ಜಿಲ್ಲೆ

ಇಂಗ್ಲಿಷ್ ಶಿಕ್ಷಕರಿಗೆ ಬರ: ರಾಜ್ಯದ ಸರ್ಕಾರಿ ಶಾಲೆಗಳಿಗೆ ಗರ, ಮಕ್ಕಳ ಕಲಿಕೆಗೆ ಗ್ರಹಣ

| ರಮೇಶ ದೊಡ್ಡಪುರ ಬೆಂಗಳೂರು

ಮಾತೃಭಾಷೆ ಕನ್ನಡದಲ್ಲಿ ಕಲಿಕೆ ನಮ್ಮೆಲ್ಲರ ಆದ್ಯತೆಯಾದರೂ ಜಾಗತಿಕ ಮಟ್ಟದಲ್ಲಿ ಸ್ಪರ್ಧಾತ್ಮಕತೆ ಎದುರಿಸುವುದಕ್ಕೆ ಅಗತ್ಯವಾದ ಇಂಗ್ಲಿಷನ್ನು ಒಂದು ಭಾಷೆಯಾಗಿ ಕಲಿಯುವ ರಾಜ್ಯದ ಸರ್ಕಾರಿ ಶಾಲೆಗಳ ಮಕ್ಕಳ ಆಸೆಗೆ ಅಡ್ಡಿಯಾಗಿರುವ ವಿಘ್ನಗಳು ಸದ್ಯಕ್ಕೆ ಸರಿಯುವ ಲಕ್ಷಣ ಕಾಣುತ್ತಿಲ್ಲ. ಸರ್ಕಾರ ಇರುವ ಕನ್ನಡ ಮಾಧ್ಯಮ ಶಾಲೆಗಳನ್ನು ಮುಚ್ಚುವ ಹಾಗೂ ಇಂಗ್ಲಿಷ್

ಮಾಧ್ಯಮವಾಗಿ ಪರಿವರ್ತಿಸುವಲ್ಲಿ ತೋರುವಷ್ಟು ಆಸಕ್ತಿಯನ್ನು ಇಂಗ್ಲಿಷ್ ಭಾಷಾ ಶಿಕ್ಷಕರನ್ನು ನೇಮಿಸಲು ತೆಗೆದುಕೊಳ್ಳುತ್ತಿಲ್ಲ. ಈ ಸಮಸ್ಯೆಯಿಂದಾಗಿ ಇಂಗ್ಲಿಷ್ ಮಾಧ್ಯಮ ವಿದ್ಯಾರ್ಥಿಗಳ ಎದುರು ಫಲಿತಾಂಶದಲ್ಲಿ ಹಿಂದುಳಿಯುವುದಷ್ಟೇ ಅಲ್ಲದೆ ಇಂಗ್ಲಿಷ್ ಕಂಡರೆ ಕೀಳರಿಮೆ ಬೆಳೆಸಿಕೊಳ್ಳುವ ಹಂತಕ್ಕೆ ತಲುಪಿದ್ದಾರೆ. ಪ್ರಾಥಮಿಕ ಹಂತದಲ್ಲಿ ಪ್ರತ್ಯೇಕ ಭಾಷಾ ಶಿಕ್ಷಕರು ಎಂಬ ಪರಿಕಲ್ಪನೆಯೇ ಇಲ್ಲದೆ ಬುನಾದಿಯಲ್ಲೇ ಭಾಷೆ ಕಲಿಕೆ ಎಡವಿದರೆ, ಪ್ರೌಢಶಾಲೆ ಹಂತದಲ್ಲಿ 2 ಸಾವಿರ ಶಿಕ್ಷಕರ ಕೊರತೆ ಇದೆ. ಕನ್ನಡ ಮಾಧ್ಯಮ ತೆಗೆದುಕೊಂಡಿದ್ದೇ ಶಿಕ್ಷೆ ಎನ್ನುವ ಸ್ಥಿತಿಗೆ ಸರ್ಕಾರ ತಂದು ನಿಲ್ಲಿಸಿದೆ.

