ಕಂಪ್ಲಿಯಲ್ಲಿ ಷಾಮಿಯಾನ, ಡೆಕೋರೇಟರ್ಸ್‌, ಧ್ವನಿ ಮತ್ತು ಬೆಳಕು ಕ್ಷೇಮಾಭಿವೃದ್ಧಿ ಸಂಘದ ಸಂಘಟನಾ ಸಭೆಯಲ್ಲಿ ಸಂಘದ ಸಂಸ್ಥಾಪಕ ಮೆಹಬೂಬ್ ಮುಲ್ಲಾ ಮಾತನಾಡಿದರು. ಪ್ರಮುಖರಾದ ಎಚ್.ನಾಗರಾಜ, ಟಿ.ಮೌಲಾಲಿ, ವಿದ್ಯಾನಂದ, ಸಣಾಪುರ ವೀರೇಶ, ರಾಘವೇಂದ್ರ ಇತರರಿದ್ದರು. 
ಜಿಲ್ಲೆ

ಕಾರ್ಮಿಕ ಇಲಾಖೆ ಸೌಲಭ್ಯ ಕಲ್ಪಿಸಿ

ರುದ್ರಪ್ಪ ವಾಲಿ

ಕಂಪ್ಲಿ: ಷಾಮಿಯಾನ ಡೆಕೋರೇಟರ್ಸ್‌ ಮತ್ತು ಧ್ವನಿ ಬೆಳಕಿನ ಶ್ರಮಿಕರ ಹಿತಾಸಕ್ತಿಗಾಗಿ ಸರ್ಕಾರ ಪ್ರತ್ಯೇಕ ನಿಗಮ ಸ್ಥಾಪಿಸಬೇಕು ಎಂದು ರಾಜ್ಯ ಷಾಮಿಯಾನ, ಡೆಕೋರೇಟರ್ಸ್‌, ಧ್ವನಿ ಮತ್ತು ಬೆಳಕು ಕ್ಷೇಮಾಭಿವೃದ್ಧಿ ಸಂಘದ ಸಂಸ್ಥಾಪಕ ಮೆಹಬೂಬ್ ಮುಲ್ಲಾ ಆಗ್ರಹಿಸಿದರು.

ಪಟ್ಟಣದಲ್ಲಿ ಆಯೋಜಿಸಿದ್ದ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾ ಪದಾಧಿಕಾರಿಗಳ ಸಂಘಟನಾ ಸಭೆಯ ಅಧ್ಯಕ್ಷತೆ ವಹಿಸಿ ಸೋಮವಾರ ಮಾತನಾಡಿದರು. ಷಾಮಿಯಾನ, ಡೆಕೋರೇಟರ್ಸ್‌, ಧ್ವನಿ ಬೆಳಕು ಕಾರ್ಮಿಕರನ್ನು ಸರ್ಕಾರ ಶ್ರಮಿಕರೆಂದು ಪರಿಗಣಿಸಿದ್ದು, ಕಾರ್ಮಿಕ ಇಲಾಖೆಯ ಎಲ್ಲ ಸೌಲಭ್ಯಗಳನ್ನು ಒದಗಿಸಬೇಕು. ಶ್ರಮಿಕರ ಪ್ರಾಣ, ಆಸ್ತಿ ನಷ್ಟಗೊಂಡಲ್ಲಿ ಸರ್ಕಾರ ಪರಿಹಾರ ಕೊಡಬೇಕು. ಡೆಕೋರೇಟರ್ಸ್‌ ಸಾಮಾನು ಸರಂಜಾಮು ಶೇಖರಣೆಗಾಗಿ ಸ್ಥಳೀಯ ಆಡಳಿತ ಉಚಿತವಾಗಿ ಗೋದಾಮು ವ್ಯವಸ್ಥೆ ಒದಗಿಸಿಕೊಡಬೇಕು ಎಂದು ಒತ್ತಾಯಿಸಿದರು.

ಸಂಘದ ಜಿಲ್ಲಾಧ್ಯಕ್ಷ ಎಚ್.ನಾಗರಾಜ ಮಾತನಾಡಿ, ಪಟ್ಟಣದಲ್ಲಿ ಡೆಕೋರೇಟರ್ಸ್‌ ಸಂಘದ ಸಾಮಾಜಿಕ, ಸಾಂಸ್ಕೃತಿಕ ಚಟುವಟಿಕೆಗಳಿಗಾಗಿ ಸಮುದಾಯ ಭವನ ನಿರ್ಮಿಸಲು ಪುರಸಭೆಯಿಂದ ನಿವೇಶನ ನೀಡಬೇಕು. ಕಟ್ಟಡ ನಿರ್ಮಾಣಕ್ಕೆ ಶಾಸಕರು ಅನುದಾನ ಒದಗಿಸುವಂತೆ ಆಗ್ರಹಿಸಿದರು. ಮೂರು ವರ್ಷ ಜಿಲ್ಲಾಧ್ಯಕ್ಷರಾಗಿ ಸೇವೆ ಸಲ್ಲಿಸಿದ ಎಚ್.ನಾಗರಾಜರನ್ನು ಗೌರವಿಸಲಾಯಿತು.