ಧಾರವಾಡ: ಕೃಷಿಯು ಸಾವಿರಾರು ವರ್ಷಗಳ ಇತಿಹಾಸ ಹೊಂದಿದೆ. ರೈತನ ಬದುಕು ಪ್ರಕೃತಿಯೊಂದಿಗಿನ ಜೂಜಾಟವಾಗಿದೆ. ಕೃಷಿ ವಲಯದಲ್ಲಿ ಕಾರ್ಯನಿರ್ವಹಿಸುವ ಕಾರ್ಮಿಕರನ್ನು ಗುರುತಿಸುವ ಮತ್ತು ಗೌರವಿಸುವ ಕಾರ್ಯವಾಗಬೇಕು ಎದು ಬಸವ ತತ್ವ ಚಿಂತಕ ರಮಜಾನ್ ದರ್ಗಾ ಹೇಳಿದರು.
ಜಲ ಮತ್ತು ನೆಲ ನಿರ್ವಹಣೆ ಸಂಸ್ಥೆಯಲ್ಲಿ (ವಾಲ್ಮಿ) ಶುಕ್ರವಾರ ಆಯೋಜಿಸಿದ್ದ ಕಾರ್ಮಿಕ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಬಸವಣ್ಣನವರ ಕಾಯಕ ತತ್ವವು ನಾವು ಮಾಡುವ ಕೆಲಸಗಳಲ್ಲಿ ಸಂತೋಷ ಕಾಣುವುದಾಗಿದೆ. ಅಸಂಘಟಿತ ಕಾರ್ಮಿಕರು ಒಂದುಗೂಡಿದಾಗ ಒಂದು ಶಕ್ತಿಯಾಗುತ್ತಾರೆ. ಆಗ ಮಾತ್ರ ತಮ್ಮ ಹಕ್ಕು ಮತ್ತು ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದರು.
ಹುಬ್ಬಳ್ಳಿಯ ಕಾರ್ಮಿಕ ಅಽಕಾರಿ ಮಾರಿಕಾಂಬಾ ಹುಲಕೋಟೆ ಮಾತನಾಡಿ, ೧೮- ೧೯ನೇ ಶತಮಾನದ ಕೈಗಾರಿಕಾ ಕ್ರಾಂತಿ ಸಂದರ್ಭದಲ್ಲಿ ಬಂಡವಾಳಶಾಹಿ ವರ್ಗವು ಕಾರ್ಮಿಕರ ಮೇಲೆ ನಡೆಸಿದ ದಬ್ಬಾಳಿಕೆ, ಶೋಷಣೆ ವಿರುದ್ಧ ಅನೇಕ ಹೋರಾಟಗಳು ನಡೆದವು. ಈ ಹೋರಾಟದ ಫಲವಾಗಿ ಪ್ರಸ್ತುತ ಕಾರ್ಮಿಕ ಹಿತರಕ್ಷಣೆಗೆ ಕಾನೂನಿನ ಮೂಲಕ ಅನೇಕ ಹಕ್ಕುಗಳನ್ನು ನೀಡಲಾಗಿದೆ ಎಂದರು.
ವಾಲ್ಮಿ ನಿರ್ದೇಶಕ ಡಾ. ರಾಜೇಂದ್ರ ಪೋದ್ದಾರ ಮಾತನಾಡಿ, ಪ್ರಸ್ತುತ ನಾಗರಿಕ ಸಮಾಜದಲ್ಲಿ ಭೌದ್ಧಿಕ ಮತ್ತು ಶಾರೀರಿಕ ಶ್ರಮವಹಿಸುವ ಎಲ್ಲರೂ ಶ್ರಮಿಕರು, ಕಾರ್ಮಿಕರಾಗಿದ್ದೇವೆ ಎಂದರು.
ಹಿರಿಯ ಕಾರ್ಮಿಕ ನಿರೀಕ್ಷಕರಾದ ಮೀನಾಕ್ಷಿ ಸಿಂದಿಹಟ್ಟಿ ಮತ್ತು ಭುವನೇಶ್ವರಿ ಕೋಟಿಮಠ, ಡಾ. ಮಂಜುನಾಥ ಘಾಟೆ, ಸಿಬ್ಬಂದಿ ಇದ್ದರು. ಪ್ರಾಧ್ಯಾಪಕ ಭೀಮಾನಾಯ್ಕ ಸಂಯೋಜಿಸಿದರು.
ವಾಲ್ಮಿ ಸಂಸ್ಥೆಯಲ್ಲಿ ಕೃಷಿ, ತೋಟಗಾರಿಕೆ ಮತ್ತು ಆಡಳಿತ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರ್ಮಿಕರನ್ನು ಸನ್ಮಾನಿಸಲಾಯಿತು.