ಜಿಲ್ಲೆ

ಜಿಲ್ಲೆಯಲ್ಲಿ ಅತಿಥಿ ಉಪನ್ಯಾಸಕರ ಕೊರತೆ

ಕೆ.ಆರ್.ಪ್ರಸಿನ್ ಹಾಸನ

ಜಿಲ್ಲೆಯ ಪದವಿ ಕಾಲೇಜುಗಳಲ್ಲಿ ವಿವಿಧ ವಿಷಯಗಳನ್ನು ಬೋಧಿಸುವ ಅತಿಥಿ ಉಪನ್ಯಾಸಕರು ಇಲ್ಲದೆ ಉನ್ನತ ಶಿಕ್ಷಣದ ಕನಸು ಕಂಡಿರುವ ಮಕ್ಕಳಿಗೆ ತರಗತಿಗಳು ನಡೆಯದೆ ಸಮಸ್ಯೆ ಎದುರಿಸುತ್ತಿದ್ದಾರೆ.

ಆಗಸ್ಟ್ ತಿಂಗಳಿನಿಂದಲೇ ಎಲ್ಲ ತರಗತಿ ಆರಂಭ ಆಗಿವೆ. ಆದರೆ, 2024-25ನೇ ಸಾಲಿಗೆ 10 ತಿಂಗಳ ಅವಧಿಗೆ ನೇಮಕ ಮಾಡಿಕೊಂಡಿದ್ದ ಅತಿಥಿ ಉಪನ್ಯಾಸಕರನ್ನು, ಅವಧಿ ಮುಗಿದ ಹಿನ್ನೆಲೆಯಲ್ಲಿ ಆಗಸ್ಟ್ 4ರಂದೇ ಕರ್ತವ್ಯದಿಂದ ಬಿಡುಗಡೆಗೊಳಿಸಿದ್ದು, ಮರು ನೇಮಕ ಮಾಡಿಕೊಂಡಿಲ್ಲ. ಹೀಗಾಗಿ ಪಾಠ ಮಾಡಲು ಬೋಧಕರಿಲ್ಲದೆ ಮಕ್ಕಳು ತೊಂದರೆ ಪಡುವಂತಾಗಿದೆ.

ಜಿಲ್ಲೆಯಲ್ಲಿ ನಗರ ಮತ್ತು ಗ್ರಾಮೀಣ ಭಾಗ ಸೇರಿ ಒಟ್ಟು 27 ಸರ್ಕಾರಿ ಪದವಿ ಕಾಲೇಜುಗಳಿವೆ. ಇಲ್ಲಿ ಒಟ್ಟಾರೆ 13-14 ಸಾವಿರ ಮಕ್ಕಳು ವಿವಿಧ ಕೋರ್ಸ್‌ಗಳನ್ನು ಪಡೆದು ವ್ಯಾಸಂಗ ಮಾಡುತ್ತಿದ್ದಾರೆ. ಆದರೀಗ ಇವರಿಗೆ ಸಮರ್ಪಕವಾಗಿ ಬೋಧಿಸಲು ಶಿಕ್ಷಕರಿಲ್ಲದಂತಾಗಿದೆ.

ಸದ್ಯದ ಅಂಕಿ ಅಂಶಗಳ ಪ್ರಕಾರ ಜಿಲ್ಲೆಯ ಬಹುತೇಕ ಕಾಲೇಜುಗಳಲ್ಲಿ ಶೇ.30 ರಷ್ಟು ಕಾಯಂ ಉಪನ್ಯಾಸಕರಿದ್ದರೆ, ಶೇ.70ಷ್ಟು ಅತಿಥಿ ಉಪನ್ಯಾಸಕರಿದ್ದಾರೆ. ಉದಾಹರಣೆಗೆ ಗಂಧದಕೋಠಿಯಲ್ಲಿರುವ ಸರ್ಕಾರಿ ಮಹಿಳಾ ಕಾಲೇಜಿನಲ್ಲಿ 10 ಕಾಯಂ ಉಪನ್ಯಾಸಕರಿದ್ದರೆ, 31 ಅತಿಥಿ ಉಪನ್ಯಾಸಕರ ತಂಡ ಇದೆ. ಜಿಲ್ಲೆಯಲ್ಲಿ ಸುಮಾರು 500-600 ಅತಿಥಿ ಉಪನ್ಯಾಸಕರಿದ್ದು, ಇಷ್ಟೂ ಜನ ಈಗ ಹೊರಗೆ ಇರುವುದರಿಂದ ಇವರು ಬೋಧನೆ ಮಾಡುತ್ತಿದ್ದ ವಿಷಯಗಳ ಒಂದೇ ಒಂದು ತರಗತಿ ನಡೆದಿಲ್ಲ.

