ಶಿರಸಿ: ಹೊಸ ಸಂಪರ್ಕಗಳು, ಈಗಾಗಲೇ ಇರುವ ಸಂಪರ್ಕಗಳಿಗೆ ವಿದ್ಯುತ್ ಗುಣಮಟ್ಟ ಸುಧಾರಿಸಲು ತಾಲೂಕಿನಲ್ಲಿ ಒಟ್ಟು 250 ಹೊಸ ವಿದ್ಯುತ್ ಪರಿವರ್ತಕ ಅಳವಡಿಸಬೇಕಾಗಿದೆ. ಆದರೆ, ಹೆಸ್ಕಾಂನಲ್ಲಿ ಅನುದಾನದ ಕೊರತೆಯಿಂದ ಹೊಸ ಟಿಸಿ ಅಳವಡಿಸಲಾಗುತ್ತಿಲ್ಲ.
ಬೇಸಿಗೆ ದಿನಗಳು ಬಂದರೆ ವಿದ್ಯುತ್ ಬಳಕೆ, ಬೇಡಿಕೆ ಜಾಸ್ತಿ. ತಾಪಮಾನ ತಣಿಸಿಕೊಳ್ಳಲು ಫ್ಯಾನ್, ಎಸಿ ಬಳಕೆಗೆ ಹೆಚ್ಚಿನ ವಿದ್ಯುತ್ ಬಳಕೆಯಾದರೆ, ಗ್ರಾಮೀಣ ಪ್ರದೇಶದಲ್ಲಿ ಕೃಷಿ ಕಾರ್ಯಕ್ಕಾಗಿ ಪಂಪ್‌ಸೆಟ್ ಬಳಕೆ ಹೆಚ್ಚಾಗುತ್ತದೆ. ಇತ್ತೀಚಿನ ವರ್ಷಗಳಲ್ಲಿ ತಾಲೂಕಿನಲ್ಲಿ ಅಡಕೆ ಬೆಳೆ ಜಾಸ್ತಿಯಾಗಿದ್ದರಿಂದ ಬೇಸಿಗೆಯ ದಿನಗಳಲ್ಲಿ ಬೋರ್‌ಗಳಿಗೆ ಪಂಪ್ ಅಳವಡಿಸಿ ನೀರುಣಿಸಬೇಕಾದ ಸ್ಥಿತಿ ಇದೆ. ಹೀಗಾಗಿ, ಇರುವ ವಿದ್ಯುತ್ ವ್ಯವಸ್ಥೆಯ ಮೇಲೆ ಒತ್ತಡ ಜಾಸ್ತಿಯಾಗಿ ವೋಲ್ಟೇಜ್ ಕೊರತೆ ಸಮಸ್ಯೆಯೂ ಕಾಡುತ್ತದೆ. ಇದನ್ನು ತಪ್ಪಿಸುವ ಸಲುವಾಗಿ ಹೊಸದಾಗಿ ವಿದ್ಯುತ್ ಪರಿವರ್ತಕ ಅಳವಡಿಕೆಗೆ ಬೇಡಿಕೆ ಹೆಚ್ಚಿದೆ. ಪ್ರತಿ ಸೆಕ್ಷನ್ ವ್ಯಾಪ್ತಿಯಲ್ಲಿ 30ರಿಂದ 35ರವರೆಗೂ ಹೊಸ ಟಿಸಿಗಳ ಬೇಡಿಕೆ ಇದೆ.
ತಾಲೂಕಿನಲ್ಲಿ ಪೂರ್ವ ಭಾಗವಾದ ಬನವಾಸಿ, ದಾಸನಕೊಪ್ಪ ಹೋಬಳಿಯಲ್ಲಿ ಬೇಸಿಗೆಯ ದಿನಗಳಲ್ಲಿ ವಿದ್ಯುತ್ ಬೇಡಿಕೆ ಹೆಚ್ಚುತ್ತದೆ. ಕೃಷಿ ಕ್ಷೇತ್ರಕ್ಕೆ ನೀರುಣಿಸುವ ಸಲುವಾಗಿ ರಾತ್ರಿ ಸಹ ಹೊಲದಲ್ಲಿ ಪಂಪ್‌ಸೆಟ್ ಬಳಿಯೇ ಕಾಲ ಕಳೆಯುವ ರೈತರ ಸಂಖೆಯೂ ಜಾಸ್ತಿ ಇದೆ. ರಾತ್ರಿಯ ವೇಳೆ ವಿದ್ಯುತ್ ವೋಲ್ಟೇಜ್ ಕೊರತೆಯಿಂದ ಪಂಪ್ ಸೆಟ್ ಸ್ಥಗಿತಗೊಂಡರೆ ರೈತರು ಮತ್ತೆ ಚಾಲೂ ಮಾಡುತ್ತಾರೆ. ಇದನ್ನು ತಪ್ಪಿಸುವ ಸಲುವಾಗಿ ಪ್ರತ್ಯೇಕ ವಿದ್ಯುತ್ ವಿತರಕ ಅಳವಡಿಸಿ ವೋಲ್ಟೇಜ್ ಕೊರತೆಯನ್ನು ಸರಿಪಡಿಸಿಕೊಡಿ ಎಂಬುದು ಈ ಭಾಗದ ಅನೇಕ ರೈತರ ಆಗ್ರಹ. ಇತ್ತೀಚೆಗಷ್ಟೇ ಬನವಾಸಿ ಭಾಗದಲ್ಲಿ ರೈತರೆಲ್ಲ ಹೆಸ್ಕಾಂ ಕಚೇರಿ ಮುಂದೆ ಧರಣಿಯನ್ನೂ ನಡೆಸಿದ್ದರು.
