ಜಿಲ್ಲೆ

ಜಿಲ್ಲೆಯಲ್ಲಿ ಕುಡಿಯುವ ನೀರಿಗೆ ಅಭಾವ?, 102 ಗ್ರಾಮಗಳ ಪಟ್ಟಿ ಮಾಡಿದ ಮೈಸೂರು ಜಿಲ್ಲಾಡಳಿತ

ಆರ್.ಕೃಷ್ಣ ಮೈಸೂರು
ಈ ಬಾರಿ ಮುಂಗಾರು ಕೈಕೊಟ್ಟ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿಯೂ ಮುಂದೆ ಕುಡಿಯುವ ನೀರಿನ ಅಭಾವ ಉಂಟಾಗಲಿದೆ. ಮೊದಲ ಹಂತದಲ್ಲಿ ಜಿಲ್ಲೆಯ 102 ಗ್ರಾಮಗಳಿಗೆ ಕುಡಿಯುವ ನೀರಿಗೆ ತೊಂದರೆ ಆಗಬಹುದು ಎಂದು ಜಿಲ್ಲಾಡಳಿತ ಪಟ್ಟಿ ಮಾಡಿದ್ದು, ಮುಂಜಾಗ್ರತಾ ಕ್ರಮವಾಗಿ ಕುಡಿಯುವ ನೀರಿನ ತೊಂದರೆ ಆಗದಂತೆ ಅಗತ್ಯ ಕ್ರಮಕೈಗೊಳ್ಳಲು ಸಿದ್ಧತೆ ನಡೆದಿದೆ. ಇದಕ್ಕಾಗಿ ಈಗಾಗಲೇ ಕಾರ್ಯಯೋಜನೆ ಸಿದ್ಧಪಡಿಸಿಕೊಳ್ಳಲಾಗಿದೆ.
ಕಾವೇರಿ, ಕಬಿನಿ, ಲಕ್ಷ್ಮಣತೀರ್ಥ ನದಿಗಳಿರುವ ಜಿಲ್ಲೆಯಲ್ಲಿ ಕೆಆರ್‌ಎಸ್, ಕಬಿನಿ ದೊಡ್ಡ ಜಲಾಶಯಗಳು ಸೇರಿದಂತೆ ಸಣ್ಣಪುಟ್ಟ ಜಲಾಶಯಗಳು ಇದ್ದರೂ ಬೇಸಿಗೆ ಬಂತೆಂದರೆ ಜಿಲ್ಲೆಯ ಹಲವು ಗ್ರಾಮಗಳಲ್ಲಿ ಕುಡಿಯುವ ನೀರಿಗೆ ಅಭಾವ ಉಂಟಾಗುವುದು ಹಿಂದಿನಿಂದಲೂ ನಡೆದು ಬಂದಿದೆ.
ಮೈಸೂರು ತಾಲೂಕಿನಲ್ಲಿಯೇ ಕುಡಿಯುವ ನೀರಿನ ಅಭಾವ ಉಂಟಾದಾಗ ಟ್ಯಾಂಕ್‌ಗಳ ಮೂಲಕ ಹಳ್ಳಿಗಳಿಗೆ ನೀರು ಸರಬರಾಜು ಮಾಡಿದ್ದ ಉದಾಹರಣೆಯೂ ಇವೆ. ಹೀಗಾಗಿ ನದಿ ಮೂಲದಿಂದ ಗ್ರಾಮಗಳಿಗೆ ಕುಡಿಯುವ ನೀರು ಒದಗಿಸುವ ಬಹುಗ್ರಾಮ ಯೋಜನೆ ಜಾರಿಗೊಂಡಿದ್ದರೂ ಬೇಸಿಗೆಯಲ್ಲಿ ತೊಂದರೆ ಸಾಮಾನ್ಯವಾಗಿದೆ.
