ಜಿಲ್ಲೆ

ಡಿಸಿಸಿ ಬ್ಯಾಂಕ್ ಅಧ್ಯಕ್ಷರ ಚುನಾವಣೆ ಮುಂದೂಡಿಕೆ

ಶಿವಮೊಗ್ಗ: ಸೋಮವಾರ ನಡೆಯಬೇಕಿದ್ದ ಡಿಸಿಸಿ ಬ್ಯಾಂಕ್ ಅಧ್ಯಕ್ಷರ ಚುನಾವಣೆ ರಾಜಕೀಯ ತಂತ್ರಗಾರಿಕೆಯಿಂದ ಮುಂದಕ್ಕೆ ಹೋಗಿದೆ. ನಿರ್ದೇಶಕ ಸ್ಥಾನದಿಂದ ವಜಾಗೊಂಡು ಅಧ್ಯಕ್ಷ ಸ್ಥಾನ ಕಳೆದುಕೊಂಡಿದ್ದರೂ ಬ್ಯಾಂಕ್ ಆಡಳಿತ ಮಂಡಳಿಯಲ್ಲಿ ಹಿಡಿತ ಹೊಂದಿರುವ ಆರ್.ಎಂ. ಮಂಜುನಾಥ ಗೌಡ, ತಾತ್ಕಾಲಿಕವಾಗಿ ತಿರುಗೇಟು ನೀಡಲು ಯಶಸ್ವಿಯಾಗಿದ್ದಾರೆ.

ಅಧ್ಯಕ್ಷ ಸ್ಥಾನಕ್ಕೆ ನಿಗದಿಯಾಗಿರುವ ಚುನಾವಣೆಯನ್ನು ಮುಂದೂಡಲು ಹೈಕೋರ್ಟ್​ಗೆ ಮಂಜುನಾಥ ಗೌಡ ಅರ್ಜಿ ಸಲ್ಲಿಸಿದ್ದರು. ಹೈಕೋರ್ಟ್ ತಡೆಯಾಜ್ಞೆ ನೀಡಲು ನಿರಾಕರಿಸಿದ್ದರಿಂದ ಚುನಾವಣೆ ನಿಗದಿಯಾಗಿತ್ತು. ತಡೆಯಾಜ್ಞೆ ಸಿಗದಿದ್ದರೂ ಮತ್ತೊಂದು ಮಾರ್ಗದಲ್ಲಿ ಅಧ್ಯಕ್ಷರ ಚುನಾವಣೆ ನಡೆಯದಂತೆ ನೋಡಿಕೊಳ್ಳಲು ಯಶಸ್ವಿಯಾಗಿದ್ದಾರೆ.

ಸೋಮವಾರ ನಿಗದಿತ ಸಮಯದಲ್ಲಿ ಬಿಜೆಪಿ ಬೆಂಬಲಿತ ನಿರ್ದೇಶಕ, ಪ್ರಭಾರಿ ಅಧ್ಯಕ್ಷ ಎಂ.ಬಿ.ಚನ್ನವೀರಪ್ಪ, ಮಂಜುನಾಥ ಗೌಡ ಬಣದೊಂದಿಗೆ ಗುರುತಿಸಿಕೊಂಡಿರುವ ಎಚ್.ಎಲ್.ಷಡಾಕ್ಷರಿ ಹಾಗೂ ಜೆ.ಪಿ.ಯೋಗೇಶ್ ನಾಮಪತ್ರ ಸಲ್ಲಿಸಿದ್ದರು. ಬಳಿಕ ಬ್ಯಾಂಕ್​ನ ಉಳಿದಿದ್ದು ಬಿಜೆಪಿ ಬೆಂಬಲಿತ ನಾಲ್ವರು ಹಾಗೂ ಸರ್ಕಾರದಿಂದ ನಾಮ ನಿರ್ದೇಶನಗೊಂಡ ಇಬ್ಬರು ನಿರ್ದೇಶಕರು ಮಾತ್ರ.

ಎಚ್.ಎಲ್.ಷಡಾಕ್ಷರಿ ಹಾಗೂ ಜೆ.ಪಿ.ಯೋಗೇಶ್ ನಾಮಪತ್ರ ಸಲ್ಲಿಸಿ ತೆರಳಿದವರು ಮತ್ತೆ ಬರಲಿಲ್ಲ. ಈ ಬಣದಲ್ಲಿರುವ ಉಳಿದ ನಾಲ್ವರು ನಿರ್ದೇಶಕರು ಬ್ಯಾಂಕ್​ನತ್ತ ಮುಖ ಮಾಡಲೇ ಇಲ್ಲ. ಮಧ್ಯಾಹ್ನ ಮತದಾನ ಪ್ರಕ್ರಿಯೆ ಆರಂಭಿಸುವ ವೇಳೆಗೆ ಕೋರಂ ಇಲ್ಲದಂತಾಯ್ತು. ಹೀಗಾಗಿ ಚುನಾವಣಾಧಿಕಾರಿ ಡಾ. ನಾಗೇಂದ್ರ ಎಫ್.ಹೊನ್ನಳ್ಳಿ ಚುನಾವಣಾ ಪ್ರಕ್ರಿಯೆ ಮುಂದೂಡಿದರು.