ವಿಜಯವಾಣಿ ಸುದ್ದಿಜಾಲ ಗೌರಿಬಿದನೂರು
ಹೊಸೂರು ಗ್ರಾಮ ಪಂಚಾಯತಿ ಅಧ್ಯಕ್ಷೆ ಕೆ. ಗೀತಾ ವಿರುದ್ಧ 12 ಸದಸ್ಯರು ಮಂಡಿಸಿದ್ದ ಅವಿಶ್ವಾಸ ಗೊತ್ತುವಳಿಗೆ ಸೋಲಾಗಿದೆ. ಹಾಗಾಗಿ ಕೆಎಚ್‌ಪಿ ಬಣದ ಕೆ. ಗೀತಾ ಅಧ್ಯಕ್ಷೆಯಾಗಿ ಮುಂದುವರಿಯಲಿದ್ದಾರೆ.
ಒಟ್ಟು 17 ಸದಸ್ಯ ಬಲದ ಪಂಚಾಯಿತಿಯಲ್ಲಿ 12 ಸದಸ್ಯರು ಮೇ 22ರಂದು ಅಧ್ಯಕ್ಷೆ ಕೆ.ಗೀತಾ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲು ಉಪವಿಭಾಗಾಧಿಕಾರಿಗೆ ಮನವಿ ಸಲ್ಲಿಸಿದ್ದರು. ಅದರಂತೆ ಶುಕ್ರವಾರ ಉಪವಿಭಾಗಾಧಿಕಾರಿ ಅಶ್ವಿನ್ ಅವಿಶ್ವಾಸ ನಿರ್ಣಯ ಮಂಡನೆಗೆ ಸಭೆ ಕರೆದಿದ್ದರು. ಆದರೆ, ಸಹಿ ಮಾಡಿದ್ದ 12 ಸದಸ್ಯರ ಪೈಕಿ 10 ಸದಸ್ಯರು ಮಾತ್ರ ಗೊತ್ತುವಳಿ ಸಭೆಗೆ ಹಾಜರಾದ ಹಿನ್ನೆಲೆಯಲ್ಲಿ, ಕೋರಂ ಕೊರತೆಯಿಂದ ಅವಿಶ್ವಾಸ ನಿರ್ಣಯ ಮಂಡನೆಯನ್ನು ಕೈಬಿಡಲಾಗಿದೆ ಎಂದು ಉಪ ವಿಭಾಗಾಧಿಕಾರಿ ಅಶ್ವಿನ್ ಸ್ಪಷ್ಟಪಡಿಸಿ, ಮುಂದಿನ ಆರು ತಿಂಗಳ ಕಾಲ ಯಾವುದೇ ಆವಿಶ್ವಾಸ ನಿರ್ಣಯಕ್ಕೆ ಅವಕಾಶವಿರುವುದಿಲ್ಲ ಹಾಗೂ ಗೀತಾ ಅವರೇ ಅಧ್ಯಕ್ಷೆಯಾಗಿ ಮುಂದುವರಿಯಲಿದ್ದಾರೆ ಎಂದು ಸ್ಪಷ್ಟಪಡಿಸಿದರು.
ಪಂಚಾಯತಿಯ ಕಚೇರಿ ಎದುರು ಕೆಎಚ್‌ಪಿ ಬಣದ ಬೆಂಬಲಿಗರು ವಿಜಯೋತ್ಸವ ಆಚರಿಸಿದರು.
ಅಧ್ಯಕ್ಷ ಗೀತಾ ಮಾತನಾಡಿ, ಕೆಲ ಸದಸ್ಯರು ರಾಜಕೀಯಪ್ರೇರಿತವಾಗಿ ನನ್ನನ್ನು ಅಧಿಕಾರದಿಂದ ಕೆಳಗಿಳಿಸಲು ಪ್ರಯತ್ನಿಸಿದರು. ಆದರೆ, ಅದು ಲ ನೀಡಲಿಲ್ಲ. ಮುಂದಿನ ದಿನಗಳಲ್ಲಿ ಶಾಸಕರು ಹಾಗೂ ಎಲ್ಲ ಸದಸ್ಯರ ವಿಶ್ವಾಸದೊಂದಿಗೆ ಪಂಚಾಯಿತಿ ಅಭಿವೃದ್ಧಿ ಕೆಲಸಗಳನ್ನು ಮುಂದುವರಿಸುತ್ಥೇನೆ ಎಂದರು.
ಮುಖಂಡ ಕುರೂಡಿ ಆರ್. ರಾಕೇಶ್ ಮಾತನಾಡಿ, ಪಂಚಾಯಿತಿ ಅಧ್ಯಕ್ಷರು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಆದರೆ, ಕೆಲವರು ರಾಜಕೀಯಪ್ರೇರಿತವಾಗಿ ಅವಿಶ್ವಾಸ ನಿರ್ಣಯಕ್ಕೆ ಮುಂದಾಗಿದ್ದರು. ಆದರೆ, ಅವಿಶ್ವಾಸ ನಿರ್ಣಯಕ್ಕೆ ಬೆಂಬಲ ನೀಡಿದ್ದ ಇಬ್ಬರು ಸದಸ್ಯರೇ ಇಂದು ನಮಗೆ ಬೆಂಬಲ ಸೂಚಿಸಿದ ಕಾರಣ ಗೀತಾ ಅವರೇ ಅಧ್ಯಕ್ಷರಾಗಿ ಮುಂದುವರಿದ್ದಾರೆ ಎಂದರು.
ಮುಖಂಡರಾದ ಜಿ. ಬೊಮ್ಮಣ್ಣ, ನಾಗಪ್ಪ, ಕಿಮ್ಲಾ ನಾಯಕ್ ಹಾಗೂ ಇತರ ಮುಖಂಡರು, ಕಾರ್ಯಕರ್ತರು ಹಾಜರಿದ್ದರು.