ನಂಜನಗೂಡು: ದಕ್ಷಿಣ ಭಾರತದ ಪ್ರಮುಖ ಯಾತ್ರಾ ಸ್ಥಳಗಳಲ್ಲಿ ನಂಜನಗೂಡು ಒಂದು ಪುಣ್ಯ ಕ್ಷೇತ್ರ. ಇದನ್ನು ದಕ್ಷಿಣ ಕಾಶಿ ಎಂದೇ ಕರೆಯಲ್ಪಡುತ್ತದೆ. ಪ್ರತಿ ವರ್ಷ ನಡೆಯುವ ವೈಭವಯುತ ಗೌತಮ ಪಂಚಮ ರಥೋತ್ಸವದಲ್ಲಿ ಅಸಂಖ್ಯಾತ ಭಕ್ತರು ಸೇರುತ್ತಾರೆ. ಹೀಗಾಗಿ ಇದಕ್ಕೆ ತನ್ನದೆ ಆದ ಇತಿಹಾಸವಿದೆ.
ಈ ಸ್ಥಳ ವೈಶಿಷ್ಟೃಮಯ ಪುಣ್ಯಕ್ಷೇತ್ರವಾಗಿದ್ದು, ಪ್ರಸಿದ್ಧ ಕಪಿಲಾ ನದಿ ಇಲ್ಲಿ ಹರಿಯುತ್ತದೆ. ಇಷ್ಟೆಲ್ಲ ಖ್ಯಾತಿ ನಡುವೆಯೂ ಇಲ್ಲಿ ಮೂಲಸೌಕರ್ಯ ಎಂಬುದು ಗಗನಕುಸುಮವಾಗಿದೆ. ಇಲ್ಲಿನ ಪುರಸಭೆ ಈಗ ನಗರಸಭೆಯಾಗಿ ಮೇಲ್ದರ್ಜೆಗೇರಿದ್ದರೂ ಇಲ್ಲಿನ ನಿವಾಸಿಗಳಿಗೆ ಮೂಲ ಸೌಕರ್ಯ ಮಾತ್ರ ದೊರಕುತ್ತಿಲ್ಲ. ಇದು ಸಾರ್ವಜನಿಕ ವಲಯದಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ.
ಚರಂಡಿ, ಸಾರ್ವಜನಿಕ ಶೌಚಾಗೃಹ, ಸಂಚಾರ ದಟ್ಟಣೆ, 24/7 ಕುಡಿಯುವ ನೀರಿನ ಸಮಸ್ಯೆ, ಹಲವು ಬಡಾವಣೆಗಳಿಗೆ ಮುಡಾ ಮಾನ್ಯತೆ ಇಲ್ಲದಿರುವುದು, ಖಾತಾ ಸಮಸ್ಯೆ, ರಸ್ತೆಗಳ ಅವ್ಯವಸ್ಥೆ, ಫುಟ್‌ಪಾತ್ ಒತ್ತುವರಿ, ಬಸ್ ತಂಗುದಾಣಗಳ ನಿರ್ಮಾಣ, ಕೆಲವು ಭಾಗಗಳಲ್ಲಿ ಕೆರೆಗಳಾಗಿ ಪರಿವರ್ತನೆಯಾಗಿರುವ ಚರಂಡಿ ನೀರು, ಕಸ ವಿಲೇವಾರಿಯಲ್ಲಿ ವಿಳಂಬ, ಪಾರ್ಕ್‌ಗಳ ಅಭಿವೃದ್ಧಿ ಅಪೂರ್ಣ, ವಿದ್ಯುತ್ ಬೀದಿ ದೀಪಗಳ ಸಮಸ್ಯೆ...ಹೀಗೆ ಹಲವು ವಿಚಾರಗಳಿಗೆ ಪ್ರಮುಖ ಆದ್ಯತೆ ನೀಡಲಾಗುತ್ತಿಲ್ಲ ಎಂಬುದು ಸಾರ್ವಜನಿಕರ ಆರೋಪ.