ಮುಂಗಾರು ಮಳೆ ಕೈಕೊಟ್ಟಿದ್ದರಿಂದ ನೀರಿನ ಬರ ಕಾಡಲಾರಂಭಿಸಿದ್ದರೂ ಸದ್ಯದ ಸ್ಥಿತಿಯಲ್ಲಿ ಜಿಲ್ಲೆಯಲ್ಲಿ ಮುಂದಿನ ಮೇ-ಜೂನ್ ತಿಂಗಳ ತನಕ ಕುಡಿಯುವ ನೀರಿಗೆ ಯಾವುದೇ ಸಮಸ್ಯೆ ಅಗುವುದಿಲ್ಲ ಎನ್ನುವ ಅಧಿಕಾರಿಗಳ ವರದಿ ಜನರಲ್ಲಿ ಕೊಂಚ ನೆಮ್ಮದಿ ತಂದಿದೆ. ಆದರೆ ಇದರ ಮಧ್ಯೆಯೂ ಒಟ್ಟು 102 ಗ್ರಾಮಗಳಿಗೆ ಕುಡಿಯುವ ನೀರಿನ ಅಭಾವ ಉಂಟಾಗಬಹುದು ಎಂದು ಗುರುತಿಸಲಾಗಿದೆ.
ಮೈಸೂರು, ನಂಜನಗೂಡು, ತಿ.ನರಸೀಪುರ, ಎಚ್.ಡಿ.ಕೋಟೆ, ಸರಗೂರು, ಹುಣಸೂರು, ಪಿರಿಯಾಪಟ್ಟಣ ಹಾಗೂ ಕೆ.ಆರ್.ನಗರ ತಾಲೂಕು ಸೇರಿದಂತೆ ಇಡೀ ಜಿಲ್ಲೆಯನ್ನು ಸಂಪೂರ್ಣ ಬರಗಾಲಪೀಡಿತ ಪ್ರದೇಶ ಎಂದು ಸರ್ಕಾರ ಘೋಷಣೆ ಮಾಡಿದೆ.
ಎಚ್.ಡಿ.ಕೋಟೆ ತಾಲೂಕಿನ 11, ಹುಣಸೂರು ತಾಲೂಕಿನ 15, ಪಿರಿಯಾಪಟ್ಟಣ ತಾಲೂಕಿನ 15, ಸರಗೂರು ತಾಲೂಕಿನ 2, ಕೆ.ಆರ್.ನಗರ ತಾಲೂಕಿನ 18, ಸಾಲಿಗ್ರಾಮ ತಾಲೂಕಿನ 19, ಮೈಸೂರು ತಾಲೂಕಿನ 6, ನಂಜನಗೂಡು ತಾಲೂಕಿನ 10, ತಿ.ನರಸೀಪುರ ತಾಲೂಕಿನ 6 ಗ್ರಾಮಗಳು ಸೇರಿದಂತೆ ಒಟ್ಟು 102 ಗ್ರಾಮಗಳು ಸೇರಿವೆ.
ಕೆಆರ್‌ಎಸ್, ಕಬಿನಿ, ನುಗು, ತಾರಕ ಹಾಗೂ ನೆರೆ ಜಿಲ್ಲೆಯ ಹಾರಂಗಿ ಜಲಾಶಯದಲ್ಲಿ ಸದ್ಯಕ್ಕೆ ಇರುವ ನೀರಿನ ಸಂಗ್ರಹ ಪ್ರಮಾಣದಿಂದ ಕುಡಿಯುವ ನೀರಿಗೆ ತೊಂದರೆ ಇಲ್ಲ ಎನ್ನಲಾಗಿದೆ. ಹೀಗಾಗಿಯೇ ಮೈಸೂರು, ಬೆಂಗಳೂರು ಸೇರಿದಂತೆ ಪ್ರಮುಖ ಜಿಲ್ಲೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಕಾಡಬಹುದೆಂದು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಮನದಲ್ಲಿ ಇದ್ದ ಆತಂಕ ದೂರವಾಗಿದೆ.
ನಗರದಲ್ಲಿ ಇತ್ತೀಚೆಗೆ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ನಡೆಸಿದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು, ಸದ್ಯಕ್ಕೆ ಕುಡಿಯುವ ನೀರಿಗೆ ಯಾವುದೇ ಸಮಸ್ಯೆ ಇಲ್ಲ. ಒಂದು ವೇಳೆ ಮುಂದಿನ ಮಾರ್ಚ್-ಏಪ್ರಿಲ್ ತಿಂಗಳಿನಲ್ಲಿ ಹಿಂಗಾರು ಮಳೆ ಕೈ ಹಿಡಿದರೆ ಸೆಪ್ಟಂಬರ್ ತನಕವೂ ಕುಡಿಯುವ ನೀರು ಕೊಡಬಹುದು ಎಂದು ಮಾಹಿತಿ ನೀಡಿದ್ದಾರೆ.

