ಜಿಲ್ಲೆ

ಮಳೆಗಾಲ ಪೂರ್ವಸಿದ್ಧತೆ ಕೊರತೆ : ಬೇಸಿಗೆ ಮಳೆ ಸುರಿದರೂ ಇಲಾಖೆ ನಿರುತ್ಸಾಹ : ಮುಚ್ಚಿವೆ ಚರಂಡಿಗಳು

ಪುರುಷೋತ್ತಮ ಪೆರ್ಲ ಕಾಸರಗೋಡು

ಬೇಸಿಗೆ ಮಳೆಯೊಂದಿಗೆ ಹವಾಮಾನ ಮಳೆಗಾಲದ ಸೂಚನೆ ನೀಡುತ್ತಿದ್ದರೂ ಪೂರ್ವಸಿದ್ಧತೆ ಮಾಡಿಕೊಳ್ಳುವತ್ತ ಆಡಳಿತ ವರ್ಗ ಇನ್ನೂ ಎಚ್ಚೆತ್ತುಕೊಂಡಿಲ್ಲ. ಕಾಸರಗೋಡು ನಗರಸಭೆ ಸೇರಿದಂತೆ ಜಿಲ್ಲೆಯ ನಾನಾ ಕಡೆ ಒಳಚರಂಡಿ ಸ್ವಚ್ಛತಾ ಕಾರ್ಯ ಇನ್ನೂ ಆರಂಭಿಸಿಲ್ಲ.

ದೂರಸಂಪರ್ಕ, ನೀರು ಪೂರೈಕೆ ವಿಭಾಗ ರಸ್ತೆ ಬದಿ ಅಗೆದು ಪೈಪ್ ಅಳವಡಿಸುವ ಕಾರ್ಯ ನಡೆಸುತ್ತಿದ್ದರೂ ರಸ್ತೆ ಅಂಚಿಗೆ ಬಿದ್ದ ಮಣ್ಣು ತೆರವುಗೊಳಿಸುವಲ್ಲಿ ತೋರುವ ನಿರ್ಲಕ್ಷೃದಿಂದ ಮಳೆನೀರು ಹರಿಯುವ ಚರಂಡಿ ಮುಚ್ಚಿದೆ. ಅಂತಾರಾಜ್ಯ ಸಂಪರ್ಕದ ಹೆದ್ದಾರಿ, ಜಿಲ್ಲಾ ಪಂಚಾಯಿತಿ ಹಾಗೂ ಲೋಕೋಪಯೋಗಿ ಇಲಾಖೆಯ ಇತರ ರಸ್ತೆಗಳ ಒಳಚರಂಡಿ ವ್ಯವಸ್ಥೆಯೂ ಇದಕ್ಕಿಂತ ಭಿನ್ನವಾಗಿಲ್ಲ. ಶುದ್ಧ ಕುಡಿಯುವ ನೀರಿನ ಪೂರೈಕೆ ಹಾಗೂ ದೂರವಾಣಿ ಕೇಬಲ್ ಅಳವಡಿಕೆ ನೆಪದಲ್ಲಿ ವ್ಯಾಪಕವಾಗಿ ರಸ್ತೆ ಅಂಚನ್ನು ಅಗೆಯಲಾಗುತ್ತಿದ್ದು, ಇದನ್ನು ಸಮರ್ಪಕವಾಗಿ ಮುಚ್ಚದಿರುವುದರಿಂದ ಸಮಸ್ಯೆ ಎದುರಾಗುತ್ತಿದೆ.

ಜಿಲ್ಲೆಯ ನಾನಾ ಕಡೆ ರಸ್ತೆ ಅಂಚಿಗೆ ಪೈಪು ಅಳವಡಿಕೆ ಕಾರ್ಯಗಳಿಗಾಗಿ ಅಗೆಯುತ್ತಿರುವುದರಿಂದ ರಸ್ತೆ ಶಿಥಿಲಾವಸ್ಥೆಗೆ ಕಾರಣವಾಗುತ್ತಿದ್ದರೆ, ಇನ್ನೊಂದೆಡೆ ನೀರು ಹರಿಯುವ ಚರಂಡಿ ಮುಚ್ಚಿ ರಸ್ತೆಯಲ್ಲಿ ನೀರು ಹರಿಯುವ ಸ್ಥಿತಿ ನಿರ್ಮಾಣವಾಗುತ್ತಿದೆ.

ಮಳೆಗಾಲದಲ್ಲಿ ನೀರು ಸರಾಗವಾಗಿ ಹರಿಯಲು ಸಾಧ್ಯವಾಗದೆ, ರಸ್ತೆಗೆ ನೀರು ಹರಿದು ರಸ್ತೆ ಹೊಳೆಯಂತಾಗುವ ಸನ್ನಿವೇಶ ಸೃಷ್ಟಿಯಾಗುತ್ತಿದೆ. ನಗರದ ನಾನಾ ಕಡೆ ಒಳಚರಂಡಿ ವ್ಯವಸ್ಥೆ ಅಸ್ತವ್ಯಸ್ತಗೊಂಡಿದೆ. ಒಂದೆಡೆ ಬೇಸಿಗೆ ಮಳೆ ಸುರಿಯುತ್ತಿದ್ದು, ಕಸ ತುಂಬಿದ ಚರಂಡಿಯಲ್ಲಿ ನೀರು ನಿಲ್ಲುವಂತಾಗಿದೆ. ನಗರ ಪ್ರದೇಶದ ಬಹುತೇಕ ಚರಂಡಿಗಳೂ ಒಡೆದ ಸ್ಥಿತಿಯಲ್ಲಿದ್ದು, ನೀರು ಸರಾಗವಾಗಿ ಹರಿದು ಸಾಗದಿರುವುದರಿಂದ ಸಮಸ್ಯೆಗೆ ಕಾರಣವಾಗುತ್ತಿದೆ.

