ಜಿಲ್ಲೆ

ದುಡಿದು ಉಣ್ಣುವ ಸಂಸ್ಕೃತಿ ಬಿತ್ತಲು ತರಳಬಾಳು ಶ್ರೀ ಸಲಹೆ

ಸಿರಿಗೆರೆ: ಕಾಂಗ್ರೆಸ್‌ನ ಉಚಿತ ಗ್ಯಾರಂಟಿ ಯೋಜನೆಗಳಿಂದ ಸಾಮಾಜಿಕ ಸಮಸ್ಯೆ ಸೃಷ್ಟಿಯಾಗುವ ಸಾಧ್ಯತೆ ಇದೆ ಎಂದು ಡಾ. ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಕಳವಳ ವ್ಯಕ್ತಪಡಿಸಿದರು.

ಸಿರಿಗೆರೆ ಸದ್ಧರ್ಮ ನ್ಯಾಯಪೀಠಕ್ಕೆ ಈಚೆಗೆ ಭೇಟಿ ನೀಡಿದ್ದ ಹೊಸದುರ್ಗ ಶಾಸಕ ಬಿ.ಜಿ.ಗೋವಿಂದಪ್ಪ ಅವರನ್ನು ಆಶೀರ್ವದಿಸಿ ಮಾತನಾಡಿದರು.

ಕೂತು ಉಂಡರೆ ಕುಡಿಕೆ ಹಣ ಸಾಲದು. ಆದ್ದರಿಂದ ಜನರಲ್ಲಿ ದುಡಿದು ಉಣ್ಣುವ ಸಂಸ್ಕೃತಿ ಕಲಿಸಬೇಕು ಎಂದು ತಿಳಿಸಿದರು.

ಪ್ರಣಾಳಿಕೆಯಲ್ಲಿ ಮಹಿಳೆಯರಿಗೆ ಪ್ರತಿ ತಿಂಗಳು 2 ಸಾವಿರ ರೂ. ಕೊಡುವುದಾಗಿ ಘೋಷಣೆ ಮಾಡಿದ ಹಣ ಅತ್ತೆಗೋ, ಸೊಸೆಗೋ ಎಂಬ ಗೊಂದಲ ಕುಟುಂಬಗಳಲ್ಲಿ ನಿರ್ಮಾಣವಾಗಿದೆ.

ಸೌಲಭ್ಯದ ಲಾಭ ಪಡೆಯಲು ಕೆಲವೆಡೆ ಮನೆಗಳೇ ಇಬ್ಭಾಗ ಆಗುವ ಸಾಧ್ಯತಿ ಇದೆ ಎಂದರು.

ಆದ್ದರಿಂದ ಸರ್ಕಾರ ದೀರ್ಘಕಾಲದ ಯೋಜನೆ ರೂಪಿಸಿ, ನಾಡಿನ ವಿದ್ಯಾವಂತರು ಮತ್ತು ಶ್ರಮಜೀವಿಗಳನ್ನು ಅಭಿವೃದ್ಧಿ ಕಾರ್ಯದಲ್ಲಿ ತೊಡಗಿಸಿಕೊಳ್ಳಲು ಮುಂದಾಗಬೇಕು.

ಈ ಮೂಲಕ ಜನರ ಶ್ರೇಯೋಭಿವೃದ್ಧಿಗೆ ಶ್ರಮಿಸಬೇಕು ಎಂದು ಸಲಹೆ ನೀಡಿದರು.

ಸಮಾಜಸೇವೆ ನಮ್ಮ ಋಣದ ಹೊರೆಯನ್ನು ಹಗುರ ಮಾಡುವ ದಾರಿ. ಜನರಿಗೆ ನಾವು ಉಪಕಾರ ಮಾಡುತ್ತೇವೆ ಎಂಬ ಭ್ರಮೆ ಸರಿಯಲ್ಲ.

ಕೃಷಿ ಪೂರಕ ಯೋಜನೆಗೆ ಆದ್ಯತೆ

ನಿಮ್ಮ ಕ್ಷೇತ್ರದಲ್ಲಿ ಕೃಷಿ ಪೂರಕ ಯೋಜನೆಗೆ ಆದ್ಯತೆ ನೀಡಬೇಕು. ಚುನಾವಣೆಯಲ್ಲಿ ಗೆದ್ದವರು ಮತ ಹಾಕದವರು, ಪ್ರತಿಪಕ್ಷದವರನ್ನು ಕೂಡ ಗೌರವದಿಂದ ಕಾಣುವ ಗುಣದ ಜತೆಗೆ ಅವರಿಗೂ ಸರ್ಕಾರಿ ಸೌಲಭ್ಯ ತಲುಪಿಸುವ ಹೊಣೆಗಾರಿಕೆ ನಿರ್ವಹಿಸಬೇಕು ಎಂದರು.

ಕೃಷಿ ಉತ್ಪನ್ನಗಳಿಗೆ ವೈಜ್ಞಾನಿಕ ಬೆಲೆ, ಬಿತ್ತನೆ ಬೀಜ, ಗೊಬ್ಬರ ಸೇರಿ ಪರಿಕರಗಳು ಕಡಿಮೆ ಬೆಲೆಗೆ ಸಕಾಲಕ್ಕೆ ದೊರೆಯುವ ವ್ಯವಸ್ಥೆ ಮಾಡಬೇಕು.

ಕೃಷಿ, ಶಿಕ್ಷಣ, ಆರೋಗ್ಯ ಕ್ಷೇತ್ರ ಬಲವರ್ಧನೆಗೊಂಡರೆ ದೇಶದ ಅಭಿವೃದ್ಧಿ ಸಾಧ್ಯವಾಗಲಿದೆ ಎಂಬ ಸತ್ಯವನ್ನು ಜನಪ್ರತಿನಿಧಿಗಳು ಅರಿತುಕೊಳ್ಳಬೇಕು ಎಂದು ಹೇಳಿದರು.

ಚುನಾವಣೆ ಈಗ ಮುಗಿದಿದೆ. ಆದರೂ ಕೆಲ ಹಳ್ಳಿಗಳಲ್ಲಿ ಪಕ್ಷ ರಾಜಕಾರಣ ಜೀವಂತವಾಗಿದೆ. ಈ ದ್ವೇಷದ ವಾತಾವರಣ ನಿರ್ಮೂಲನೆ ಮಾಡಲು ಗೆದ್ದವರು-ಸೋತವರು ಜತೆಗೂಡಿ ಮಾಡಬೇಕು.

ದ್ವೇಷ, ಮತ್ಸರ ತೊಡೆದುಹಾಕಿ ಸೌಹಾರ್ದತೆ ಕಾಪಾಡುವ ಹೊಣೆಗಾರಿಕೆ ನಿಭಾಯಿಸಬೇಕು ಎಂದರು.