ಕುಡಿಯುವ ನೀರಿಗೆ ಪರ್ಯಾಯ ವ್ಯವಸ್ಥೆ
ನೀರಿನ ಕೊರತೆ ಎದುರಾಗಬಹುದಾದ 102 ಗ್ರಾಮಗಳನ್ನು ಗುರುತಿಸಲಾಗಿದ್ದು, ಅವುಗಳಿಗೆ ಪರ್ಯಾಯ ನೀರು ಒದಗಿಸಲು ಸಿದ್ಧತೆ ನಡೆದಿದೆ. ನೀರಿನ ಹೆಚ್ಚು ಇಳುವರಿ ನೀಡುವ 93 ಬೋರ್‌ವೆಲ್‌ಗಳನ್ನು ಪಟ್ಟಿ ಮಾಡಲಾಗಿದ್ದು, ಎಚ್.ಡಿ.ಕೋಟೆ ತಾಲೂಕಿನ 11, ಹುಣಸೂರು ತಾಲೂಕಿನ 12, ಪಿರಿಯಾಪಟ್ಟಣ ತಾಲೂಕಿನ 15, ಸರಗೂರು ತಾಲೂಕಿನ 1, ಕೆ.ಆರ್.ನಗರ ತಾಲೂಕಿನ 13, ಸಾಲಿಗ್ರಾಮ ತಾಲೂಕಿನ 18, ಮೈಸೂರು ತಾಲೂಕಿನ 7, ನಂಜನಗೂಡು ತಾಲೂಕಿನ 10, ತಿ.ನರಸೀಪುರ ತಾಲೂಕಿನ 6 ಸೇರಿ ಒಟ್ಟು 93 ಬೋರ್‌ವೆಲ್‌ಗಳನ್ನು ಬಳಸಿಕೊಳ್ಳಲು ಒಪ್ಪಂದ ಮಾಡಿಕೊಳ್ಳಲಾಗಿದೆ.
ಮೈಸೂರು, ಬೆಂಗಳೂರು, ಮಂಡ್ಯ, ಚಾಮರಾಜನಗರ ಜಿಲ್ಲೆಗಳಿಗೆ ಪ್ರತಿನಿತ್ಯ ಕುಡಿಯುವ ನೀರಿಗೆ 5 ಸಾವಿರ ಕ್ಯೂಸೆಕ್ಸ್ ನೀರು ಬಳಸಿಕೊಳ್ಳಲಾಗುತ್ತಿದೆ. ಬರಗಾಲ ಕಾಡುತ್ತಿರುವುದರಿಂದ ಕಬಿನಿ ಮತ್ತು ಕೆಆರ್‌ಎಸ್ ಜಲಾಶಯದ ವ್ಯಾಪ್ತಿಗೆ ಬರುವ ಅಚ್ಚುಕಟ್ಟು ಪ್ರದೇಶಗಳಲ್ಲಿ ಬೆಳೆದು ನಿಂತಿದ್ದ ಫಸಲುಗಳಿಗೆ ಕಟ್ಟು ಪದ್ಧತಿಯಲ್ಲಿ ನೀರು ಹರಿಸುವ ಕೆಲಸ ಮಾಡಲಾಗಿದೆ.
ಮತ್ತೆ ಭತ್ತದ ಫಸಲು ಬೆಳೆಯಲು ನೀರು ಹರಿಸದಂತೆ ನಾಲೆಗೆ ನಿಲ್ಲಿಸಲಾಗಿದೆ. ಹೀಗಾಗಿ ಮುಂದೆ ತಿ.ನರಸೀಪುರ, ನಂಜನಗೂಡು, ಕೆ.ಆರ್.ನಗರ ಮತ್ತು ಮಂಡ್ಯ ಭಾಗಕ್ಕೆ ನೀರು ಹರಿಸದೆ ಇರಲು ತೀರ್ಮಾನಿಸಿ ಕೇವಲ ಕುಡಿಯುವ ನೀರಿಗೆ ಬಳಸಿಕೊಳ್ಳಲು ನಿರ್ಧರಿಸಲಾಗಿದೆ.
