ಹುಣಸೂರು ನಗರಸಭೆ ಸಭಾಂಗಣದಲ್ಲಿ ಆಯೋಜಿಸಿದ್ದ ಸಾಮಾನ್ಯ ಸಭೆಯಲ್ಲಿ ಶಾಸಕ ಜಿ.ಡಿ.ಹರೀಶ್‌ಗೌಡ ಮಾತನಾಡಿದರು. ನಗರಸಭಾಧ್ಯಕ್ಷ ಎಸ್.ಶರವಣ, ಉಪಾಧ್ಯಕ್ಷೆ ಆಶಾ ಕೃಷ್ಣನಾಯಕ, ಪೌರಾಯುಕ್ತೆ ಕೆ.ಮಾನಸಾ ಇದ್ದರು. 
ಜಿಲ್ಲೆ

ಇಲಾಖೆಗಳ ನಡುವೆ ಸಮನ್ವಯ ಕೊರತೆ

ಲೋಕೇಶ್ ಮನು. ಡಿ

ಹುಣಸೂರು: ನಗರಸಭೆ ಅಧಿಕಾರಿಗಳು ಮತ್ತು ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧಿಕಾರಿಗಳ ನಡುವೆ ಸಮನ್ವಯ ಕೊರತೆಯಿಂದಾಗಿ ವರ್ಷದಿಂದ ಒಳಚರಂಡಿ ನೀರು ನಿರ್ವಹಣೆ ಸಮಸ್ಯೆ ಬಗೆಹರಿದಿಲ್ಲ. ಈ ಬಗ್ಗೆ ನಗರಸಭೆ ಸಾಮಾನ್ಯ ಸಭೆಯಲ್ಲಿ ಚರ್ಚೆ ನಡೆಯಿತು.

ಬುಧವಾರ ನಗರಸಭೆ ಸಭಾಂಗಣದಲ್ಲಿ ಆಯೋಜಿಸಿದ್ದ ಸಾಮಾನ್ಯ ಸಭೆಯಲ್ಲಿ ಯೂನೂಸ್ ಖಾನ್ ಮಾತನಾಡಿ, ತಮ್ಮ ವಾರ್ಡ್ ವ್ಯಾಪ್ತಿಯ ಶಬ್ಬೀರ್ ನಗರದಲ್ಲಿ ಒಂದು ಎಸ್‌ಟಿಪಿ ಟ್ಯಾಂಕ್ ಮತ್ತು ಎರಡು ವೆಟ್‌ವೆಲ್ ಕಾಮಗಾರಿಯನ್ನು ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ 26 ಕೋಟಿ ರೂ. ವೆಚ್ಚದಲ್ಲಿ ಕೈಗೊಂಡಿದೆ. ಆದರೆ ಶಬ್ಬೀರ್ ನಗರದ ಒಳಚರಂಡಿ ನೀರು ಸರಾಗವಾಗಿ ಹರಿದುಹೋಗದೆ ಇಡೀ ಪರಿಸರ ಮಲಿನವಾಗುತ್ತಿದೆ. ಇದಕ್ಕೆ ಮೂಲ ಕಾರಣ ಕಲ್ಕುಣಿಕೆ ಬಡಾವಣೆಯಲ್ಲಿ ಗಲೀಜು ನೀರನ್ನು ನಿರ್ವಹಿಸಲು 120 ಎಚ್.ಪಿ.ಸಾಮರ್ಥ್ಯದ ಮೋಟಾರ್ ಪಂಪ್ ಅವಶ್ಯಕತೆ ಇದೆ. ಒಂದು ವರ್ಷವೇ ಆದರೂ ಮಂಡಳಿಯಾಗಲಿ, ನಗರಸಭೆಯಾಗಲಿ ಪಂಪ್ ಅಳವಡಿಸಲು ವಿಫಲವಾಗಿದೆ. ಇದರಿಂದಾಗಿ ನಾಗರಿಕರು ಬಳಲುವಂತಾಗಿದೆ ಎಂದು ದೂರಿದರು.

