ಜಿಲ್ಲೆ

ಅಡಕೆ ಕೊಯ್ಲಿಗೆ ಕಾರ್ಮಿಕರ ಕೊರತೆ, ಬೆಲೆ ಇದ್ದರೂ ಬೆಳೆಗಾರನಿಗೆ ನೆಮ್ಮದಿ ಇಲ್ಲ

ಗಣೇಶ್ ಮಾವಂಜಿ ಸುಳ್ಯ

ಜಿಲ್ಲೆಯ ಜನರ ಜೀವನಾಧಾರವಾದ ಅಡಕೆ ಬೆಳೆಗೆ ಈ ಬಾರಿ ಸಾರ್ವಕಾಲಿಕ ದಾಖಲೆ ಬೆಲೆ ಕಂಡಿದ್ದರೂ ಕೃಷಿಕರ ಮೊಗದಲ್ಲಿ ಸಂತಸವೇನೂ ಕಾಣುತ್ತಿಲ್ಲ. ಅಡಕೆ ಕೃಷಿಯನ್ನು ಆಪೋಷನಗೈಯುತ್ತಿರುವ ಹಳದಿ ರೋಗ ಒಂದು ಕಡೆಯಾದರೆ ಮರವೇರಿ ಕೊಯ್ಲು ನಡೆಸುವ ಪರಿಣಿತ ಕೆಲಸಗಾರರ ಕೊರತೆ ಮತ್ತೊಂದು ಕಡೆ ಅಡಕೆ ಬೆಳೆಗಾರರ ನಿದ್ದೆಗೆಡಿಸಿದೆ.

ಮರಹತ್ತುವವರು ಸರಿಯಾದ ಸಮಯಕ್ಕೆ ಸಿಗದೆ ಬೆಳೆಗಾರ ಸಂಕಷ್ಟಕ್ಕೆ ಸಿಲುಕಿದ್ದಾನೆ. ಹಲವೆಡೆ ಎರಡನೇ ಕೊಯ್ಲು ಇನ್ನೂ ನಡೆದಿಲ್ಲ. ಅಡಕೆ ಕೊಯ್ದು, ಸಂಸ್ಕರಿಸಿ ಮಾರುಕಟ್ಟೆಗೆ ತಲುಪುವ ಹೊತ್ತಿಗೆ ಬೆಲೆ ಇಳಿಕೆಯಾಗುವ ಹೆದರಿಕೆ. ಮಂಗಗಳ ಕಾಟವೂ ಅತಿಯಾಗಿದ್ದು ಫಸಲು ಹಾಳು ಮಾಡುತ್ತಿವೆ.

ತರಬೇತಿ ಪಡೆದರೂ ವೃತ್ತಿ ಮಾಡುವುದಿಲ್ಲ: ಕೆಲಸಗಾರರ ಸಮಸ್ಯೆ ನೀಗಿಸಲು ಕ್ಯಾಂಪ್ಕೊ ಹಾಗೂ ಇತರ ಸಂಘ ಸಂಸ್ಥೆಗಳು ಯುವಕರಿಗೆ ಮರವೇರಲು ತರಬೇತಿ ನೀಡುತ್ತಿದ್ದರೂ ಶ್ರಮ ಬೇಡುವ ಕೆಲಸಕ್ಕೆ ಹೆಚ್ಚಿನ ಯುವಕರು ಮುಂದೆ ಬರುತ್ತಿಲ್ಲ. ಕೆಲವು ಯುವಕರು ಇಂತಹ ತರಬೇತಿ ಕಾರ್ಯಕ್ರಮಗಳಿಗೆ ಹಾಜರಾದರೂ ಅದನ್ನು ಸಂಪೂರ್ಣ ವೃತ್ತಿಯಾಗಿ ಸ್ವೀಕರಿಸುವವರ ಸಂಖ್ಯೆ ಕಡಿಮೆ.

