ಅನ್ಸಾರ್ ಇನೋಳಿ ಉಳ್ಳಾಲ
ಮೃತದೇಹ ದಹನಕ್ಕೆ ಸಿದ್ಧವಾಗಿದ್ದ ವಿದ್ಯುತ್ ಚಿತಾಗಾರ ಎರಡು ವರ್ಷಗಳಿಂದ ಇದುವರೆಗೆ ಯಾರನ್ನೂ ತನ್ನ ಒಡಲಲ್ಲಿ ಸೇರಿಸಿಕೊಳ್ಳದೆ ಪಾಳುಬಿದ್ದಿದ್ದು ಆಧುನಿಕ ವ್ಯವಸ್ಥೆಯೇ ಪತನದ ಅಂಚಿನಲ್ಲಿದೆ. ಆಧುನಿಕತೆಗೆ ತಕ್ಕಂತೆ, ಕಡಿಮೆ ಖರ್ಚಿನಲ್ಲಿ ಮೃತದೇಹ ದಹನಕ್ಕೆ ವ್ಯವಸ್ಥೆ ಬೇಕೆಂಬ ಕೂಗಿಗೆ ಐಟಿ ಕಂಪನಿ ಸ್ಪಂದಿಸಿ ವಿದ್ಯುತ್ ಚಿತಾಗಾರ ನಿರ್ಮಿಸಿತು. ಅದು ತಯಾರಾಗಿ ವರ್ಷ ಎರಡಾದರೂ ಪ್ರಯೋಜನಕ್ಕೆ ಸಿಕ್ಕಿಲ್ಲ. ನಿರ್ವಹಣೆಯ ಸವಾಲಿನಿಂದಾಗಿ ಉಳ್ಳಾಲದ ವಿದ್ಯುತ್ ಚಿತಾಗಾರ ಪಾಳುಬಿದ್ದಿದೆ.
ಕೋವಿಡ್ ಸಂದರ್ಭ ಹಿಂದುಗಳ ಮೃತದೇಹ ದಹನದ ಸವಾಲು ಎದುರಾಗಿತ್ತು. ರುದ್ರಭೂಮಿಗಳಲ್ಲಿ ಕಟ್ಟಿಗೆಗೆ ಸಮಸ್ಯೆ ಇಲ್ಲದಿದ್ದರೂ ದಹನ ಮಾಡುವವರ ಕೊರತೆ ಕಾಡಿತು. ಆ ಸಂದರ್ಭ ಆಸರೆಯಾಗಿದ್ದು ವಿದ್ಯುತ್ ಚಿತಾಗಾರ. ಅಂಥ ವ್ಯವಸ್ಥೆ ಇದ್ದದ್ದು ಬೋಳಾರದಲ್ಲಿ ಮಾತ್ರ. ಉಳ್ಳಾಲ ನಗರಸಭಾ ವ್ಯಾಪ್ತಿಯಲ್ಲೂ ವಿದ್ಯುತ್ ಚಿತಾಗಾರ ಬೇಕೆಂಬ ಬೇಡಿಕೆ ಕೇಳಿಬಂದಾಗ ಎದುರಿಗೆ ಬಂದಿದ್ದೇ ಚೆಂಬುಗುಡ್ಡೆಯಲ್ಲಿರುವ ಹಿಂದು ರುದ್ರಭೂಮಿಯ ಜಮೀನು. ಶಾಸಕ ಯು.ಟಿ.ಖಾದರ್ ಬೇಡಿಕೆಗೆ ಇನ್ಫೋಸಿಸ್ ಸಂಸ್ಥೆ ಸ್ಪಂದಿಸಿದ್ದರಿಂದ ‘ಮೋಕ್ಷಧಾಮ’ ಎದ್ದು ನಿಂತಿತು.
ವಿದ್ಯುತ್ ಚಿತಾಗಾರ ನಿರ್ಮಾಣದ ಆರಂಭದಲ್ಲೇ ವಿಘ್ನ ಎದುರಾಯಿತು. ವಿದ್ಯುತ್ ಚಿತಾಗಾರ ಹೆಚ್ಚು ಬಾಳಿಕೆ ಬರುವುದಿಲ್ಲ, ಅಲ್ಲದೆ ಖಾಲಿಯಿರುವ 45 ಸೆಂಟ್ಸ್ ಜಮೀನು ಅನ್ಯರ ಪಾಲಾಗುವ ಆತಂಕ, ಉಳಿದ 1.05 ಎಕರೆ ಜಮೀನು ರುದ್ರಭೂಮಿ ಹೆಸರಿಗೆ ಆಗಬೇಕು ಎಂಬ ಬೇಡಿಕೆ ಸ್ಥಳೀಯರಿಂದ ಎದುರಾಗಿ ಶಿಲಾನ್ಯಾಸ ರದ್ದಾಗಿತ್ತು. ಬಳಿಕ ಶಾಸಕರ ಶಿಫಾರಸಿನಂತೆ ರುದ್ರಭೂಮಿಯ ಸುತ್ತ ಇರುವ ಸರ್ಕಾರದ ದಾಖಲೆಯಲ್ಲಿ ಫೋರಂ ಪ್ರಿವೆನ್ಷನ್ ಎಂದು ಉಲ್ಲೇಖಿಸಲಾಗಿದ್ದ 1.57 ಜಮೀನನ್ನೂ ರುದ್ರಭೂಮಿ ಹೆಸರಿಗೆ ವರ್ಗಾಯಿಸಲಾಯಿತು.