ಈ ಕುರಿತು ಮಂಡಳಿ ಎಇಇ ಸುಹೈಲ್ ಮಾತನಾಡಿ, ಮೋಟಾರ್ ಪಂಪ್ ಅಳವಡಿಸುವುದು ನಗರಸಭೆ ಕರ್ತವ್ಯವಾಗಿದ್ದು, ಈ ಕುರಿತು ಸಾಕಷ್ಟು ಬಾರಿ ಅಧಿಕಾರಿಗಳಿಗೆ ತಿಳಿಸಿದ್ದರೂ ಕ್ರಮವಹಿಸಿಲ್ಲ. ನಾವೇನು ಮಾಡಲು ಸಾಧ್ಯ ಎಂದು ಕೈಚೆಲ್ಲಿದರು. ಇದಕ್ಕೆ ಉತ್ತರಿಸಿದ ನಗರಸಭೆ ಎಇಇ ಶರ್ಮಿಳಾ, ರಾಷ್ಟ್ರೀಯ ಹಸಿರು ನ್ಯಾಯಾಧೀಕರಣದ ನಿರ್ದೇಶನದಡಿ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಈ ಎಲ್ಲ ಕಾಮಗಾರಿಗಳನ್ನು ಒಳಗೊಂಡು ಕಾರ್ಯ ನಿರ್ವಹಿಸಬೇಕಿತ್ತು. ನಮ್ಮ ಮೇಲೆ ಆರೋಪ ಹೊರಿಸುವುದು ಸರಿಯಲ್ಲ. ನಗರಸಭೆ ವತಿಯಿಂದ ಕಾಮಗಾರಿ ಕುರಿತು ಕ್ರಿಯಾಯೋಜನೆ ಸಲ್ಲಿಸಿ ಗುಜರಾತ್ ರಾಜ್ಯದಿಂದ ಮೋಟಾರ್ ಪಂಪ್ ಖರೀದಿಸುತ್ತಿದ್ದು, ಈ ತಿಂಗಳಾಂತ್ಯಕ್ಕೆ ಸಮಸ್ಯೆ ಬಗೆಹರಿಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸದಸ್ಯತ್ವ ರದ್ದು ಮಾಡಲು ಅಭಿಪ್ರಾಯ ಸಂಗ್ರಹ: 2021ರಲ್ಲಿ ಅಂದಿನ ಪೌರಾಯುಕ್ತ ರಮೇಶ್ ಮತ್ತು ನಗರಸಭೆಯ ಪಕ್ಷೇತರ ಸದಸ್ಯ ಎಚ್.ಪಿ.ಸತೀಶ್‌ಕುಮಾರ್ ನಡುವೆ ನಡೆದಿದೆ ಎನ್ನಲಾದ ಸಂಘರ್ಷದ ಕುರಿತು ಪೌರಾಡಳಿತ ನಿರ್ದೇಶನಾಲಯ 2024ರಲ್ಲಿ ಕೈಗೊಂಡ ಆದೇಶದಂತೆ ಕರ್ತವ್ಯಕ್ಕೆ ಅಡ್ಡಿಪಡಿಸಿದರೆಂಬ ಕಾರಣದಿಂದ ಸದಸ್ಯ ಸತೀಶ್‌ಕುಮಾರ್ ಅವರ ಸದಸ್ಯತ್ವ ರದ್ದುಪಡಿಸುವ ಬಗ್ಗೆ ಸಭೆಯಲ್ಲಿ ಸದಸ್ಯರ ಅಭಿಪ್ರಾಯ ಸಂಗ್ರಹಿಸಿ ಕಳುಹಿಸಲು ಕೋರಲಾಗಿದೆ ಎಂದು ಪೌರಾಯುಕ್ತೆ ಕೆ.ಮಾನಸಾ ಸಭೆಗೆ ಮಾಹಿತಿ ನೀಡಿದರು.

