ಮೈಸೂರು: ಭಾರತೀಯರಲ್ಲಿ ವಿಮೆಯ ಮಹತ್ವದ ಕುರಿತು ಅರಿವಿನ ಕೊರತೆ ಇದ್ದು, ಈ ಕುರಿತು ವ್ಯಾಪಕವಾಗಿ ಜಾಗೃತಿ ಮೂಡಿಸುವ ಕಾರ್ಯ ಆಗಬೇಕು ಎಂದು ಮೈಸೂರು ವಿಶ್ವವಿದ್ಯಾಲಯದ ಪರೀಕ್ಷಾಂಗ ಕುಲಸಚಿವ ಡಾ.ಎನ್. ನಾಗರಾಜ ಅಭಿಪ್ರಾಯಪಟ್ಟರು.
ಸರಸ್ವತಿಪುರಂನ ಜೆಎಸ್‌ಎಸ್ ಮಹಿಳಾ ಕಾಲೇಜಿನಲ್ಲಿ ಶುಕ್ರವಾರ ‘ವಿಮೆ ಒಳಗೊಳ್ಳುವಿಕೆ : 2047 ರ ದೃಷ್ಟಿಕೋನ - ಸಾರ್ವತ್ರಿಕ ಸಾಮಾಜಿಕ ಭದ್ರತೆಯ ಅಗತ್ಯ’ ವಿಷಯದ ಕುರಿತು ಆಯೋಜಿಸಿದ್ದ ವಿಚಾರ ಸಂಕಿರಣದಲ್ಲಿ ಮಾತನಾಡಿ, ದೇಶದಲ್ಲಿ 55 ಕೋಟಿ ಜನರು ವಿಮೆಯ ವ್ಯಾಪ್ತಿಗೆ ಒಳಪಟ್ಟಿದ್ದಾರೆ. ಉಳಿದವರನ್ನು ಸಹ ವಿಮಾ ವ್ಯಾಪ್ತಿಗೆ ತಂದು ಅವರಿಗೆ ಸಾಮಾಜಿಕ ಭದ್ರತೆ ದೊರೆಯುವಂತೆ ಮಾಡುವ ಅವಶ್ಯಕತೆ ಇದೆ. ಇದಕ್ಕೆ ವ್ಯಾಪಕ ಪ್ರಚಾರ ಕೈಗೊಂಡು ಜನರಲ್ಲಿ ಅರಿವು ಮೂಡಿಸಬೇಕು. ಆ ಮೂಲಕ ವಿಮೆಯು ಎಲ್ಲರನ್ನೂ ತಲುಪಬೇಕು ಎಂದು ಹೇಳಿದರು.
ವಿಮೆಯ ಮಹತ್ವ ಏನು? ಏತಕ್ಕೆ ನಾವು ವಿಮೆ ಮಾಡಿಸಬೇಕು ಎಂಬ ಕುರಿತು ಸಾಕಷ್ಟು ಜನರಿಗೆ ಮಾಹಿತಿ ಇಲ್ಲ. ಶೇ.95 ರಷ್ಟು ಜನರು ವಿಮೆಯಲ್ಲಿರುವ ನಿಬಂಧನೆಗಳನ್ನು ಓದುವ ಗೋಜಿಗೂ ಸಹ ಹೋಗುವುದಿಲ್ಲ. ಯಾವುದೇ ವಿಮೆ ಮಾಡಿಸುವ ಸಂದರ್ಭ ವಿಮೆಯ ಕುರಿತು ಸಂಪೂರ್ಣ ಮಾಹಿತಿಯನ್ನು ಪಡೆಯಬೇಕು ಎಂದರು.
ದೇಶದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಖಾಸಗಿ ಹಾಗೂ ಸಾರ್ವಜನಿಕ ವಲಯದ ವಿಮಾ ಕಂಪನಿಗಳು ಇವೆ. ಕೆಲವು ಕಂಪನಿಗಳು ಗ್ರಾಹಕರನ್ನು ಸೆಳೆಯಲು ವಿವಿಧ ರೀತಿಯ ಆಕರ್ಷಕ ಘೋಷಣೆಗಳನ್ನು ಮಾಡಿರುತ್ತಾರೆ. ಅದು ಅವರ ಮಾರುಕಟ್ಟೆಯ ತಂತ್ರಗಾರಿಕೆಯಾಗಿದೆ. ಆದರೆ, ವಿಮೆ ಪಾಲಿಸಿ ತೆಗೆದುಕೊಳ್ಳುವ ಮುನ್ನ ವಿಮೆಯ ಬಗ್ಗೆ ನಾವು ತಿಳಿದುಕೊಳ್ಳುವ ಪ್ರಯತ್ನ ಮಾಡಬೇಕು ಎಂದು ಹೇಳಿದರು.
ಸಾಕಷ್ಟು ಖಾಸಗಿ ವಿಮಾ ಕಂಪನಿಗಳು ತನ್ನ ನೌಕರರ ಮೇಲೆ ಅತಿಯಾದ ಒತ್ತಡ ಹೇರಿ ಗುರಿ ಸಾಧನೆಗೆ ಪ್ರಯತ್ನ ನಡೆಸುತ್ತಿವೆ. ಒತ್ತಡ ತಾಳಲಾರದೆ ನೌಕರರು ಬಹುಬೇಗನೆ ಉದ್ಯೋಗ ತೊರೆಯುತ್ತಾರೆ. ಇಂತಹ ಸಂದರ್ಭದಲ್ಲಿ ಪಾಲಿಸಿ ಪಡೆದ ಗ್ರಾಹಕರು ಸಮಸ್ಯೆ ಎದುರಿಸುತ್ತಾರೆ. ಪಾಲಿಸಿ ಮಾಡಿಸಿದ ಗ್ರಾಹಕ ಪಾಲಿಸಿ ನೀಡಿದ ನೌಕರರನ್ನು ಸಂಪರ್ಕಿಸಿದರೆ ಅವರು ಆ ಕಂಪನಿಯಲ್ಲಿ ಉದ್ಯೋಗದಲ್ಲಿ ಇರುವುದಿಲ್ಲ. ಹೀಗಾಗಿ ವಿಮೆಯ ಕುರಿತು ಮಾಹಿತಿ ಪಡೆಯಲು ಗ್ರಾಹಕರು ಸಮಸ್ಯೆ ಎದುರಿಸುತ್ತಿದ್ದಾರೆ. ಇಂತಹ ಸಮಸ್ಯೆಯನ್ನು ನಾನು ಸಹ ಎದುರಿಸಿದ್ದೇನೆ. ಆದರೆ, ಎಲ್ಐಸಿಯಲ್ಲಿ ಇಂತಹ ಸಮಸ್ಯೆಗಳು ಕಂಡು ಬರುತ್ತಿಲ್ಲ ಎಂದರು.
ವೇದಿಕೆಯಲ್ಲಿ ಜೆಎಸ್‌ಎಸ್ ಮಹಿಳಾ ಪದವಿ ಕಾಲೇಜು ಪ್ರಾಂಶುಪಾಲ ಪ್ರೊ. ರೇಚಣ್ಣ, ಅಖಿಲ ಭಾರತ ವಿಮಾ ನೌಕರರ ಸಂಘದ ಮಾಜಿ ಅಧ್ಯಕ್ಷ ಅಮಾನುಲ್ಲಾ ಖಾನ್, ಜೆಎಸ್‌ಎಸ್ ಮಹಾವಿದ್ಯಾಪೀಠದ ಕಾಲೇಜು ಶಿಕ್ಷಣ ವಿಭಾಗದ ನಿರ್ದೇಶಕ ಪ್ರೊ.ಮೊರಬದ ಮಲ್ಲಿಕಾರ್ಜುನ, ಸಂಪನ್ಮೂಲ ವ್ಯಕ್ತಿ ದಿಲೀಪ್ ಕುಮಾರ್, ಕಾರ್ಯಕ್ರಮದ ಸಂಘಟನಾ ಕಾರ್ಯದರ್ಶಿ ಗಂಗಾಧರಸ್ವಾಮಿ ಹಾಗೂ ಇತರರು ಇದ್ದರು.