೆ ಆತಂಕ ಹಾಗೂ ಅಧಿಕಾರಿಗಳಿಗೆ ನಿರ್ವಹಣೆ ಸವಾಲೆನಿಸಿದೆ.

ಪ್ರಾಣಿಗಳ ಆರ್ತನಾದ

ಈ ಹಿಂದೆ ಅರಣ್ಯ ಪ್ರದೇಶದಲ್ಲಿ ಹೆಜ್ಜೆ ಹೆಜ್ಜೆಗೂ ನೀರು ಹಾಗೂ ಆಹಾರ ಮೂಲಗಳು ಸಿಗುತ್ತಿದ್ದವು. ಆದರೆ, ಹೆಚ್ಚಿದ ಗಣಿಗಾರಿಕೆ, ಮಾನವ ಹಸ್ತಕ್ಷೇಪದಿಂದಾಗಿ ಕಾಡಿನಲ್ಲಿ ಆಶ್ರಯ ತಾಣಗಳ ಸಂಖ್ಯೆ ಕುಸಿದಿದ್ದು, ಬೆಟ್ಟ ಗುಡ್ಡಗಳಲ್ಲಿ ನೀರಿನ ಮೂಲಗಳು ಸಿಗುತ್ತಿಲ್ಲ. ಹಾಗಾಗಿ ಪ್ರಾಣಿ-ಪಕ್ಷಿಗಳು ಅಲೆದಾಡಬೇಕಿದ್ದು, ಕೆಲವೊಮ್ಮೆ ಸಕಾಲಕ್ಕೆ ನೀರು ಸಿಗದೆ ಪರಿತಪಿಸುತ್ತಿವೆ.

ಕಂಪ್ಲಿ, ಸಂಡೂರು, ಕೂಡ್ಲಿಗಿ ಸೇರಿದಂತೆ ಹೊಸಪೇಟೆ ಭಾಗದ ಗ್ರಾಮೀಣ ಪ್ರದೇಶ ವ್ಯಾಪ್ತಿಯ ಜನವಸತಿ ಕೇಂದ್ರಗಳಿಗೆ ಪ್ರಾಣಿಗಳು ನುಗ್ಗುತ್ತಿವೆ. ಇದರಿಂದ ಕೆಲವರು ಬಲಿಯಾಗಿದ್ದಾರೆ. ಜಲ ಸಮಸ್ಯೆ ನಿವಾರಣೆಗೆ ಸಂಬಂಧಪಟ್ಟ ಅಧಿಕಾರಿಗಳು ಕ್ರಮಕೈಗೊಳ್ಳಬೇಕಿದೆ.

ಕೃತಕ ಹೊಂಡ ನಿರ್ಮಾಣ

ಜಿಲ್ಲೆಯಲ್ಲಿ 120 ಜಾತಿಯ ಪಕ್ಷಿಗಳಿವೆ. ಈ ಪೈಕಿ 74 ಜಾತಿಯ ವಿದೇಶದ ಪಕ್ಷಿಗಳು, ಸರಿಸೃಪಗಳು ಸೇರಿದಂತೆ ಇತರ ಪ್ರಾಣಿಗಳು ಹೆಚ್ಚಾಗಿವೆ. ದರೋಜಿ ಹಾಗೂ ಗುಡೇಕೋಟೆ ಕರಡಿಧಾಮ ಹಾಗೂ ಅಂಕಸಮುದ್ರ ಪಕ್ಷಿಧಾಮವಿದೆ. ಜಿಲ್ಲೆಯಲ್ಲಿ 111 ಕಾಡು ಪ್ರಾಣಿ ಪಕ್ಷಿಗಳಿಗೆ ಕುಡಿವ ನೀರಿನ ಕೃತಕ ಹೊಂಡ ನಿರ್ಮಿಸಲಾಗಿದೆ.