ದಿನದಿಂದ ದಿನಕ್ಕೆ ವೇಗವಾಗಿ ಬೆಳೆಯುತ್ತಿರುವ ಪಟ್ಟಣಕ್ಕೆ ಈಗಲಾದರೂ ಕನಿಷ್ಠ ಮೂಲ ಸೌಕರ್ಯ ಕಲ್ಪಿಸುವ ನಿಟ್ಟಿನಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸುತ್ತಾರೆ ಎಂಬುದು ನಾಗರಿಕರ ಆಶಯ. ಈ ನಿಟ್ಟಿನಲ್ಲಿ ಜನಪ್ರತಿನಿಧಿಗಳು ಸಮಸ್ಯೆ ಪರಿಹಾರಕ್ಕೆ ತಕ್ಷಣ ಮುಂದಾಗಬೇಕಿದ್ದು, ಈ ಕುರಿತು ಸಾರ್ವಜನಿಕರು ಲೌಡ್‌ಸ್ಪೀಕರ್‌ನಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
50 ಕೋಟಿ ರೂ. ಬಿಡುಗಡೆ
ನಗರಸಭಾ ವ್ಯಾಪ್ತಿಯ ದೇವಿರಮ್ಮನಹಳ್ಳಿ ಬಡಾವಣೆ ಸೇರಿದಂತೆ ನಗರದ ಅಭಿವೃದ್ಧಿಗಾಗಿ ಶಾಸಕರು 50 ಕೋಟಿ ರೂ. ಬಿಡುಗಡೆ ಮಾಡಿಸಿದ್ದಾರೆ. ಹಂತ ಹಂತವಾಗಿ ನಗರವನ್ನು ಅಭಿವೃದ್ಧಿಪಡಿಸಲು ಕ್ರಮ ಕೈಗೊಳ್ಳಲಾಗುವುದು. 32 ಲಕ್ಷ ರೂ. ವೆಚ್ಚದಲ್ಲಿ ಎಲ್ಇಡಿ ಬಲ್ಬ್ ಅಳವಡಿಸಲು ಟೆಂಡರ್ ಕರೆಯಲಾಗಿದ್ದು, ಶೀಘ್ರ ಬೀದಿ ದೀಪಗಳನ್ನು ಸರಿಪಡಿಸಲಾಗುವುದು. ನಗರಸಭಾ ವ್ಯಾಪ್ತಿಯ ನಾಲ್ಕೂ ಕಡೆಗಳಲ್ಲಿ ಸಾರ್ವಜನಿಕ ಶೌಚಗೃಹ ವ್ಯವಸ್ಥೆಯನ್ನು ಕಲ್ಪಸಲು ರೂಪುರೇಷೆ ಸಿದ್ಧಪಡಿಸಲಾಗಿದೆ.
ಶ್ರೀಕಂಠಸ್ವಾಮಿ ಅಧ್ಯಕ್ಷ, ನಗರಸಭೆ
ಕುಡಿವ ನೀರನ್ನಾದರೂ ಕೊಡಲಿ
ನಗರಸಭಾ ವ್ಯಾಪ್ತಿಯ ರಾಮಸ್ವಾಮಿ ಬಡಾವಣೆ ಇನ್ನೂ ಮುಡಾ ವ್ಯಾಪ್ತಿಗೆ ಸೇರಿಲ್ಲ ಎಂಬ ಕಾರಣಕ್ಕೆ ಅಭಿವೃದ್ಧಿ ಕುಂಠಿತಗೊಂಡಿದೆ. ಈ ಬಡಾವಣೆಯಲ್ಲಿ ಸರಿಯಾದ ರಸ್ತೆ ಇಲ್ಲ. ಜತೆಗೆ ಬೀದಿ ದೀಪಗಳೂ ಇಲ್ಲ. ಕುಡಿವ ನೀರಿನ ಸೌಲಭ್ಯವಂತೂ ಇಲ್ಲವೇ ಇಲ್ಲ. ಮಳೆಗಾಲದಲ್ಲಿ ಹಾವು ಮತ್ತು ಚೇಳುಗಳು ಮನೆಯೊಳಗೆ ನುಗ್ಗುತ್ತಿದ್ದು ಬಡಾವಣೆಯನ್ನು ಅಭಿವೃದ್ಧಿಗೊಳಿಸಬೇಕಿದೆ.
ಜಿ.ಎಂ.ರೇಣುಕಾ ನಿವಾಸಿ, ರಾಮಸ್ವಾಮಿ ಬಡಾವಣೆ
ಪರದಾಡಬೇಕಾದ ಸನ್ನಿವೇಶ
ನಗರಸಭೆಯ ವ್ಯಾಪ್ತಿಯ ಹೊಸ ಬಡವಣೆಗಳಲ್ಲಿ ಮೂಲಸೌಕರ್ಯ ಎಂಬುದು ಮರೀಚಿಕೆಯಾಗಿದ್ದು, ಪರದಾಡಬೇಕಾದ ಸನ್ನಿವೇಶ ನಿರ್ಮಾಣವಾಗಿದೆ. ರಸ್ತೆ ರಿಪೇರಿ ಮಾಡುವಂತೆ ಸುಮಾರು ವರ್ಷಗಳಿಂದ ನಗರಸಭೆಗೆ ತಿಳಿಸಿದ್ದರೂ ಪ್ರಯೋಜನವಾಗಿಲ್ಲ. ಅಲ್ಲದೆ ಏರಿಯಾದ ನಿವಾಸಿಗಳೇ ರಸ್ತೆ ರಿಪೇರಿ ಮಾಡಿಸಿಕೊಳ್ಳುವ ಸನ್ನಿವೇಶ ನಿರ್ಮಾಣವಾಗಿದೆ.