ಈ ವೇಳೆ ಕಾಂಗ್ರೆಸ್ ಸದಸ್ಯರು ಸದಸ್ಯತ್ವ ರದ್ದುಗೊಳಿಸಲು ಕೋರಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರೆ, ಜೆಡಿಎಸ್ ಮತ್ತು ಬಿಜೆಪಿ ಸದಸ್ಯರು ರದ್ದುಗೊಳಿಸುವುದನ್ನು ವಿರೋಧಿಸಿದರು. ಸತೀಶ್‌ಕುಮಾರ ಒಂದು ಗಂಟೆಗೂ ಹೆಚ್ಚು ಕಾಲ ತಮ್ಮ ಅಭಿಪ್ರಾಯವನ್ನು ಮಂಡಿಸಿದರು. ಹೈಕೋರ್ಟ್ ತಮ್ಮಿಂದ ಕರ್ತವ್ಯಕ್ಕೆ ಅಡ್ಡಿಪಡಿಸುವಂತಹ ಯಾವುದೇ ಕಾರ್ಯವಾಗಿರುವ ಕುರಿತು ಸೂಕ್ತ ದಾಖಲೆಗಳಿಲ್ಲ ಎಂದು ತೀರ್ಪು ನೀಡಿದೆ. ಆದರೆ ಕೆಲವೊಂದು ರಾಜಕೀಯ ಶಕ್ತಿಗಳು ನನ್ನ ವಿರುದ್ಧ ಅಪಪ್ರಚಾರ ನಡೆಸಿವೆ. ಇದಕ್ಕೆ ಕಾನೂನಾತ್ಮಕ ಹೋರಾಟ ಮಾಡುತ್ತೇನೆ ಎಂದು ತಿಳಿಸಿದರು.

ಆರ್‌ಇ ಸಿದ್ದರಾಜುಗೆ ತರಾಟೆ: ಶಾಸಕ ಜಿ.ಡಿ.ಹರೀಶ್‌ಗೌಡ ಮಾತನಾಡಿ, ಹೈಕೋರ್ಟ್ ಪ್ರಕರಣವನ್ನು ಅಂತಿಮಗೊಳಿಸಿದ್ದು, ಪೌರಾಡಳಿತ ನಿರ್ದೇಶನಾಲಯ ಅಭಿಪ್ರಾಯ ಸಂಗ್ರಹಕ್ಕೆ ತಿಳಿಸಿದೆ. ಅಲ್ಲದೆ ನಗರಸಭೆ ಕಚೇರಿಯಿಂದ ನೀಡಿರುವ ಫೋಟೋ ಮತ್ತು ವಿಡಿಯೋ ದಾಖಲೆ ಆರೋಪ ಸಾಬೀತುಪಡಿಸುವಲ್ಲಿ ವಿಫಲವಾಗಿದೆ ಎಂದು ಸ್ಪಷ್ಟವಾಗಿ ತಿಳಿಸಿದೆ. ಹೀಗಿದ್ದೂ ನಗರಸಭೆ ಕಚೇರಿಯದಲ್ಲದ ಕೆಲ ಫೋಟೋಗಳು ಮತ್ತು ವಿಡಿಯೋಗಳನ್ನು ಅಧಿಕಾರಿಗಳು ಹೇಗೆ ನೀಡಿದರು? ಇದು ಪ್ರಕರಣವನ್ನು ಅಡ್ಡದಾರಿಗೆ ಎಳೆಯಲು ಮಾಡಿದ ಕಾರ್ಯವೇ ಎಂದು ಆರ್‌ಇ ಸಿದ್ದರಾಜು ಅವರನ್ನು ತರಾಟೆಗೆ ತೆಗೆದುಕೊಂಡರು. ಅಲ್ಲದೆ ಇಡೀ ಪ್ರಕರಣವನ್ನು ಗಮನಿಸಿದಾಗ ಸದಸ್ಯ ಸತೀಶ್‌ಕುಮಾರ್ ಯಾವುದೇ ತಪ್ಪು ಮಾಡಿಲ್ಲ ಎಂಬುದು ನನ್ನ ಅಭಿಪ್ರಾಯ ಎಂದರು. ಎಲ್ಲ ಸದಸ್ಯರ ಅಭಿಪ್ರಾಯಗಳನ್ನು ರೆಕಾರ್ಡ್ ಮಾಡಿಕೊಳ್ಳಲಾಯಿತು.