ಗೊಂದಲಕ್ಕೆ ಕಾರಣವೇನು: ಹಿಂದಿನ ಬಿಜೆಪಿ ಸರ್ಕಾರವೂ ಒಂದು ಸಮಿತಿ ಮಾಡಿ, ಅದರಿಂದ ವರದಿ ಪಡೆದು ಅತಿಥಿ ಉಪನ್ಯಾಸಕರ ಸಂಬಳ ಹೆಚ್ಚಳ ಮಾಡುವುದರ ಜತೆಗೆ ಕೆಲವು ಸೌಲಭ್ಯಗಳನ್ನೂ ಕಲ್ಪಿಸಿತು. ಮುಂದುವರಿದು ಅತಿಥಿ ಉಪನ್ಯಾಸಕರು ಮುಂದಿನ ಮೂರು ವರ್ಷದೊಳಗೆ ಕಡ್ಡಾಯವಾಗಿ ಎನ್‌ಇಟಿ ಹಾಗೂ ಎಸ್‌ಎಲ್‌ಇಟಿ ಪಾಸ್ ಮಾಡಿಕೊಳ್ಳುವಂತೆ ಸೂಚನೆ ಸಹ ನೀಡಿ ಕಾಲಾವಧಿ ನಿಗದಿ ಮಾಡಿತ್ತು.

ಅದಾದ ಬಳಿಕ ರಾಜ್ಯ ಹೈಕೋರ್ಟ್ ಸಹ ಯುಜಿಸಿ ನಿಯಮಾವಳಿ ಪ್ರಕಾರ ಎನ್‌ಇಟಿ ಹಾಗೂ ಎಲ್‌ಎಲ್‌ಇಟಿ ಪಾಸಾಗಿರುವ ಮತ್ತು ಪಿಎಚ್.ಡಿ ಮುಗಿಸಿರುವ ಅರ್ಹತೆ ಹೊಂದಿರುವರನ್ನಷ್ಟೇ ಅತಿಥಿ ಉಪನ್ಯಾಸಕರನ್ನಾಗಿ ನೇಮಕ ಮಾಡಿಕೊಳ್ಳುವಂತೆ ಎರಡು ವರ್ಷಗಳ ಹಿಂದೆ ಹೈಕೋರ್ಟ್ ಸರ್ಕಾರಕ್ಕೆ ಕಟ್ಟುನಿಟ್ಟಿನ ಸೂಚನೆ ನೀಡಿತ್ತು. ಅದರಂತೆ ರಾಜ್ಯ ಸರ್ಕಾರದ ಉನ್ನತ ಶಿಕ್ಷಣ ಇಲಾಖೆ ನಡೆದುಕೊಳ್ಳಲು ನಿರ್ಧರಿಸಿ ಅರ್ಹ ಅತಿಥಿ ಉಪನ್ಯಾಸಕರನ್ನು ಕೌನ್ಸೆಲಿಂಗ್ ಮೂಲಕ ನೇಮಕ ಮಾಡಿಕೊಳ್ಳಲು 2022-23 ರಲ್ಲಿ ಮುಂದಾಯಿತು. ನೆಟ್ ಮತ್ತು ಸ್ಲೆಟ್ ಪಾಸು ಮಾಡದೆ ಇರುವವರಿಗೆ ಸಂಕಟ ಶುರುವಾಯಿತು.