ದ್ರಾಕ್ಷಾಯಿಣಿ ಸ್ಥಳೀಯ ನಿವಾಸಿ, ನಂಜನಗೂಡು
ಕಸ ವಿಲೇವಾರಿ ಆಗುತ್ತಿಲ್ಲ
ಚಾಮಲಾಪುರ ಗ್ರಾಮ ಕೂಡ ನಗರಸಭಾ ವ್ಯಾಪ್ತಿಗೆ ಬರಲಿದೆ. ಆದರೆ ಇಲ್ಲಿಗೆ ಸರಿಯಾದ ಸೌಲಭ್ಯವನ್ನು ನಗರಸಭಾ ಆಡಳಿತ ಒದಗಿಸಿ ಕೊಟ್ಟಿಲ್ಲ. 24/7 ನೀರು ಬರುತ್ತದೆ ಎಂದು ಹೇಳುತ್ತಾರೆ. ಆದರೆ ದಿನಕ್ಕೆ ನಾಲ್ಕು ಗಂಟೆಯೂ ನೀರು ಬಿಡುವುದಿಲ್ಲ. ಕಸ ವಿಲೇವಾರಿಯನ್ನು ಸರಿಯಾಗಿ ಮಾಡುತ್ತಿಲ್ಲ. ಬೀದಿ ದೀಪಗಳನ್ನು ಬೇಕಿರುವ ಜಾಗದಲ್ಲಿ ಬಿಟ್ಟು ಬೇಡದ ಜಾಗದಲ್ಲಿ ಅಳವಡಿಸಲಾಗಿದೆ.
ಶಿವಕುಮಾರ್ ನಿವಾಸಿ, ಚಾಮಲಾಪುರ ಬಡಾವಣೆ
ಹೆಚ್ಚುತ್ತಿದೆ ಅಪಘಾತಗಳ ಸಂಖ್ಯೆ
ನಗರಸಭಾ ವ್ಯಾಪ್ತಿಗೆ ಸೇರಿರುವ ದೇವಿರಮ್ಮನಹಳ್ಳಿ ಗ್ರಾಮದಲ್ಲಿ ಗೊಂದಲ ಏರ್ಪಟ್ಟಿದೆ. ನಿವೇಶನಗಳ ಖಾತೆ ಮಾಡಿಸಲು ಹೋದರೆ ನಗರಸಭೆಗೆ ಬರುತ್ತದೆಯೋ ಅಥವಾ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುತ್ತದೆಯೋ ತಿಳಿಯುತ್ತಿಲ್ಲ. ಇದರಿಂದ ಏನು ಮಾಡಬೇಕೆಂದು ತಿಳಿಯುತ್ತಿಲ್ಲ. ಅಲ್ಲದೆ ದೇವರಮ್ಮನ ಬಳಿ ರಸ್ತೆ ಗುಂಡಿ ಬಿದ್ದಿದ್ದು, ಅಪಘಾತಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗುತ್ತಿವೆ.
ಕೀರ್ತಿ ನಂಜನಗೂಡು ನಿವಾಸಿ
ಕಪಿಲಾ ನದಿ ಸೇರುತ್ತಿದೆ ಮೋರಿ ನೀರು
ನಂಜನಗೂಡು ಪುರಸಭೆ ನಗರಸಭೆಯಾಗಿ ಮೇಲ್ದರ್ಜೆಗೇರಿದರೂ ಅಭಿವೃದ್ಧಿಯಲ್ಲಿ ಮಾತ್ರ ಹಿಂದೆ ಬಿದ್ದಿದೆ. ದಿನದ 24 ಗಂಟೆ ಕುಡಿಯುವ ನೀರಿನ ವ್ಯವಸ್ಥೆ ಎಂದು ಹೇಳಲಾಗುತ್ತಿದೆಯಾದರೂ ಸಮರ್ಪಕವಾಗಿ ಪೂರೈಕೆ ಆಗುತ್ತಿಲ್ಲ. ಖಾತೆಗಳ ಬದಲಾವಣೆಯಲ್ಲಿ ಸಾಕಷ್ಟು ಗೊಂದಲ ಇದೆ. ಹಲವು ಭಾಗಗಳಲ್ಲಿ ಬೀದಿ ದೀಪಗಳ ಅವ್ಯವಸ್ಥೆ ತಾಂಡವವಾಡುತ್ತಿದೆ. ಹೊಸ ಬಸ್ ನಿಲ್ದಾಣದ ಬಳಿ ಮೋರಿ ನೀರು ಈಗಲೂ ಕಪಿಲಾ ನದಿ ಸೇರುತ್ತದೆ. ಜತೆಗೆ ಯುಜಿಡಿ ಸಮಸ್ಯೆ ಕೂಡ ಕ್ಲಿಯರ್ ಆಗಿಲ್ಲ.
