ಜಿಲ್ಲೆ

ಅಭಿವೃದ್ಧಿಗೆ ಶ್ರಮಿಕ ವರ್ಗದ ಕೊಡುಗೆ ಅಪಾರ

ಲಲಾಟಾಕ್ಷ ಎಸ್

ಸರಗೂರು: ಶ್ರಮಜೀವಿಗಳ ಕೆಲಸವನ್ನು ಗೌರವಿಸುವ ಹಾಗೂ ಅವರ ಕಷ್ಟಗಳನ್ನು ಸ್ಮರಿಸುವ ಸಲುವಾಗಿ ಮೇ 1ರಂದು ಕಾರ್ಮಿಕ ದಿನ ಆಚರಿಸಲಾಗುತ್ತಿದೆ. ಕಾರ್ಮಿಕರ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸುವುದು ಮತ್ತು ಶೋಷಣೆಯಿಂದ ರಕ್ಷಿಸುವುದು ಕಾರ್ಮಿಕ ದಿನದ ಉದ್ದೇಶವಾಗಿದೆ ಎಂದು ತಾಲೂಕು ನ್ಯಾಯಬೆಲೆ ಅಂಗಡಿ ಮಾಲೀಕರ ಸಂಘದ ಅಧ್ಯಕ್ಷ ಡಿ.ಜಿ.ಶಿವರಾಜಪ್ಪ ತಿಳಿಸಿದರು.


ಪಟ್ಟಣದ ಲೋಡರ್ಸ್ ಅಸೋಸಿಯೇಷನ್ ವತಿಯಿಂದ ಬುಧವಾರ ಹಮ್ಮಿಕೊಂಡಿದ್ದ ಕಾರ್ಮಿಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಾರ್ಮಿಕರು ಕಷ್ಟಪಟ್ಟು ದುಡಿಯದಿದ್ದರೆ ದೇಶ ಅಭಿವೃದ್ಧಿಯಾಗಲು ಸಾಧ್ಯವಿಲ್ಲ. ಹೀಗಾಗಿ ಅಂತಹ ಶ್ರಮಿಕ ವರ್ಗಕ್ಕೆ ಗೌರವ ಸಲ್ಲಿಸುವ ಉದ್ದೇಶದಿಂದ ಕಾರ್ಮಿಕರ ದಿನಾಚರಣೆ ಆಚರಿಸಲಾಗುತ್ತದೆ ಎಂದು ಹೇಳಿದರು.


ವರ್ತಕರ ಸಂಘದ ಅಧ್ಯಕ್ಷ ಶ್ರೀನಿವಾಸ ಮಾತನಾಡಿ, ದೇಶದ ಪ್ರತಿಯೊಂದು ಅಭಿವೃದ್ಧಿ ಕಾರ್ಯಗಳು ಕಾರ್ಮಿಕರ ಶ್ರಮದ ಮೇಲೆ ನಿಂತಿದೆ. ದುಡಿಯುವ ವರ್ಗಕ್ಕೆ ಶಕ್ತಿ ತುಂಬಬೇಕು. ಮನುಷ್ಯ ಎಷ್ಟೇ ಮುಂದುವರಿದು ತಂತ್ರಜ್ಞಾನಗಳನ್ನು ಬಳಕೆ ಮಾಡುತ್ತಿದ್ದರೂ ಕಾರ್ಮಿಕರಿಲ್ಲದೆ ಯಾವುದೇ ಕೆಲಸಗಳು ಸಾಧ್ಯವಿಲ್ಲ ಎಂದು ಹೇಳಿದರು.


ಸಂಘದ ಹಿರಿಯ ಸದಸ್ಯರನ್ನು ಸನ್ಮಾನಿಸಲಾಯಿತು. ಲೋಡರ್ಸ್ ಅಸೋಸಿಯೇಷನ್ ಅಧ್ಯಕ್ಷ ಶ್ರೀನಿವಾಸ, ಉಪಾಧ್ಯಕ್ಷ ಚಿಕ್ಕಚೆನ್ನಯ್ಯ, ಪ್ರಧಾನ ಕಾರ್ಯದರ್ಶಿ ವರದರಾಜು, ಸಹಕಾರ್ಯದರ್ಶಿ ಪ್ರಕಾಶ್, ಖಜಾಂಚಿ ಗೋವಿಂದರಾಜು, ನರಸಿಂಹಗೌಡ, ನಿಂಗಯ್ಯ, ಜವರಯ್ಯ, ಹನುಮಂತ, ಚಿಕ್ಕಣ್ಣ ಶೆಟ್ಟಿ, ನಜೀರ್, ವೆಂಕಟೇಶ್, ರಂಗಣ್ಣ, ಸಿದ್ದರಾಜು, ಗಜೇಂದ್ರ, ರಾಮಚಂದ್ರ, ರಂಗನಾಥ್, ಶ್ರೀನಾಥ್, ರಂಗಸ್ವಾಮಿ ಹಾಜರಿದ್ದರು.