ನಗರಸಭೆ ಆಸ್ತಿಗಳ ಒತ್ತುವರಿ ನಡೆದಿದ್ದು, ಅಧಿಕಾರಿಗಳ ನಿರ್ಲಕ್ಷ್ಯದಿಂದ ಕೋಟ್ಯಂತರ ರೂ. ಮೌಲ್ಯದ ಆಸ್ತಿ ಕಳೆದುಕೊಳ್ಳಬೇಕಾಗಿದೆ ಎಂದು ಸದಸ್ಯರು ಬೇಸರ ವ್ಯಕ್ತಪಡಿಸಿದರು. ಕೂಡಲೇ ನಗರಸಭೆ ಆಸ್ತಿಯನ್ನು ಉಳಿಸಿಕೊಳ್ಳುವತ್ತ ಕ್ರಮ ವಹಿಸಲು ಶಾಸಕ ಹರೀಶ್‌ಗೌಡ ಪೌರಾಯುಕ್ತರಿಗೆ ಸೂಚಿಸಿದರು.

ಪ್ರತಿಮೆ ಸ್ಥಾಪನೆಗೆ ನಿವೇಶನ:

ತಾಲೂಕಿನ ದಲಿತ ಸಂಘಟನೆಗಳ ಮುಖಂಡರು ನಗರದ ಹೃದಯಭಾಗದಲ್ಲಿ ಸಂವಿಧಾನಶಿಲ್ಪಿ ಅಂಬೇಡ್ಕರ್ ಪ್ರತಿಮೆ ಸ್ಥಾಪನೆಗೆ ಒತ್ತಾಯಿಸಿದ್ದು, ನಗರ ವ್ಯಾಪ್ತಿಯಲ್ಲಿ ಸ್ಥಳವೊಂದನ್ನು ಗುರುತಿಸುವ ಕಾರ್ಯ ನಗರಸಭೆ ಶೀಘ್ರ ಮಾಡಬೇಕಿದೆ. ನಿವೇಶನದ ಸರ್ವೇ ಕಾರ್ಯವನ್ನು ಕಂದಾಯ ಇಲಾಖೆ ಮೂಲಕ ನಡೆಸಿದರೆ ನಾನು ಸರ್ಕಾರದ ಮಟ್ಟದಲ್ಲಿ ಚರ್ಚಿಸಲಿದ್ದೇನೆ. ಇದಕ್ಕೆ ಸಭೆಯಲ್ಲಿ ಅನುಮತಿ ನೀಡಲು ಶಾಸಕ ಜಿ.ಡಿ.ಹರೀಶ್‌ಗೌಡ ಕೋರಿದಾಗ, ಇಡೀ ಸಭೆ ಸರ್ವಾನುಮತದಿಂದ ಒಪ್ಪಿಗೆ ಸೂಚಿಸಿತು.

ಈ ಬಾರಿ ನಗರದಲ್ಲಿ ಬಾಬು ಜಗಜೀವನರಾಮ್ ಜಯಂತಿ ಮತ್ತು ಅಂಬೇಡ್ಕರ್ ಜಯಂತಿಯನ್ನು ಅದ್ದೂರಿಯಿಂದ ಆಚರಿಸಲು ನಿರ್ಧರಿಸಲಾಗಿದ್ದು, ಅನುದಾನಕ್ಕಾಗಿ ದಲಿತ ಸಂಘಟನೆಗಳು ನಗರಸಭೆಯನ್ನು ಕೋರಿದ್ದಾರೆ ಎಂದಾಗ 25 ಸಾವಿರ ರೂ. ಅನುದಾನ ನೀಡಲು ಸಭೆ ಒಪ್ಪಿಗೆ ಸೂಚಿಸಿತು.

ಸಭೆಯಲ್ಲಿ ಅಧ್ಯಕ್ಷ ಎಸ್.ಶರವಣ, ಉಪಾಧ್ಯಕ್ಷೆ ಆಶಾ ಕೃಷ್ಣನಾಯಕ, ಸ್ಥಾಯಿ ಸಮಿತಿ ಅಧ್ಯಕ್ಷ ಹರೀಶ್‌ಕುಮಾರ್, ಸದಸ್ಯರಾದ ದೇವರಾಜ್, ಗಣೇಶ್ ಕುಮಾರಸ್ವಾಮಿ, ದೊಡ್ಡಹೆಜ್ಜೂರು ರಮೇಶ್, ಗೀತಾ ನಿಂಗರಾಜು, ದೇವನಾಯ್ಕ, ಸ್ವಾಮಿಗೌಡ, ಮಾಲಿಕ್ ಪಾಷಾ, ಸೌರಭಾ, ಪ್ರಿಯಾಂಕಾ ಥಾಮಸ್ ಇತರರು ಇದ್ದರು.