ಆರಂಭದಲ್ಲೇ ಕಡೆಗಣನೆ: ಮಕ್ಕಳು 4-5 ಭಾಷೆ ಕಲಿಯುವ ಸಾಮರ್ಥ್ಯ ಹೊಂದಿರುತ್ತಾರೆ. ನಂತರದ ವರ್ಷಗಳಲ್ಲಿ ಈ ಸಾಮರ್ಥ್ಯ ಕುಂದುತ್ತಾ ಸಾಗುತ್ತದೆ. ಕರ್ನಾಟಕ ಸರ್ಕಾರದ ನಿಯಮದ ಪ್ರಕಾರ ಪ್ರೌಢಶಾಲೆಗಳಲ್ಲಿ ಮಾತ್ರ ಕನ್ನಡ, ಹಿಂದಿ, ಇಂಗ್ಲಿಷ್ ಸೇರಿ ವಿವಿಧ ಭಾಷೆಗಳಿಗೆ ಪ್ರತ್ಯೇಕ ಶಿಕ್ಷಕರಿದ್ದಾರೆ. ಆದರೆ ಪ್ರಾಥಮಿಕ ಹಂತದಲ್ಲಿ ಭಾಷಾ ಶಿಕ್ಷಕರು ಎಂದು ನೇಮಕ ಮಾಡಿಕೊಂಡವರೇ ಕನ್ನಡ, ಹಿಂದಿ ಜತೆಗೆ ಇಂಗ್ಲಿಷ್ ಕಲಿಸುತ್ತಾರೆ. ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಒಟ್ಟು 1,58,935 ಶಿಕ್ಷಕರಿದ್ದಾರೆ. ಇವರಲ್ಲಿ ಭಾಷಾ ಶಿಕ್ಷಕರ ಸಂಖ್ಯೆಯೇ 1,22,419. ಈ ಶಿಕ್ಷಕರೇ ಮೂರೂ ಭಾಷೆಗಳನ್ನು ಬೋಧನೆ ಮಾಡುತ್ತಾರೆ.

ಪ್ರಾಧಿಕಾರದ ಸಲಹೆಗೆ ಬೆಲೆಯಿಲ್ಲ: ಎಚ್.ಡಿ. ಕುಮಾರಸ್ವಾಮಿ ಸರ್ಕಾರದ ಅವಧಿಯಲ್ಲಿ ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮ ಆರಂಭಿಸುವ ನಿರ್ಧಾರ ಮಾಡಲಾಯಿತು. ಇದಕ್ಕೆ ಭಾಷೆ, ಶಿಕ್ಷಣ ತಜ್ಞರ ವಲಯದಿಂದ ಸಾಕಷ್ಟು ವಿರೋಧ ವ್ಯಕ್ತವಾಯಿತು. ಕನ್ನಡದ ಅನೇಕ ಸಾಹಿತಿಗಳು, ವಿಜ್ಞಾನಿಗಳು, ಇಂಜಿನಿಯರುಗಳು ಕನ್ನಡ ಮಾಧ್ಯಮದಲ್ಲಿ ಅಭ್ಯಾಸ ಮಾಡಿಯೂ ಇಂಗ್ಲಿಷ್​ನಲ್ಲಿ ಪ್ರೌಢಿಮೆ ಹೊಂದಿದ್ದರು. ಇಂಗ್ಲಿಷ್ ಮಾಧ್ಯಮಕ್ಕಿಂತಲೂ, ಪ್ರಾಥಮಿಕ ಹಂತದಿಂದಲೇ ಇಂಗ್ಲಿಷ್ ಭಾಷೆಯನ್ನು ಪ್ರಭುತ್ವ ಸಾಧಿಸುವ ಮಟ್ಟದಲ್ಲಿ ಕಲಿಸಬೇಕು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಸರ್ಕಾರಕ್ಕೆ ಅನೇಕ ಬಾರಿ ಹಕ್ಕೊತ್ತಾಯ ಮಾಡಿದೆ. ಈಗ ಪರೀಕ್ಷೆಗೆ ಅಗತ್ಯವಿರುವಷ್ಟು ಮಾತ್ರವೇ ಇಂಗ್ಲಿಷ್ ಕಲಿಸುತ್ತಿರುವುದರಿಂದ ಮಕ್ಕಳಲ್ಲಿ ಇಂಗ್ಲಿಷ್ ಕುರಿತು ಕೀಳರಿಮೆ ಮೂಡುತ್ತಿದೆ.