ಇನ್ನೊಂಡೆ ಹೊಸ ವಿದ್ಯುತ್ ಪರಿವರ್ತಕ ಅಳವಡಿಕೆಗೆ ಅನುದಾನದ ಕೊರತೆ ಇದೆ. ಹೀಗಾಗಿ ಅಳವಡಿಕೆ ಕಾರ್ಯ ಮಂದಗತಿಯಲ್ಲಿ ಸಾಗಿದೆ. ತಾಲೂಕಿನ ಅನೇಕ ಗ್ರಾಮಗಳಲ್ಲಿ ಹೊಸ ವಿದ್ಯುತ್ ಪರಿವರ್ತಕ ಅಳವಡಿಕೆಗೆ ಕಂಬಗಳನ್ನು ಜೋಡಿಸಲಾಗಿದ್ದರೂ ಪರಿವರ್ತಕ ಅಳವಡಿಕೆ ಕಾರ್ಯ ನಡೆದಿಲ್ಲ. ’ವಿದ್ಯುತ್ ವೋಲ್ಟೇಜ್ ಸಮಸ್ಯೆ ನಿವಾರಣೆ ಸಂಬಂಧ ಹೊಸ ಟಿಸಿ ಹಾಕಲು ಅರ್ಜಿ ಸಲ್ಲಿಸಿ ಹಲವು ತಿಂಗಳು ಕಳೆದರೂ ಈವರೆಗೆ ಅಳವಡಿಕೆಯಾಗಿಲ್ಲ. ಖಾಸಗಿಯಾಗಿ ಟಿಸಿ ಅಳವಡಿಸಲು ಮುಂದಾದರೆ ಲಕ್ಷಾಂತರ ರೂಪಾಯಿ ಗ್ರಾಹಕನ ಮೈಮೇಲೆ ಬರುತ್ತದೆ. ಹೀಗಾಗಿ ಸಾರ್ವತ್ರಿಕ ಬೇಡಿಕೆಗೆ ಅನುಗುಣವಾಗಿ ಟಿಸಿ ಅಳವಡಿಸುವವರೆಗೂ ಕಾಯುವ ಸ್ಥಿತಿ ಎಲ್ಲರದಾಗಿದೆ’ ಎನ್ನುತ್ತಾರೆ ಶಿರಸಿಯ ಗ್ರಾಮೀಣ ಭಾಗದ ವಿದ್ಯುತ್ ಗ್ರಾಹಕ ರಾಘವೇಂದ್ರ ನಾಯ್ಕ.
‘ಡಿಸೆಂಬರ್ ಆರಂಭದಿಂದಲೂ ಹೊಸ ಟಿಸಿ ಕೊಡಿ ಎಂದು ಹೆಸ್ಕಾಂ ಕಚೇರಿಗೆ ಅಲೆದಾಟ ಮಾಡಲಾಗುತ್ತಿದೆ. ಆಯಿಲ್ ಬಂದಿಲ್ಲ, ಟಿಸಿಗಳ ಉಪಕರಣ ಬಂದಿಲ್ಲ ಎಂದು ಸಬೂಬು ಹೇಳಲಾಗುತ್ತಿದೆ. ಕೆಲವೆಡೆ ವಿದ್ಯುತ್ ಕಂಬಗಳನ್ನು ಹುಗಿದು, ತಂತಿ ಹಾಕಿ ಕಾಮಗಾರಿ ಪೂರ್ಣಗೊಂಡರೂ ಟಿಸಿ ನೀಡುವ ಕೆಲಸ ಮಾತ್ರ ಆಗುತ್ತಿಲ್ಲ’ ಎಂದು ಹೊಸ ಟಿಸಿಗಾಗಿ ಕಾಯುತ್ತಿರುವ ಹಲವು ರೈತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬನವಾಸಿ ಭಾಗದಲ್ಲಿ ಗ್ರಿಡ್ ಕಾರ್ಯಾರಂಭ ಆದ ಬಳಿಕ ಇಲ್ಲಿಯ ವೋಲ್ಟೇಜ್ ಸಮಸ್ಯೆ ಬಗೆಹರಿಯಲಿದೆ. ತಾಲೂಕಿನಲ್ಲಿ ಹೊಸ ಟಿಸಿ ಸ್ಥಾಪನೆಗೆ ಬೇಡಿಕೆ ಇದ್ದು, ಹಂತ ಹಂತವಾಗಿ ಅಳವಡಿಸಿ ವಿದ್ಯುತ್ ಸಮಸ್ಯೆ ಬಗೆಹರಿಸುತ್ತೇವೆ. ನಾಗರಾಜ ಪಾಟೀಲ, ಎಇಇ, ಹೆಸ್ಕಾಂ ಶಿರಸಿ