ತಯಾರಿ ನಡೆಸದ ಜಿಲ್ಲಾಡಳಿತ

ಇನ್ನು ಒಂದೂವರೆ ತಿಂಗಳೊಳಗೆ ಮಳೆಗಾಲ ಆರಂಭಗೊಳ್ಳಲಿದ್ದು, ಇದಕ್ಕೆ ಪೂರ್ವ ತಯಾರಿಯನ್ನೂ ಜಿಲ್ಲಾಡಳಿತ ಕೈಗೊಂಡಿಲ್ಲ. ಸ್ಥಳೀಯಾಡಳಿತ ಸಂಸ್ಥೆಗಳ ಸಭೆ ಆಯೋಜಿಸಿ ಮಳೆಗಾಲ ಪೂರ್ವಭಾವಿ ತಯಾರಿ ಬಗ್ಗೆ ಮಾಹಿತಿ ನೀಡಬೇಕಾದ ಜಿಲ್ಲಾಡಳಿತವೂ ಸುಮ್ಮನಾಗಿದೆ. ಮುಖ್ಯವಾಗಿ ಮಳೆಗಾಲ ಆರಂಭಗೊಳ್ಳುತ್ತಿದ್ದಂತೆ ಸಾಂಕ್ರಾಮಿಕ ರೋಗಗಳೂ ತಲೆಯೆತ್ತುತ್ತಿರುವ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸಕ್ಕೆ ಮುಂದಾಗಬೇಕಾಗಿದೆ. ನಗರ ಪ್ರದೇಶಗಳಲ್ಲಿ ಮಲಿನ ನೀರು ಶುದ್ಧ ಕುಡಿಯುವ ನೀರಿಗೆ ಸೇರದಂತೆ ಹೆಚ್ಚಿನ ಕಾಳಜಿ ವಹಿಸಬೇಕಾಗಿದ್ದು, ಈ ಹಿನ್ನೆಲೆಯಲ್ಲಿ ವಿವಿಧ ಇಲಾಖೆಗಳು ಸಂಯೋಜಿತ ಕಾರ್ಯಾಚರಣೆಗೆ ಮುಂದಾಗಬೇಕಾಗಿದೆ.

ಕಾಡಿದೆ ಸಾಂಕ್ರಾಮಿಕ ರೋಗ ಭೀತಿ

ಶುಚಿತ್ವ ಕೇರಳ ಯೋಜನೆಯನ್ವಯ ಸರ್ಕಾರ ನಿರಂತರ ಪ್ರಚಾರ ನಡೆಸುತ್ತಿದ್ದರೂ ಇದು ಸೂಕ್ತ ರೀತಿಯಲ್ಲಿ ಪಾಲನೆಯಾಗುತ್ತಿಲ್ಲ ಎಂಬ ದೂರು ಕೇಳಿಬಂದಿದೆ. ಇನ್ನು ಕಾಸರಗೋಡು ನಗರಸಭಾ ವ್ಯಾಪ್ತಿಯಲ್ಲಿ ಬಹುತೇಕ ಕಡೆ ಮಲಿನ ನೀರು ರಸ್ತೆಗೆ ಹರಿಯುತ್ತಿದ್ದು, ಜನರಲ್ಲಿ ಸಾಂಕ್ರಾಮಿಕ ರೋಗ ಭೀತಿ ಕಾಡಲಾರಂಭಿಸಿದೆ. ನಗರಸಭಾ ವ್ಯಾಪ್ತಿಯ ಬಹುತೇಕ ಕಡೆ ಒಳಚರಂಡಿಗೆ ಅಳವಡಿಸಿರುವ ಸ್ಲ್ಯಾಬ್ ಒಡೆದ ಸ್ಥಿತಿಯಲ್ಲಿದ್ದರೆ, ಇನ್ನು ಕೆಲವು ಕುಸಿದು ಮಲಿನ ನೀರು ಹೊರಹರಿಯುತ್ತಿದೆ.

ನಗರಸಭೆ ವ್ಯಾಪ್ತಿಯ ಒಳಚರಂಡಿ ಶುಚೀಕರಣ ಕಾರ್ಯವನ್ನು ಶ್ರೀ ಕೈಗೆತ್ತಿಕೊಳ್ಳಲಾಗುವುದು. ಜತೆಗೆ ಚರಂಡಿಗೆ ಅಳವಡಿಸಿರುವ ಸ್ಲ್ಯಾಬ್‌ಗಳಲ್ಲಿ ಒಡೆದವುಗಳನ್ನು ತೆರವುಗೊಳಿಸಲಾಗುವುದು. ಶುಚೀಕರಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದ್ದು, ಮಳೆಗಾಲ ಪೂರ್ವ ಶುಚೀಕರಣ ಕಾರ್ಯವನ್ನು ನಗರಸಭೆ ಶೀಘ್ರ ಪೂರ್ತಿಗೊಳಿಸಲಿದೆ ಅಬ್ಬಾಸ್ ಬೀಗಂ ಕಾಸರಗೋಡು ನಗರಸಭೆ ಅಧ್ಯಕ್ಷ https://www.vijayavani.net/puchamogaru-elia-dargah-urus