ಕಾಡಿ ಬೇಡಿದರೂ ಕೊಡಲಿಲ್ಲ: ಗದಗ ತಾಲೂಕಿನ ಕದಡಿ ಗ್ರಾಮದ ಶಾಲೆಯಲ್ಲಿ ಕಳೆದ 6 ವರ್ಷದಿಂದ ಇಂಗ್ಲಿಷ್ ಶಿಕ್ಷಕರಿರಲಿಲ್ಲ. ಕಳೆದ ತಿಂಗಳು ಗ್ರಾಮಕ್ಕೆ ಭೇಟಿ ನೀಡಿದ್ದ ಕ್ಷೇತ್ರ ಶಿಕ್ಷಣಾಧಿಕಾರಿಗಳನ್ನು ಗ್ರಾಮಸ್ಥರು ಈ ಬಗ್ಗೆ ತರಾಟೆಗೆ ತೆಗೆದುಕೊಂಡಿದ್ದರು. ಇದ್ದ ಇಂಗ್ಲಿಷ್ ಶಿಕ್ಷಕಿಯನ್ನು ಆರು ವರ್ಷ ಮೊದಲೇ ಬೇರೆ ಜಿಲ್ಲೆಗೆ ನಿಯೋಜನೆ ಮಾಡಲಾಗಿತ್ತು. ಆ ಸ್ಥಾನಕ್ಕೆ ಅತಿಥಿ ಶಿಕ್ಷಕಿಯನ್ನು ನಿಯೋಜನೆ ಮಾಡಲಾಗಿತ್ತು. ಸರ್ಕಾರ ವೇತನ ನೀಡದೆ ಅವರೂ ಶಾಲೆ ತ್ಯಜಿಸಿದ್ದರು. ಈ ಅವಧಿಯಲ್ಲಿ ಹೆಚ್ಚು ಮಕ್ಕಳು ಇಂಗ್ಲಿಷ್​ನಲ್ಲೇ ಅನುತ್ತೀರ್ಣರಾಗಿದ್ದು, ಶಿಕ್ಷಕರನ್ನು ನೀಡಿ ಎಂದು ಗ್ರಾಮಸ್ಥರು ಶಿಕ್ಷಣ ಸಚಿವರಿಂದ ಮುಖ್ಯಮಂತ್ರಿವರೆಗೆ ಪತ್ರ ಬರೆದರೂ ಪರಿಹಾರ ಸಿಕ್ಕಿರಲಿಲ್ಲ. ಅಧಿಕಾರಿಗಳನ್ನು ಘೇರಾವ್ ಮಾಡಿ ತರಾಟೆಗೆ ತೆಗೆದುಕೊಂಡರೂ ಗಮನ ವಹಿಸಲಿಲ್ಲ. ಈ ನಡುವೆ ‘ಸ್ಲೇಟು ಬಳಪ ಸಂಸ್ಥೆ’ ಎಂಬ ಬೆಂಗಳೂರಿನ ಸರ್ಕಾರೇತರ ಸಂಸ್ಥೆ ಮುಂದೆ ಬಂದು, ಆ ಶಾಲೆಗೆ ಹಿಂದೆ ಆಗಮಿಸುತ್ತಿದ್ದ ಅತಿಥಿ ಶಿಕ್ಷಕಿಗೇ ತಾನು ಗೌರವಧನ ನೀಡುವುದಾಗಿ ತಿಳಿಸಿದ್ದು, ಈಗ ಶಾಲೆಯು ಪ್ರಸ್ತಾವನೆಯನ್ನು ಒಪ್ಪಿಕೊಂಡಿದೆ. ದಸರಾ ನಂತರದಲ್ಲಿ ಶಿಕ್ಷಕರು ಕಾರ್ಯಾರಂಭ ಮಾಡಲಿದ್ದಾರೆ ಎಂದು ಸ್ಲೇಟು ಬಳಪ ಸಂಸ್ಥೆ ತಿಳಿಸಿದೆ.