ದೇವು ನಗರಸಭಾ ಸದಸ್ಯ
ತನಿಖೆ ನಡೆಸಲು ಮೀನಮೇಷ
ಅಧಿಕಾರಿಗಳ ಆಡಳಿತಾವಧಿಯಲ್ಲಿ ನಗರಸಭೆಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದೆ. ಒಂದೇ ಕಾಮಗಾರಿಗೆ ಎರಡು ಬಿಲ್‌ಗಳನ್ನು ಮಾಡಿಕೊಂಡಿದ್ದಾರೆ. ಇತ್ತೀಚೆಗೆ ನಡೆದ ಮೊದಲ ಸಭೆಯಲ್ಲಿ ಎಲ್ಲ ವಾರ್ಡ್‌ಗಳ ಸದಸ್ಯರು ಭ್ರಷ್ಟಾಚಾರದ ಬಗ್ಗೆ ದನಿ ಎತ್ತಿದ್ದರು. ಆದರೂ ಭ್ರಷ್ಟಾಚಾರದ ಬಗ್ಗೆ ತನಿಖೆ ನಡೆಸಲು ಮೀನಮೇಷ ಎಣಿಸುತ್ತಿದ್ದಾರೆ. ಈ ನಡುವೆ ನಗರಸಭೆಯಿಂದ 25,000ಕ್ಕೂ ಹೆಚ್ಚು ರೂ. ನೀರಿನ ಬಿಲ್ ಕೊಡುವ ಮೂಲಕ ಸಾರ್ವಜನಿಕರನ್ನು ಹೆದರಿಸುವ ಕೆಲಸ ಮಾಡಲಾಗುತ್ತಿದೆ. ಈ ಬಗ್ಗೆ ಸೂಕ್ತ ಕ್ರಮ ವಹಿಸಬೇಕು.
ಕಪಿಲೇಶ್ ನಗರಸಭಾ ಸದಸ್ಯ
ಶೀಘ್ರ ಅನುದಾನ ಬಿಡುಗಡೆ
ನಂಜನಗೂಡು ಪುರಸಭೆಯಿಂದ ನಗರಸಭೆಗೆ ಮೇಲ್ದರ್ಜೆಗೇರಿದ್ದು, ಇನ್ನಾದರೂ ಅಭಿವೃದ್ಧಿಗೆ ಆದ್ಯತೆ ನೀಡಬೇಕಿದೆ. ಈ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿದ್ದು, ಶೀಘ್ರ ಅನುದಾನ ಬಿಡುಗಡೆಗೊಳ್ಳಲಿದೆ. ನಗರಸಭೆ ವ್ಯಾಪ್ತಿಯಲ್ಲಿ ಬೀದಿ ದೀಪ, ಸಾರ್ವಜನಿಕ ಶೌಚಗೃಹ, ಹೊಸ ಬಡಾವಣೆಗಳ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲಾಗುವುದು. ಆ ಮೂಲಕ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಲಾಗುವುದು.
ದರ್ಶನ್ ಧ್ರುವನಾರಾಯಣ ಶಾಸಕ, ನಂಜನಗೂಡು
ನಗರಸಭೆ ವ್ಯಾಪ್ತಿಯ ಪ್ರತಿ ವಾರ್ಡ್‌ಗೆ ಪ್ರತಿ ಸೋಮವಾರ ಶಾಸಕರು ಮತ್ತು ನಗರಸಭಾ ಸದಸ್ಯರೊಂದಿಗೆ ಭೇಟಿ ನೀಡಿ ಪರಿಶೀಲನೆ ಮಾಡಲಾಗುತ್ತಿದೆ. ನಗರಸಭೆಗೆ ಸಂಬಂಧಿಸಿದ ಸಮಸ್ಯೆಗಳ ಕುರಿತು ಹೆಚ್ಚಿನ ಮಾಹಿತಿಯನ್ನು ಕಚೇರಿಯ ದಾಖಲೆಗಳಲ್ಲಿ ನೋಡಿ ಮಾಹಿತಿ ಪಡೆಯಲಾಗುವುದು. ಎಲ್ಲ ಸಮಸ್ಯೆಗಳನ್ನು ಹಂತ ಹಂತವಾಗಿ ಪರಿಹರಿಸುವ ನಿಟ್ಟಿನಲ್ಲಿ ಕ್ರಮ ವಹಿಸಲಾಗುವುದು.
ನಂಜುಂಡಸ್ವಾಮಿ ಪೌರಾಯುಕ್ತ, ನಗರಸಭೆ ನಂಜನಗೂಡು