ಜಿಲ್ಲೆ

ವಿಳಂಬ ನೀತಿ ಅನುಸರಿಸುವುದು ಸರಿಯಲ್ಲ: ಪಂಚಮಸಾಲಿ ಸಮುದಾಯ ಮುಖಂಡರ ಆಕ್ರೋಶ

Koppal

ಯಲಬುರ್ಗಾ: ಕಿತ್ತೂರು ರಾಣಿ ಚನ್ನಮ್ಮ ಜಯಂತಿ ಹಾಗೂ ವಿಜಯೋತ್ಸವ ಅಂಗವಾಗಿ ತಾಲೂಕು ಪಂಚಮಸಾಲಿ ಸಮುದಾಯದಿಂದ ಪಟ್ಟಣದಲ್ಲಿ ಚನ್ನಮ್ಮ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು. ನಂತರ ಸಮುದಾಯದ ಮುಖಂಡರು ಕಪ್ಪುಪಟ್ಟಿ ಧರಿಸಿ 2ಎ ಮೀಸಲಾತಿಗೆ ಒತ್ತಾಯಿಸಿ ಭಾನುವಾರ ಗ್ರೇಡ್2 ತಹಸೀಲ್ದಾರ್ ನಾಗಪ್ಪ ಸಜ್ಜನ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಸಮುದಾಯದ ನಿಕಟಪೂರ್ವ ಜಿಲ್ಲಾಧ್ಯಕ್ಷ ಬಸಲಿಂಗಪ್ಪ ಭೂತೆ ಮಾತನಾಡಿ, ದೇಶದ ಸ್ವಾತಂತ್ರ್ಯಕ್ಕಾಗಿ ರಾಣಿ ಚನ್ನಮ್ಮ ಕೊಡುಗೆ ಅಪಾರ. ಬ್ರಿಟಿಷರ ವಿರುದ್ಧ ಹೋರಾಡಿದ ಧೀರ ಮಹಿಳೆಯಾಗಿದ್ದಾರೆ ಎಂದ ಅವರು, ಸಮುದಾಯಕ್ಕೆ 2ಎ ಮೀಸಲಾತಿ ನೀಡುವ ವಿಚಾರದಲ್ಲಿ ರಾಜ್ಯ ಸರ್ಕಾರ ವಿಳಂಬ ನೀತಿ ಅನುಸರಿಸುತ್ತಿರುವುದು ಸರಿಯಲ್ಲ. ಮಕ್ಕಳ ಶೈಕ್ಷಣಿಕ ಹಿತದೃಷ್ಟಿಯಿಂದ ಮೀಸಲಾತಿ ನೀಡಬೇಕು ಎಂದು ಒತ್ತಾಯಿಸಿದರು.

ಮುಖಂಡರಾದ ಬಸವರಾಜ ಉಳ್ಳಾಗಡ್ಡಿ, ವೀರಣ್ಣ ಹುಬ್ಬಳ್ಳಿ ಮಾತನಾಡಿ, ಬಿ.ಎಸ್.ಯಡಿಯೂರಪ್ಪ ಅಧಿಕಾರ ವಹಿಸಿಕೊಂಡಾಗ ಮೀಸಲಾತಿ ನೀಡುವುದಾಗಿ ಭರವಸೆ ನೀಡಿದ್ದರು. ಕೊಟ್ಟ ಮಾತಿನಂತೆ ನಡೆದುಕೊಳ್ಳಲಿಲ್ಲ. ಡಿಸೆಂಬರ್ ಅಂತ್ಯದೊಳಗೆ ರಾಜ್ಯ ಸರ್ಕಾರ ಸಮುದಾಯಕ್ಕೆ ಮೀಸಲಾತಿ ನೀಡುವ ಭರವಸೆ ನೀಡಿದೆ. ವಿಳಂಬವಾದರೆ ಹೋರಾಟ ನಿರಂತರವಾಗಿರುತ್ತದೆ ಎಂದು ಎಚ್ಚರಿಕೆ ನೀಡಿದರು. ಸಮುದಾಯದ ತಾಲೂಕು ಕಾರ್ಯದರ್ಶಿ ರಾಜಶೇಖರ ನಿಂಗೋಜಿ ಮಾತನಾಡಿದರು. ತಾಲೂಕು ಅಧ್ಯಕ್ಷ ಕೆ.ಜಿ.ಪಲ್ಲೇದ, ಪಪಂ ಅಧ್ಯಕ್ಷ ಅಮರೇಶ ಹುಬ್ಬಳ್ಳಿ, ಸದಸ್ಯರಾದ ಅಶೋಕ ಅರಕೇರಿ, ಬಸವಲಿಂಗಪ್ಪ ಕೊತ್ತಲ, ಪ್ರಮುಖರಾದ ಶರಣಪ್ಪ ಅರಕೇರಿ, ಶಂಕರಗೌಡ ಎ.ಎಂ, ಶರಣಪ್ಪ ಗಾಂಜಿ, ಸಂಗಪ್ಪ ರಾಮತ್ನಾಳ, ಸಿದ್ರಾಮೇಶ ಬೇಲೇರಿ, ಮಲ್ಲಣ್ಣ ನೆರೆಗಲ್ಲ, ಸುರೇಶಗೌಡ ಶಿವನಗೌಡ, ಶರಣಪ್ಪ ರಾಂಪುರ, ಸ.ಶರಣಪ್ಪ ಪಾಟೀಲ್, ಮಹಾಂತೇಶ ಭಾಸ್ಕರ, ಬಸವರಾಜ ಬನ್ನಿಗೋಳ, ಸಂಗಪ್ಪ ಕೊಪ್ಪಳ, ರವಿತೇಜ ಅಧಿಕಾರಿ, ಶರಣಪ್ಪ ಗೋಣಿ ಇತರರಿದ್ದರು.