ಕೋರ್ಟ್ ಮೊರೆ: ಕೂಡಲೇ ಕೆಲವರು ಹೈಕೋರ್ಟ್ ಮತ್ತೆ ಕೆಲವರು ಧಾರವಾಡ ವಿಭಾಗೀಯ ಪೀಠದ ಮೊರೆ ಹೋಗಿ, ನಾವು ಹಲವು ವರ್ಷಗಳಿಂದ ಪಾಠ-ಪ್ರವಚನ ಮಾಡಿಕೊಂಡು ಬಂದಿದ್ದೇವೆ. ಎಷ್ಟೋ ಜನರಿಗೆ ಬೋಧನಾ ವೃತ್ತಿಯೇ ಜೀವನಾಧಾರವಾಗಿದೆ. ನಮಗೆ ಸೇವಾ ಅನುಭವ ಇದೆ. ಆದರೂ ಕೆಲಸದಿಂದ ವಿಮುಕ್ತಿಗೊಳಿಸಲಾಗುತ್ತಿದೆ. ಇಷ್ಟು ಕೆಲಸ ಮಾಡಿರುವ ನಮಗೆ ಅನ್ಯಾಯ ಆಗಿದೆ. ಹಾಗಾಗಿ ನಮ್ಮನ್ನೂ ನೇಮಕಾತಿಯಲ್ಲಿ ಪರಿಗಣಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿ ಎಂದು ಮನವಿ ಮಾಡಿದರು. ವಿಪರ್ಯಾಸ ಎಂದರೆ ಇವರ ಮನವಿಯನ್ನೂ ಪುರಸ್ಕರಿಸಿದ ನ್ಯಾಯಪೀಠ ಆರಂಭದಲ್ಲಿ ಸರ್ಕಾರದ ನೇಮಕಾತಿ ಪ್ರಕ್ರಿಯೆಗೆ ತಡೆ ನೀಡಿ ನಂತರ ಇವರನ್ನೂ ಪರಿಗಣಿಸಿ ಎಂದು ನಿರ್ದೇಶನ ನೀಡಿದೆ.

ಒಂದೆಡೆ ಅರ್ಹರನ್ನು ನೇಮಕ ಮಾಡಿ ಎಂದಿರುವ ಕೋರ್ಟ್ ಮತ್ತೊಂದೆಡೆ ಎನ್‌ಇಟಿ-ಸ್ಲೆಟ್ ಪಾಸ್ ಮಾಡದೆ ಇರುವವರನ್ನೂ ಪರಿಗಣಿಸಿ ಎಂದು ನಿರ್ದೇಶನ ನೀಡಿರುವುದರಿಂದ ಕಳೆದ ಎರಡು ವರ್ಷಗಳಿಂದಲೂ ಅತಿಥಿ ಉಪನ್ಯಾಸಕರ ನೇಮಕಾತಿ ಪ್ರಕ್ರಿಯೆ ಗೊಂದಲದ ಗೂಡಾಗಿ ಪರಿಣಮಿಸಿದೆ. ನೇಮಕಾತಿ ಕೌನ್ಸೆಲಿಂಗ್ ನಡೆಸಲು ಸರ್ಕಾರಕ್ಕೆ ಇದೇ ಹೈಕೋರ್ಟ್ ತೀರ್ಪು ಅಡ್ಡಿಯಾಗಿದೆ.

ಹೈಕೋರ್ಟ್ ನಿರ್ದೇಶನದಂತೆ ನೆಟ್, ಸ್ಲೆಟ್ ಹಾಗೂ ಪಿಎಚ್.ಡಿ ಮಾಡಿರುವವರು ಎಲ್ಲ ನಿಯಮಾವಳಿಗಳಿಗೆ ಅನುಗುಣವಾಗಿ ಪಾಠ ಮಾಡಲು ಸಿದ್ಧರಿದ್ದೇವೆ. ಆದರೆ ನ್ಯಾಯಾಲಯ ಹಾಗೂ ಸರ್ಕಾರದ ಕಡೆಯಿಂದ ಅಂತಿಮ ನಿರ್ಧಾರ ಹೊರ ಬೀಳದ ಕಾರಣ ಜಿಲ್ಲೆ ಮಾತ್ರವಲ್ಲದೆ ರಾಜ್ಯಾದ್ಯಂತ ಸಾವಿರಾರು ಅರ್ಹ ಅತಿಥಿ ಉಪನ್ಯಾಸಕರಿಗೆ ತೊಂದರೆಯಾಗಿದೆ ಎಂಬುದು ಅನೇಕರ ಅಳಲಾಗಿದೆ.