ವಿಜಯಪುರದಲ್ಲಿ ಹಮ್ಮಿಕೊಂಡಿದ್ದ ಬಿಜೆಪಿ "ಸಂಘಟನಾ ಪರ್ವ 2025" ಬೂತ್​ ಮಟ್ಟದ ಕಾರ್ಯಕರ್ತರ ಸಭೆಯನ್ನು ಮಾಜಿ ಮುಖ್ಯಮಂತ್ರಿ ಸದಾನಂದ ಗೌಡ ಉದ್ಘಾಟಿಸಿದರು. ಮಾಜಿ ಶಾಸಕ ಜಿ.ಚಂದ್ರಣ್ಣ, ರಾಜ್ಯ ಪರಿಷತ್ತಿನ ದೇಸು ನಾಗರಾಜ್​, ಓಬದೇನಹಳ್ಳಿ ಮುನಿಯಪ್ಪ, ಆರ್​.ಕೆ.ನಂಜೇಗೌಡ, ಬೂದಿಗೆರೆ ಪ್ರಭು, ಬಿದಲೂರು ತಮ್ಮಯ್ಯ, ಶಾನಪ್ಪನಹಳ್ಳಿ ರವಿ, ತಾಲೂಕು ಬಿಜೆಪಿ ಉಪಾಧ್ಯಕ್ಷ ರಾಮಕೃಷ್ಣ ಹೆಗಡೆ ಇದ್ದರು. 
ಜಿಲ್ಲೆ

ಸಮರ್ಥ ನಾಯಕರ ಕೊರತೆ

ಬೆಂಗಳೂರು ಗ್ರಾಮಾಂತರ ಡೆಸ್ಕ್

ವಿಜಯಪುರ: ರಾಜ್ಯ ಬಿಜೆಪಿಯಲ್ಲಿ ಎಲ್ಲ ಕಾರ್ಯಕರ್ತರನ್ನು ಒಟ್ಟಾಗಿ ಕರೆದುಕೊಂಡು ಹೋಗುವ ನಾಯಕರ ಕೊರತೆ ಇದೆ. ಅದು ನಾಯಕರಿಗೇ ಅರಿವಾಗಿದ್ದು, ಮುಂದಿನ ಚುನಾವಣೆಗಳಲ್ಲಿ ಬಿಜೆಪಿ ಉತ್ತಮ ಸಾಧನೆ ತೋರಲಿದೆ ಎಂದು ಮಾಜಿ ಮುಖ್ಯಮಂತ್ರಿ ಸದಾನಂದ ಗೌಡ ವಿಶ್ವಾಸ ವ್ಯಕ್ತಪಡಿಸಿದರು.

ಪಟ್ಟಣದ ಬೈಪಾಸ್​ ರಸ್ತೆಯಲ್ಲಿರುವ ಖಾಸಗಿ ಹಾಲ್​ನಲ್ಲಿ ಬಿಜೆಪಿ ಕಾರ್ಯಕರ್ತರು ಹಾಗೂ ಸಾರ್ವಜನಿಕರಿಗೆ ಬೃಹತ್​ ಎಲ್​ಇಡಿ ಪರದೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ 121ನೇ ಮನ್​ ಕಿ ಬಾತ್​ ಕಾರ್ಯಕ್ರಮ ವೀಕ್ಷಣೆ ಹಾಗೂ ಬಿಜೆಪಿ "ಸಂಘಟನಾ ಪರ್ವ 2025' ಬೂತ್​ ಮಟ್ಟದ ಕಾರ್ಯಕರ್ತರ ಸಭೆ ಹಾಗೂ ಪಕ್ಷಕ್ಕೆ ಸೇರ್ಪಡೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಪಕ್ಷದ ಒಬ್ಬೊಬ್ಬ ನಾಯಕರು ಒಂದೊಂದು ದಿಕ್ಕಿನತ್ತ ಮುಖ ಮಾಡಿದ್ದು, ಅದರ ಪರಿಣಾಮ ಕಾರ್ಯಕರ್ತರ ಮೇಲಾಗಿತ್ತು. ಆದರೆ ಇದೀಗ ಎಲ್ಲ ಆಂತರಿಕ ಭಿನ್ನಾಭಿಪ್ರಾಯ, ಗೊಂದಲಗಳನ್ನು ಮರೆತು ಪಕ್ಷದ ಏಳಿಗೆಗಾಗಿ ಎಲ್ಲರೂ ದುಡಿಯುತ್ತಿದ್ದು, ಪಕ್ಷವನ್ನು ಬೂತ್​ ಮಟ್ಟದಿಂದ ಬಲಿಷ್ಠ ಗೊಳಿಸಬೇಕಿದೆ ಎಂದರು. ದೇವನಹಳ್ಳಿ ಕ್ಷೇತ್ರವು ದೇಶದಲ್ಲಿಯೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಪ್ರದೇಶವಾಗಿದ್ದು, ಇಲ್ಲಿ ಬಿಜೆಪಿ ಪ್ರತಿನಿಧಿ ಇರುವುದು ಅವಶ್ಯವಾಗಿದೆ. ಎಲ್ಲರ ಒಗ್ಗಟ್ಟಿನಿಂದ ಮುಂದಿನ ದಿನಗಳಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಬೇಕೆಂದು ತಿಳಿಸಿದರು. ಬಿಜೆಪಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರವಿಕುಮಾರ್​ ಮಾತನಾಡಿ, ಪಕ್ಷವನ್ನು ಬೂತ್​ ಮಟ್ಟದಿಂದ ಬಲಪಡಿಸಲು ಕೇಂದ್ರ ತಂಡದಿಂದ ಅಜೆಂಡಾ ರೂಪಿಸಲಾಗಿದ್ದು, ಎಲ್ಲ ಪಟ್ಟಣ, ತಾಲೂಕು, ಹೋಬಳಿ ಮಟ್ಟದ ನಾಯಕರು ಅದರಂತೆ ನಡೆದುಕೊಳ್ಳಬೇಕಾಗಿದೆ ಎಂದರು.