ನಿಯಮ ಅನುಸರಿಸದ ಸರ್ಕಾರ
ಕಳೆದ ವರ್ಷ ರಾಜ್ಯಾದ್ಯಂತ ಎಲ್ಲ ಶಾಲೆಗಳಲ್ಲೂ ಕನ್ನಡ ಬೋಧನೆಯನ್ನು ಸರ್ಕಾರ ಕಡ್ಡಾಯ ಮಾಡಿತು. ಕರ್ನಾಟಕದಲ್ಲಿ ಕನ್ನಡವನ್ನು ಒಂದು ವಿಷಯವಾಗಿ ಸಿಬಿಎಸ್​ಇ, ಐಸಿಎಸ್​ಇ ಶಾಲೆಗಳನ್ನೂ ಸೇರಿ ಎಲ್ಲರೂ ಬೋಧಿಸಬೇಕು. ಅನೇಕ ಶಾಲೆಗಳಲ್ಲಿ ಕನ್ನಡ ಶಿಕ್ಷಕರನ್ನೇ ನೇಮಕ ಮಾಡಿಲ್ಲ ಎಂದು ಶಿಕ್ಷಣ ಇಲಾಖೆ ಖಾಸಗಿ ಶಾಲೆಗಳನ್ನು ತರಾಟೆಗೆ ತೆಗೆದುಕೊಂಡಿದೆ. ಆದರೆ ತನ್ನದೇ ಶಾಲೆಗಳಲ್ಲಿ ಇಂಗ್ಲಿಷ್ ಶಿಕ್ಷಕರನ್ನು ನೇಮಕ ಮಾಡಲು ಮನಸ್ಸು ಮಾಡುತ್ತಿಲ್ಲ.

ತರಬೇತಿಯೂ ಅಪೂರ್ಣ
ಶಿಕ್ಷಕರು ಕಲಿಕಾ ಗುಣಮಟ್ಟವನ್ನು ಹೆಚ್ಚಿಸಿಕೊಳ್ಳಲು ಸರ್ಕಾರ ಅನೇಕ ತರಬೇತಿಗಳನ್ನು ನೀಡುತ್ತದೆ. 7ನೇ ತರಗತಿಯ ಎನ್​ಸಿಇಆರ್​ಟಿ ವಿಜ್ಞಾನ ಮತ್ತು ಗಣಿತ ಕಲಿತಾ ತರಬೇತಿ ಶೇ.81 ಶಿಕ್ಷಕರಿಗಷ್ಟೆ ಆಗಿದೆ. ಗುರುಚೇತನ ಶೇ.94, ಜೀವನ ಕಲೆ 1-3ರವರೆಗೆ ಶೇ.78 ಹಾಗೂ ಗುರುಚೇತನ 4-5 ತರಗತಿಗೆ ಶೇ.30 ಮಾತ್ರ ಗುರಿ ಸಾಧನೆ ಆಗಿದೆ.

ಸರ್ಕಾರಿ ಶಾಲೆಗಳಲ್ಲಿ ಉತ್ತಮ ಗುಣಮಟ್ಟದಲ್ಲಿ ಆಂಗ್ಲ ವಿಷಯ ಬೋಧಿಸುವ ಅವಶ್ಯಕತೆ ಇದೆ. ಆಂಗ್ಲ ಶಿಕ್ಷಕರ ಕೊರತೆ ಹಿಂದಿನಿಂದಲೂ ಇದೆ. ಸರ್ಕಾರಿ ಶಾಲೆಗಳ ಕುರಿತು ಜನರ ಮನೋಭಾವನೆ ಬದಲಾವಣೆಗೆ ಇದು ಅಡಚಣೆಯಾಗಿದೆ. ನುರಿತ ಆಂಗ್ಲ ಶಿಕ್ಷಕರ ಕೊರತೆಯನ್ನು ನೀಗಿಸುವತ್ತ ಗಮನಹರಿಸಬೇಕು. | ಡಾ. ಸುಧಾಕರ ಹೊಸಳ್ಳಿ ಶಿಕ್ಷಣ ತಜ್ಞ

