ಹಾನಗಲ್ಲ: ಗ್ರಾಮೀಣ ಮಕ್ಕಳಲ್ಲಿನ ಪ್ರತಿಭೆ ಉನ್ನತ ಮಟ್ಟದಲ್ಲಿದ್ದರೂ ಕೂಡ ಉತ್ತಮ ಶೈಕ್ಷಣಿಕ ಅವಕಾಶಗಳಿಲ್ಲದ ಕಾರಣದಿಂದಾಗಿ ಪ್ರತಿಭೆಗಳು ಅರಳಲು ಹಿನ್ನಡೆಯಾಗುತ್ತಿದೆ ಎಂದು ಬೆಂಗಳೂರಿನ ಆರ್ವಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಟಿ.ಸಿ. ಮಹೇಶ ವಿಷಾದಿಸಿದರು.
ಪಟ್ಟಣದ ಪರಿವರ್ತನ ಕಲಿಕಾ ಕೇಂದ್ರದಲ್ಲಿ ದ್ವಿತೀಯ ಪಿಯುಸಿ ವಿಜ್ಞಾನ ವಿದ್ಯಾರ್ಥಿಗಳಿಗಾಗಿ ಇತ್ತೀಚೆಗೆ ಆಯೋಜಿಸಿದ್ದ ಸಿಇಟಿ ತರಬೇತಿಯ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು. ಗ್ರಾಮೀಣ ಮಕ್ಕಳಲ್ಲಿ ಕಲಿಕಾ ಆಸಕ್ತಿಯಿದೆ. ಅದಕ್ಕೆ ತಕ್ಕಂತೆ ಅವಕಾಶಗಳಿಲ್ಲ. ಶ್ರದ್ಧೆಯಿಂದ ಓದುತ್ತಾರೆ. ಸರಿಯಾದ ಮಾರ್ಗದರ್ಶನದ ಕೊರತೆಯಿದೆ. ಆದಾಗ್ಯೂ ಗ್ರಾಮೀಣ ಮಕ್ಕಳು ಎಲ್ಲ ಸವಾಲುಗಳನ್ನು ಎದುರಿಸಿ ಮುನ್ನಡೆಯುವ ಸಾಹಸ ಮಾಡುತ್ತಿದ್ದಾರೆ. ಸ್ಪರ್ಧಾತ್ಮಕ ಕಾಲಕ್ಕೆ ಎದುರಾಗುವ ಸವಾಲುಗಳನ್ನು ಎದುರಿಸಿ, ಶಿಕ್ಷಣದಲ್ಲಿ ಮುಂದುವರಿಯಬೇಕಾಗಿದೆ. ಗುಣಮಟ್ಟದ ಶಿಕ್ಷಣ ನೀಡಲು ಸಾಧ್ಯವಾದರೆ ಈ ಮಕ್ಕಳು ದೇಶಕ್ಕೆ ಆಸ್ತಿಯಾಗುತ್ತಾರೆ ಎಂದರು.
ಪ್ರಾಧ್ಯಾಪಕ ಟಿ.ಶ್ರೀಹರ್ಷ ಮಾತನಾಡಿ, ಮೊಬೈಲ್ ಬೇಡವಾದುದರ ಕಡೆಗೆ ಆಕರ್ಷಿಸುತ್ತದೆ. ದೊಡ್ಡ ಪಟ್ಟಣಗಳಲ್ಲಿ ಓದುವವರು ಮಾತ್ರ ವಿದ್ಯಾವಂತರು ಎಂಬ ಭಾವನೆ ಬೇಡ. ಕೀಳರಿಮೆಯಿಂದ ಹೊರಬನ್ನಿ. ನಿಮ್ಮಲ್ಲಿರುವ ಕಲಿಯುವ ಆಸಕ್ತಿಯನ್ನು ಕುಂದಿಸಿಕೊಳ್ಳಬೇಡಿ. ಶ್ರದ್ಧೆಯ ಓದಿಗೆ ಪ್ರತಿಫಲ ಇದ್ದೇ ಇದೆ. ಆತ್ಮವಿಶ್ವಾಸದಿಂದ ಮುನ್ನಡೆಯಿರಿ ಎಂದರು.
ಸ್ಪರ್ಧಾತ್ಮಕ ಪರೀಕ್ಷೆಗಳ ಮಾರ್ಗದರ್ಶಕ ಧಾರವಾಡದ ಅನಂತ ಶಿಡೇನೂರ ಮಾತನಾಡಿ, ಮೋಜು ಮಸ್ತಿಯಿಂದ ಕಾಲಹರಣಕ್ಕೆ ಒಳಗಾದರೆ ಓದು ರುಚಿಸಲಾರದು. ಬಣ್ಣದ ಬದುಕು, ಮೋಹಕ ಆಕರ್ಷಣೆಗಳು ಸಮಯವನ್ನು ಹಾಳು ಮಾಡುತ್ತವೆ ಎಂದರು.
ಹುಮ್ಯಾನಿಟಿ ಫೌಂಡೇಷನ್ನ ಪರಿವರ್ತನ ಕಲಿಕಾ ಕೇಂದ್ರದ ಆಡಳಿತಾಧಿಕಾರಿ ಮಾರುತಿ ಶಿಡ್ಲಾಪೂರ ಅಧ್ಯಕ್ಷತೆ ವಹಿಸಿದ್ದರು.