ಅಭಾವ ನೀಗಿಸಲು ಅನುದಾನ ಮೀಸಲು:

ಕುಡಿಯುವ ನೀರಿನ ತೊಂದರೆ ಆಗದಂತೆ ಬರ ನಿವಾರಣೆ ಕಾಮಗಾರಿ ಕೈಗೊಳ್ಳಲು ಸರ್ಕಾರ 21 ಕೋಟಿ ರೂ. ಅನ್ನು ಜಿಲ್ಲಾಡಳಿತದ ಖಾತೆಯಲ್ಲಿ ಮೀಸಲಿಟ್ಟಿದೆ. ಇದರಲ್ಲಿ ಮೈಸೂರು ತಾಲೂಕಿಗೆ 36.53 ಲಕ್ಷ ರೂ., ನಂಜನಗೂಡು ತಾಲೂಕಿಗೆ 33.86 ಲಕ್ಷ ರೂ., ತಿ.ನರಸೀಪುರ ತಾಲೂಕಿಗೆ 32.73 ಲಕ್ಷ ರೂ., ಹುಣಸೂರು ತಾಲೂಕಿಗೆ 35.02 ಲಕ್ಷ ರೂ., ಕೆ.ಆರ್.ನಗರ ತಾಲೂಕಿಗೆ 37.75 ಲಕ್ಷ ರೂ., ಪಿರಿಯಾಪಟ್ಟಣ ತಾಲೂಕಿಗೆ 38 ಲಕ್ಷ ರೂ., ಎಚ್.ಡಿ.ಕೋಟೆ ತಾಲೂಕಿಗೆ 144.68 ಲಕ್ಷ ರೂ. ನಿಗದಿಪಡಿಸಲಾಗಿದ್ದು, ನೂತನ ತಾಲೂಕು ಸರಗೂರಿಗೆ ತಹಸೀಲ್ದಾರ್ ಅವರಿಗೆ ಪ್ರಕೃತಿ ವಿಕೋಪ ಪಿಡಿ ಖಾತೆಯಲ್ಲಿ ಅನುದಾನ ಬಳಸಿಕೊಳ್ಳಲು ಅವಕಾಶ ನೀಡಲಾಗಿದೆ. ಇದರಿಂದ ಯಾವುದೇ ಪರಿಸ್ಥಿತಿ ಎದುರಾದರೂ ತಕ್ಷಣವೇ ತುರ್ತು ಕ್ರಮಕೈಗೊಳ್ಳಲು ಸರ್ಕಾರ ನಿರ್ದೇಶನ ನೀಡಿದೆ.

ಅಗತ್ಯ ಕ್ರಮಕೈಗೊಳ್ಳಲಾಗುವುದು
ಜಿಲ್ಲೆಯಲ್ಲಿ ಸದ್ಯಕ್ಕೆ ಕುಡಿಯುವ ನೀರಿಗೆ ಯಾವುದೇ ತೊಂದರೆ ಕಾಣಿಸಿಲ್ಲ. ಜಲಾಶಯದಲ್ಲಿ ಇರುವ ನೀರು ಮುಂದಿನ ಮೇ-ಜೂನ್‌ವರೆಗೂ ಕುಡಿಯಲು ಬಳಸಿಕೊಳ್ಳಬಹುದು. ಮುಂದೆ ಬರ ಕಾಣಿಸಲಿವೆ ಎನ್ನುವ 102 ಗ್ರಾಮಗಳನ್ನು ಜಿಲ್ಲೆಯಲ್ಲಿ ಗುರುತಿಸಲಾಗಿದ್ದು, ಜಿಲ್ಲಾಧಿಕಾರಿ ನೇತೃತ್ವದಲ್ಲಿ ಅಗತ್ಯ ತುರ್ತು ಕ್ರಮಗಳನ್ನು ಕೈಗೊಂಡು ನೀರಿನ ಸಮಸ್ಯೆ ನಿವಾರಿಸಲು ಯೋಜನೆ ಸಿದ್ಧಪಡಿಸಿಕೊಳ್ಳಲಾಗಿದೆ.
ಕೆ.ಎಂ.ಗಾಯತ್ರಿ
ಮುಖ್ಯ ಕಾರ್ಯ ನಿರ್ವಹಣಾಧಿಕಾರಿ, ಮೈಸೂರು ಜಿ.ಪಂ.