ಎರಡು ಸಾವಿರ ಶಿಕ್ಷಕರ ಕೊರತೆ
ಸರ್ಕಾರಿ ಪ್ರೌಢಶಾಲೆಗಳಲ್ಲಿ ಒಟ್ಟು 39,983 ಶಿಕ್ಷಕರಿದ್ದಾರೆ. ಇವರಲ್ಲಿ 4,469 ಕನ್ನಡ, 4,123 ಹಿಂದಿ ಹಾಗೂ 3,680 ಇಂಗ್ಲಿಷ್ ಶಿಕ್ಷಕರಿದ್ದಾರೆ. ಮಂಜೂರಾದ ಹುದ್ದೆಗಳ ಆಧಾರದಲ್ಲಿ ಅಂದಾಜು ಇನ್ನೂ 2 ಸಾವಿರ ಇಂಗ್ಲಿಷ್ ಶಿಕ್ಷಕರ ಕೊರತೆ ಇದೆ. ಶಿಕ್ಷಕ- ವಿದ್ಯಾರ್ಥಿ ಅನುಪಾತದ ಆಧಾರದಲ್ಲಿ ಈ ಸಂಖ್ಯೆ ಸುಮಾರು ಮೂರೂವರೆ ಸಾವಿರವನ್ನೂ ಮೀರುತ್ತದೆ. ಅಂದರೆ, ತರಗತಿಗೆ ಒಬ್ಬ ಶಿಕ್ಷಕರಲ್ಲ, ರಾಜ್ಯದ ಒಟ್ಟು 4,733 ಪ್ರೌಢಶಾಲೆಗಳಲ್ಲಿ, ಶಾಲೆಗೊಬ್ಬರು ಇಂಗ್ಲಿಷ್ ಶಿಕ್ಷಕರೂ ಇಲ್ಲ ಎಂಬ ದಯನೀಯ ಸ್ಥಿತಿ ಇದೆ.

ಕನ್ನಡ ಮಾಧ್ಯಮದಲ್ಲಿ ಹೆಚ್ಚು ಅನುತ್ತೀರ್ಣ
ಪ್ರತಿ ವರ್ಷ ಎಸ್​ಎಸ್​ಎಲ್​ಸಿ ಫಲಿತಾಂಶ ಹೊರಬಿದ್ದಾಗ ಕನ್ನಡ ಮಾಧ್ಯಮದ ಮಕ್ಕಳ ಹೋಲಿಕೆಯಲ್ಲಿ ಇಂಗ್ಲಿಷ್ ಮಾಧ್ಯಮದ ಮಕ್ಕಳು ಹೆಚ್ಚು ಉತ್ತೀರ್ಣರಾಗುತ್ತಾರೆ. 2018, 2019 ಹಾಗೂ 2020ರಲ್ಲಿ ಕ್ರಮವಾಗಿ ಕನ್ನಡ ಮಾಧ್ಯಮದ ಶೇ.67.33, ಶೇ.70.19 ಹಾಗೂ ಶೇ.70.49 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದರೆ, ಇಂಗ್ಲಿಷ್ ಮಾಧ್ಯಮದ ಶೇ.81.23, ಶೇ.80.88 ಹಾಗೂ ಶೇ.84.98 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಪ್ರತಿ ವರ್ಷ ಉತ್ತೀರ್ಣವಾದ ಸರಾಸರಿ ವಿದ್ಯಾರ್ಥಿಗಳಿಗಿಂತ ಕನ್ನಡ ಮಾಧ್ಯಮ ವಿದ್ಯಾರ್ಥಿಗಳ ಉತ್ತೀರ್ಣ ಪ್ರಮಾಣ ಕಡಿಮೆ ದಾಖಲಾಗುತ್ತಿದೆ. ಗಣಿತದ ಜತೆಗೆ ಹೆಚ್ಚಿನ ಕನ್ನಡ ಮಾಧ್ಯಮ ವಿದ್ಯಾರ್ಥಿಗಳು ಇಂಗ್ಲಿಷ್​ನಲ್ಲಿ ಅನುತ್ತೀರ್ಣರಾಗುತ್ತಾರೆ.