ಇಂಡಿ ತಾಲೂಕಿನ ಲಚ್ಯಾಣದಲ್ಲಿ ಎಕ್ಸ್‌ಪ್ರೆಸ್ ರೈಲು ನಿತ್ಯ ನಿಲುಗಡೆಗೆ ಒತ್ತಾಯಿಸಿ ಗ್ರಾಮಸ್ಥರು ಸಚಿವ ವಿ.ಸೋಮಣ್ಣ ಅವರಿಗೆ ಹುಬ್ಬಳ್ಳಿಯಲ್ಲಿ ಮನವಿ ಸಲ್ಲಿಸಿದರು. ಲಚ್ಯಾಣ ಗ್ರಾಪಂ ಮಾಜಿ ಸದಸ್ಯ ಗೌಡಪ್ಪ ಹೊಸಮನಿ, ಶಿಕ್ಷಕರಾದ ಬಿ.ಐ. ಬಿರಾದಾರ, ಶಿವಾನಂದ ಬನಸೋಡೆ, ಕಿರಾನಂದ ಮುಜಗೊಂಡ ಹಾಗೂ ರೈಲ್ವೆ ಇಲಾಖೆಯ ಬಸವರಾಜ ಮುಜಗೊಂಡ ಇತರರಿದ್ದರು. 
ಜಿಲ್ಲೆ

ಲಚ್ಯಾಣದಲ್ಲಿ ಎಕ್ಸ್‌ಪ್ರೆಸ್ ರೈಲು ನಿಲುಗಡೆಗೆ ಒತ್ತಾಯ

Vijayapura - Desk - Chinnayya Chinnayyanamath

ಇಂಡಿ: ತಾಲೂಕಿನ ಸುಕ್ಷೇತ್ರ ಲಚ್ಯಾಣದಲ್ಲಿ ಬಸವ ಹಾಗೂ ಗೋಲಗುಂಬಜ್ ಎಕ್ಸ್‌ಪ್ರೆಸ್ ರೈಲನ್ನು ನಿತ್ಯ ನಿಲುಗಡೆಗೆ ಒತ್ತಾಯಿಸಿ ಬಂಥನಾಳದ ಡಾ.ವೃಷಭಲಿಂಗೇಶ್ವರ ಮಹಾಶಿವಯೋಗಿಗಳ ಅಪ್ಪಣೆಯ ಮೇರೆಗೆ ಲಚ್ಯಾಣ ಗ್ರಾಮಸ್ಥರು ಹುಬ್ಬಳ್ಳಿಗೆ ತೆರಳಿ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಅವರನ್ನು ಗುರುವಾರ ಭೇಟಿಯಾಗಿ ಮನವಿ ಸಲ್ಲಿಸಿದರು.

ಲಚ್ಯಾಣ ಗ್ರಾಮಸ್ಥರು ಮಾತನಾಡಿ, ಕರ್ನಾಟಕ ಹಾಗೂ ಮಹಾರಾಷ್ಟ್ರ ರಾಜ್ಯದ ನಡುವಿನ ಸಂಪರ್ಕದ ಕೊಂಡಿಯಂತಿರುವ ಲಚ್ಯಾಣ ರೈಲು ನಿಲ್ದಾಣ ಕರ್ನಾಟಕ ರಾಜ್ಯದ ಗಡಿ ಭಾಗದ ನಿಲ್ದಾಣವಾಗಿದೆ. ಆಂಧ್ರಪ್ರದೇಶ, ಬೆಂಗಳೂರು, ಹುಬ್ಬಳ್ಳಿ, ಪಂಢರಾಪುರ ಸೇರಿ ವಿವಿಧ ಭಾಗದ ಭಕ್ತರು ಇದೇ ರೈಲು ನಿಲ್ದಾಣದ ಮೂಲಕ ಈ ಭಾಗದ ಪ್ರಸಿದ್ಧ ಪುಣ್ಯಸ್ಥಳ ಸಿದ್ಧಲಿಂಗ ಮಹಾರಾಜರ ಕಮರಿಮಠ ತಲುಪುತ್ತಿದ್ದಾರೆ ಎಂದು ಹೇಳಿದರು.

ಅತಿ ಹೆಚ್ಚು ಶಿಕ್ಷಕರಿಂದ ತುಂಬಿರುವ ಈ ಗ್ರಾಮ ಈ ಭಾಗದ ಶಿಕ್ಷಣ ಕಾಶಿಯೂ ಆಗಿದೆ. ಈ ಗ್ರಾಮದಲ್ಲಿ ಪ್ರಾಥಮಿಕ ಹಂತದಿಂದ ಹಿಡಿದು, ಶಿಕ್ಷಕರ ತರಬೇತಿ ಕೇಂದ್ರ, ಕೈಗಾರಿಕಾ ತರಬೇತಿ ಕೇಂದ್ರ ಸೇರಿ ಹತ್ತು ಹಲವು ಶೈಕ್ಷಣಿಕ ಕೇಂದ್ರಗಳಿವೆ. ಮತ್ತೊಂದೆಡೆ ಸುತ್ತಲಿನ ಲೋಣಿ ಕೆ.ಡಿ., ಬರಗೂಡಿ, ಅಹಿರಸಂಗ, ಮಾವಿನಹಳ್ಳಿ, ಅಗರಖೇಡ, ಪಡನೂರ, ಶಿರಬೂರ ಸೇರಿ ವಿವಿಧ ಭಾಗದ ಪ್ರಯಾಣಿಕರಿಗೆ ಲಚ್ಯಾಣ ರೈಲು ನಿಲ್ದಾಣವೇ ಕೇಂದ್ರಸ್ಥಳವಾಗಿದೆ. ಈ ಹಿಂದೆ ಈ ನಿಲ್ದಾಣದಲ್ಲಿ ದೂರದ ಭಕ್ತರ ಆಗಮನದಿಂದ ದಾಖಲೆ ರೈಲು ಟಿಕೆಟ್ ಮಾರಾಟವಾಗಿವೆ ಎಂದರು.

ಲಚ್ಯಾಣದ ಅಧಿಪತಿ ಪವಾಡ ಪುರುಷ ಸಿದ್ಧಲಿಂಗ ಮಹಾರಾಜರ ಭಾವಚಿತ್ರದೊಂದಿಗೆ ಮನವಿ ಸ್ವೀಕರಿಸಿ ಮಾತನಾಡಿದ ಸಚಿವ ವಿ. ಸೋಮಣ್ಣ ಅವರು, ಈ ಕುರಿತು ರೈಲು ಅಧಿಕಾರಿಗಳೊಂದಿಗೆ ಚರ್ಚಿಸಿ ಲಚ್ಯಾಣದಲ್ಲಿ ಕೂಡಲೇ ಎಕ್ಸಪ್ರೆಸ್ ರೈಲು ನಿಲುಗಡೆಗೆ ಮಾಡುವ ಭರವಸೆ ನೀಡಿದರು.

ಲಚ್ಯಾಣ ಗ್ರಾಪಂ ಮಾಜಿ ಸದಸ್ಯ ಗೌಡಪ್ಪ ಹೊಸಮನಿ, ಶಿಕ್ಷಕರಾದ ಬಿ.ಐ. ಬಿರಾದಾರ, ಶಿವಾನಂದ ಬನಸೋಡೆ, ಕಿರಾನಂದ ಮುಜಗೊಂಡ ಹಾಗೂ ರೈಲ್ವೆ ಇಲಾಖೆಯ ಬಸವರಾಜ ಮುಜಗೊಂಡ ಇತರರಿದ್ದರು.