ಹೊಸಪೇಟೆಯಲ್ಲಿ 16, ದರೋಜಿ 60ರಲ್ಲಿ 30 ಹೊಂಡಗಳನ್ನು ತುಂಬಿಸಲಾಗಿದೆ. ಗುಡೇಕೋಟೆ 23, ಹೂವಿನಹಡಗಲಿ 25 ಹೊಂಡಗಳನ್ನು ನಿರ್ಮಿಸಿದ್ದು, ನೀರಿಲ್ಲವಾಗಿದೆ.

ಎಂಟು ಅರಣ್ಯ ವಲಯಗಳು

ಅವಳಿ ಜಿಲ್ಲೆಯಲ್ಲಿ 8 ಅರಣ್ಯ ವಲಯಗಳಿದ್ದು, ಹೊಸಪೇಟೆ ಅತಿ ಹೆಚ್ಚು ಅಂದರೆ 21,946 ಹೆಕ್ಟೇರ್ ಪ್ರದೇಶ ಹೊಂದಿದೆ. ಉಳಿದಂತೆ ದರೋಜಿ ಕರಡಿಧಾಮ 8.275 ಹೆಕ್ಟೇರ್, ಗುಡಕೋಟೆ 20,9532 ಹೆಕ್ಟೇರ್, ಹೂವಿನಹಡಗಲಿ 11,401, ಕೂಡ್ಲಿಗಿ 20,613, ಬಳ್ಳಾರಿ ತಾಲೂಕಿನಲ್ಲಿ 11, 755 ಹೆಕ್ಟೇರ್, ಸಂಡೂರು ಉತ್ತರ 18,278, ಸಂಡೂರು ದಕ್ಷಿಣ 17,729 ಹೆಕ್ಟೇರ್ ಅರಣ್ಯಪ್ರದೇಶ ವ್ಯಾಪಿಸಿದೆ.

ಇಲ್ಲಿ ಕರಡಿ, ಚಿರತೆ, ಕಾಡುಹಂದಿ ಯಥೇಚ್ಛವಾಗಿ ಕಂಡುಬಂದರೆ, ಕೋತಿ, ಜಿಂಕೆ, ಮೊಲ, ನರಿ, ಮರಕುಟುಕ ಹಕ್ಕಿ, ಗಿಳಿ, ಕೋಗಿಲೆ, ಪಾರಿವಾಳ, ನವಿಲು, ಕೊಕ್ಕರೆ, ಗೀಜುಗನ ಹಕ್ಕಿ, ಬಾವಲಿಗಳು ಸೇರಿದಂತೆ ಹತ್ತು ಹಲವು ಬಗೆಯ ಪ್ರಾಣಿ, ಪಕ್ಷಿಗಳು ನೆಲೆ ಕಂಡುಕೊಂಡಿವೆ.

ಎಲ್ಲೆಡೆ ನೀರಿನ ಹಾಹಾಕರ ಕಂಡುಬರುತ್ತಿದೆ. ಅರಣ್ಯ ಪ್ರದೇಶಗಳಲ್ಲಿ ಹೊಂಡ ನಿರ್ಮಾಣ ನೀರಿನ ವ್ಯವಸ್ಥೆ ಮಾಡಲಾಗಿದೆ. ದರೋಜಿ ಹಾಗೂ ಗುಡೇಕೋಟೆ ಕರಡಿಧಾಮಗಳಲ್ಲಿ ಜಲ ಸಮಸ್ಯೆ ಇಲ್ಲ. ಬೇರೆ ಕಡೆ ಸ್ವಲ್ಪ ಅಭಾವ ಕಾಣುತ್ತಿದೆ. ಅರಣ್ಯ ಇಲಾಖೆ ಸಿಬ್ಬಂದಿಯು ಹೊಂಡಗಳಲ್ಲಿ ಸಮರ್ಪಕವಾಗಿ ನೀರು ತುಂಬಿಸುವ ಕಾರ್ಯ ಮಾಡುತ್ತಿದ್ದಾರೆ.| ಅರ್ಸಲಾನ್, ಅರಣ್ಯ ಉಪ ಸಂರಕ್ಷಣಾಧಿಕಾರಿ, ವಿಜಯನಗರ