ಯಂತ್ರಗಳಿಗೆ ಬೆಲೆ ಅಧಿಕ: ವಿಟ್ಲದಲ್ಲಿರುವ ಸಿಪಿಸಿಆರ್‌ಐ ಸಂಸ್ಥೆ ಹಾಗೂ ಕೆಲವು ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ಅತ್ಯಾಧುನಿಕ ಯಂತ್ರಗಳನ್ನು ಆವಿಷ್ಕರಿಸಿ ಅಡಕೆ ಕೊಯ್ಲು ಹಾಗೂ ಕ್ರಿಮಿನಾಶಕ ಸಿಂಪಡನೆಯ ಕೆಲಸಗಳು ಸುಲಭವಾಗಿ ರೀತಿಯಲ್ಲಿ ಮಾಡಿವೆ. ಆದರೆ ಈ ರೀತಿಯ ಯಂತ್ರಗಳ ಬೆಲೆ ಅಧಿಕವಾಗಿರುವುದರಿಂದ ಅದನ್ನು ಖರೀದಿಸಲು ಬೆಳೆಗಾರರು ಆಸಕ್ತಿ ವಹಿಸುತ್ತಿಲ್ಲ. ಹೀಗಾಗಿ ಅಡಕೆ ಬೆಳೆಗಾರರು ಪರಿಣತಿ ಹೊಂದಿರುವ ಕೆಲಸಗಾರರನ್ನೇ ಆಶ್ರಯಿಸಬೇಕಾಗುತ್ತದೆ.

ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ಇಳುವರಿ ಸ್ವಲ್ಪ ಆಧಿಕ. ಬೆಲೆಯೂ ಹೆಚ್ಚಿದೆ. ಆದರೆ ಕೊಯ್ಲು ಮಾಡುವುದೇ ದೊಡ್ಡ ಸಮಸ್ಯೆ. ಕಾರ್ಮಿಕರ ಕೊರತೆಯಿಂದ ಎರಡನೇ ಕೊಯ್ಲು ಇನ್ನೂ ಸಾಧ್ಯವಾಗಿಲ್ಲ. ಇನ್ನು ಕೊಯ್ದು, ಒಣಗಿಸಿ, ಮಾರುಕಟ್ಟೆಗೆ ರವಾನಿಸುವಾಗ ಬೆಲೆ ಇಳಿತವಾಗಬಹುದೇನೋ ಎಂಬ ಆತಂಕವಿದೆ. -ಚಂದ್ರಶೇಖರ ಅತ್ಯಾಡಿ,ಅಡಕೆ ಬೆಳೆಗಾರ  ಎಲ್ಲ ಕಡೆಗಳಲ್ಲೂ ಏಕಕಾಲಕ್ಕೆ ಅಡಕೆ ಹಣ್ಣಾಗುವ ಕಾರಣ ಪ್ರತಿದಿನ ಹತ್ತಕ್ಕೂ ಹೆಚ್ಚು ಕಡೆಗಳಿಂದ ಕೊಯ್ಲು ನಡೆಸಲು ಕರೆಗಳು ಬರುತ್ತಿವೆ. ಮೊದಲು ಯಾರು ಕರೆ ಮಾಡುತ್ತಾರೋ ಅಲ್ಲಿಗೆ ಹೋಗುತ್ತೇನೆ. ಮರವೇರಿ ಕೊಯ್ಲು ನಡೆಸುವುದು ಹಾಗೂ ಕ್ರಿಮಿನಾಶಕ ಸಿಂಪಡಿಸುವುದು ಹೆಚ್ಚು ತ್ರಾಸದಾಯಕವಾದುದರಿಂದ ಯುವಕರು ಈ ಕೆಲಸಕ್ಕೆ ಮುಂದೆ ಬರುತ್ತಿಲ್ಲ. -ಸುಂದರ ನಾಯ್ಕ, ಶಿವಾಜಿನಗರ, ಮಂಡೆಕೋಲು, ಅಡಕೆ ಕೊಯ್ಲು ಪರಿಣಿತ