ಟೌನ್​ ಮಾಜಿ ಅಧ್ಯಕ್ಷ ಜಿ.ಕೆ.ರಾಮು ಭಗವಾನ್​, ಗಿರೀಶ್​, ಪುರಸಭಾ ಮಾಜಿ ಸದಸ್ಯರಾದ ಜೆ.ಎಸ್​ ರಾಮಚಂದ್ರಪ್ಪ, ವರದರಾಜು, ಕೆ ರಾಮಣ್ಣ, ಎಸ್​ ವಿಜಯ್​ ಕುಮಾರ್​, ತಾಲೂಕು ಮಹಿಳಾ ಮೋರ್ಚಾ ಅಧ್ಯಕ್ಷರಾದ ವಿಜಯ ರಾಘವೇಂದ್ರ, ಪ್ರೇಮ, ಭಾಗ್ಯಮ್ಮ, ತಾಯಮ್ಮ, ರಾಘವ, ಸಾಗರ್​, ಚಂದನ, ನಿರಂಜನ್​, ಸಂತೋಷ್​, ಧರ್ಮಪುರ ಅನಿಲ್​ ಇದ್ದರು.

ದಿವಾಳಿಯಾಗಿದೆ ರಾಜ್ಯ : ಅಧಿಕಾರಕ್ಕಾಗಿ ವೋಟಿನ ರಾಜಕಾರಣ ಮಾಡುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಧರ್ಮ, ಜನಾಂಗ, ಜಾತಿಗಳನ್ನು ಒಡೆದು ಆಳುವ ರಾಜಕಾರಣ ಮಾಡುತ್ತಿದ್ದು, ಇದರಿಂದ ರಾಜ್ಯ ದಿವಾಳಿಯಾಗಿದೆ ಎಂದು ಬಿಜೆಪಿ ರೈತ ಮೋರ್ಚಾ ಮಾಜಿ ಉಪಾಧ್ಯಕ್ಷ ನಾರಾಯಣಗೌಡ ಆಪಾದಿಸಿದರು. ದೇಶವನ್ನು ಹಾಳು ಮಾಡಲು ಬರುವ ಪಾಕಿಸ್ತಾನದೊಂದಿಗೆ ಯುದ್ಧ ಬೇಡವೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿರುವುದು ಖಂಡನೀಯ ಎಂದರು.

ಮುಂದಿನ ದಿನಗಳಲ್ಲಿ ಪ್ರತಿ ಗ್ರಾಮ ಗ್ರಾಮಗಳ ಪ್ರತಿ ಮನೆಮನೆಗೂ ಬಿಜೆಪಿ ಕಾರ್ಯಕರ್ತರು ಭೇಟಿ ನೀಡಿ ಪಕ್ಷವನ್ನು ಬಲಿಷ್ಠ ಗೊಳಿಸಲು ಯೋಜನೆ ರೂಪಿಸಿದ್ದು, ಎಲ್ಲ ಮುಖಂಡರು ಇದಕ್ಕೆ ಕೈಜೋಡಿಸಬೇಕಿದೆ. > ಅಂಬರೀಶ್​ ಗೌಡ ದೇವನಹಳ್ಳಿ ತಾಲೂಕು ಬಿಜೆಪಿ ಅಧ್ಯಕ್ಷ