ಆರಂಭಿಕ ವಿಘ್ನ ನಿವಾರಣೆ ಬಳಿಕ 2021ರ ಜುಲೈ 12ರಂದು ಕಾಮಗಾರಿಗೆ ಅಂದಿನ ಸಚಿವ ಕೋಟ ಶ್ರೀನಿವಾಸ ಪೂಜಾರಿ ಶಿಲಾನ್ಯಾಸ ನೆರವೇರಿಸಿದ್ದರು. 2022ರ ಫೆ.12ರಂದು ಚಿತಾಗಾರ ಉದ್ಘಾಟನೆಗೊಂಡಿತ್ತು. ಈ ಫೆಬ್ರವರಿ 12ಕ್ಕೆ ಉಳ್ಳಾಲ ತಾಲೂಕಿನ ಏಕೈಕ ವಿದ್ಯುತ್ ಚಿತಾಗಾರ ಎರಡನೇ ವರ್ಷಕ್ಕೆ ಕಾಲಿಟ್ಟರೂ ನಿರ್ವಹಣೆ ಬಗ್ಗೆ ಇರುವ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ.
ಇನ್ಫೋಸಿಸ್ ಫೌಂಡೇಶನ್ ಸಿಎಸ್‌ಆರ್ ನಿಧಿಯಿಂದ 1.80 ಕೋಟಿ ರೂ. ವೆಚ್ಚದ ಲೆಕ್ಕಾಚಾರ ನೀಡಲಾಗಿದೆ. ಈ ಚಿತಾಗಾರ 3,000 ಚದರ ಅಡಿ ವಿಸ್ತೀರ್ಣವಿದ್ದು ಕಟ್ಟಡದ ಬಹುಭಾಗ ಕ್ರಿಮಟೋರಿಯಂ ಹೊಂದಿದೆ. ಶೌಚಗೃಹ, ವಿದ್ಯುತ್ ನಿರ್ವಹಣಾ ಕೊಠಡಿ ಇದೆ. ಇನ್ಫೋಸಿಸ್ ಸಂಸ್ಥೆಯ ಕಾಮಗಾರಿ ನಡೆಸುವ ಐಆರ್‌ಡಬ್ಲುೃ ಕನ್‌ಸ್ಟ್ರಕ್ಷನ್ಸ್ ಕಂಪನಿ ಕಾಮಗಾರಿ ನಡೆಸಿದೆ. ಬೋಳೂರಿನಲ್ಲಿ ವಿದ್ಯುತ್ ಚಿತಾಗಾರ ಅಳವಡಿಸಿದ ಬೆಂಗಳೂರು ಮೂಲದವರೇ ಇಲ್ಲಿಗೂ ಚಿತಾಗಾರ ಅಳವಡಿಸಿದ್ದಾರೆ. ನೂತನ ಕಟ್ಟಡದಲ್ಲಿ ಎರಡು ವಿದ್ಯುತ್ ಚಿತಾಗಾರ ಮಾಡುವ ಯೋಜನೆ ರೂಪಿಸಿದ್ದರೂ ಸದ್ಯ ಒಂದು ಚಿತಾಗಾರ ಸಿದ್ಧಗೊಳಿಸಲಾಗಿದ್ದು ಪಕ್ಕದಲ್ಲೇ ಮತ್ತೊಂದು ಚಿತಾಗಾರದ ಯೂನಿಟ್ ಸ್ಥಾಪಿಸಲಾಗಿದೆ. ಅಗತ್ಯ ಬಿದ್ದಲ್ಲಿ 25 ಲಕ್ಷ ರೂ. ವೆಚ್ಚದಲ್ಲಿ ಮತ್ತೊಂದು ಚಿತಾಗಾರ ಸಿದ್ಧಗೊಳಿಸುವ ವ್ಯವಸ್ಥೆ ಕಲ್ಪಿಸಲಾಗಿದೆ. ಎರಡು ಚಿತಾಗಾರಕ್ಕೆ ಅನುಕೂಲವಾಗುವ 42 ಕಿಲೋ ವ್ಯಾಟ್ ವಿದ್ಯುತ್ ಸಾಮರ್ಥ್ಯ, ಜನರೇಟರ್ ಇದೆ.
ಇಲ್ಲಿನ ರುದ್ರಭೂಮಿಯಲ್ಲಿ ಕಟ್ಟಿಗೆಯಲ್ಲಿ ಮೃತದೇಹ ಸಂಸ್ಕಾರ ಮಾಡಲು ಸುಮಾರು 3,500 ರೂ. ತೆರಬೇಕಾಗುತ್ತದೆ. ವಿದ್ಯುತ್ ಚಿತಾಗಾರದಲ್ಲಿ 1500ದಿಂದ 2 ಸಾವಿರ ರೂಪಾಯಿಯೊಳಗೆ ದಹನ ಸಾಧ್ಯ. ಒಂದು ಮೃತದೇಹ ಸುಡಲು 400 ರೂ. ವಿದ್ಯುತ್ ವ್ಯಯವಾಗಲಿದೆ. ಈಗಿರುವ ರುದ್ರಭೂಮಿಯಲ್ಲಿ ವರ್ಷಕ್ಕೆ 250ರಿಂದ 300ರಷ್ಟು ಕೆಲವೊಮ್ಮೆ ಹೆಚ್ಚಿಗೂ ಮೃತದೇಹ ಸಂಸ್ಕಾರ ನಡೆಯುತ್ತದೆ. ಎಲ್ಲಕ್ಕೂ ವಿದ್ಯುತ್ ಚಿತಾಗಾರ ಬಳಸಿದರೆ ನಿರ್ವಹಣೆ ಸುಲಭ. ಆದರೆ ವಿದ್ಯುತ್ ಚಿತಾಗಾರದಲ್ಲಿ ಹಿಂದು ಸಂಸ್ಕೃತಿಯಂತೆ ಮೃತದೇಹ ದಹನ ಅಸಾಧ್ಯ ಎನ್ನುವ ಕಾರಣಕ್ಕೆ ಕಟ್ಟಿಗೆಯನ್ನೇ ಬಳಸುವುದು ಹೆಚ್ಚು. ಈ ಕಾರಣದಿಂದ ವಿದ್ಯುತ್ ಚಿತಾಗಾರ ನಿರ್ವಹಣೆ ಸವಾಲು ಎನಿಸಿದೆ.
ರುದ್ರಭೂಮಿ ಬಳಿಯ ಜಮೀನಿನಲ್ಲಿ ಟ್ಯಾಂಕ್ ನಿರ್ಮಾಣ ಸಂದರ್ಭ ರುದ್ರಭೂಮಿ ನಿರ್ವಹಣಾ ಸಮಿತಿ ವಿದ್ಯುತ್ ಚಿತಾಗಾರದ ಬೇಡಿಕೆ ಇಟ್ಟಿದ್ದರು. ಇದುವರೆಗೆ ರುದ್ರಭೂಮಿಯನ್ನು ನಿರ್ವಹಿಸುತ್ತಿರುವ ಸಮಿತಿ, ವಿದ್ಯುತ್ ಚಿತಾಗಾರವನ್ನೂ ನಿರ್ವಹಿಸಬೇಕಿದೆ. ನಗರಸಭೆ ನಿರ್ವಹಿಸಬೇಕೆಂದು ಲಿಖಿತ ರೂಪದಲ್ಲಿ ಬರೆದು ಕೊಟ್ಟರೆ ಮುಂದಿನ ಕ್ರಮ ಕೈಗೊಳ್ಳಲಾಗುವುದು. -ಯು.ಟಿ.ಖಾದರ್ ವಿಧಾನಸಭೆಯ ಸ್ಪೀಕರ್
ಚಿತಾಗಾರದಲ್ಲಿ ಕೆಲಸ ಮಾಡಲು ಇಬ್ಬರಿಗೆ ತರಬೇತಿ ನೀಡಿ ನಗರಸಭೆಗೆ ನೀಡಲಾಗಿದೆ, ವಿದ್ಯುತ್ ದರ ಪಾವತಿಗಾಗಿ ನಗರಸಭೆಗೆ ಮನವಿ ಮಾಡಲಾಗಿದ್ದು ಯಾವುದೇ ಪ್ರಕ್ರಿಯೆ ಬಂದಿಲ್ಲ. -ಚಂದ್ರಹಾಸ ಉಳ್ಳಾಲ್ಅಧ್ಯಕ್ಷ, ರುದ್ರಭೂಮಿ ನಿರ್ವಹಣಾ ಸಮಿತಿ