ಜಿಲ್ಲೆ

ಕಾರ್ಮಿಕರ ಕನಿಷ್ಠ ವೇತನ ಶೀಘ್ರ ನಿಗದಿ,ಸಚಿವ ಸಂತೋಷ ಲಾಡ್ ಭರವಸೆ

Dharwada - Basavaraj Idli

ಹುಬ್ಬಳ್ಳಿ: ಅಸಂಟಿತ ಕಾರ್ಮಿಕರು ಸೇರಿ ಎಲ್ಲ ವರ್ಗದ ಕೆಲಸಗಾರರಿಗೆ ಕನಿಷ್ಠ ವೇತನ ನಿಗದಿ ಮಾಡಲು ಶೀಘ್ರ ಕಾನೂನು ಜಾರಿಗೆ ತರಲಾಗುವುದು ಎಂದು ಕಾರ್ಮಿಕ ಸಚಿವ ಸಂತೋಷ ಲಾಡ್ ಹೇಳಿದರು.

ನಗರದ ಆರ್.ಎನ್. ಶೆಟ್ಟಿ ಕಲ್ಯಾಣ ಮಂಟಪದಲ್ಲಿ ಶನಿವಾರ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಅಸಂಟಿತ ಕಾರ್ಮಿಕರ ಒಕ್ಕೂಟ ಏರ್ಪಡಿಸಿದ್ದ ಕಟ್ಟಡ ಕಾರ್ಮಿಕರ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

ರಾಜ್ಯದಲ್ಲಿ ಶೇ. 85 ರಷ್ಟು ಕಾರ್ಮಿಕರು ಅಸಂಘಟಿತ ವಲಯದಲ್ಲಿ ಇದ್ದಾರೆ. ಅವರೆಲ್ಲರನ್ನೂ ಕಲ್ಯಾಣ ಮಂಡಳಿ ಅಡಿ ತಂದು ಸೌಲಭ್ಯ ಕೊಡಬೇಕು ಎಂಬ ಒತ್ತಡ ಇದೆ. ನೋಂದಣಿಗೆ ಅರ್ಹರಾದವರನ್ನು ಮಾತ್ರ ಪರಿಗಣಿಸುವುದು ಸವಾಲಿನ ಕೆಲಸ. ಇದಕ್ಕಾಗಿ ಹೊಸದಾಗಿ ಸಾಫ್ಟವೇರ್
ಸಿದ್ಧಪಡಿಸಲಾಗುತ್ತಿದೆ. ಈ ಮೂಲಕ ಅನರ್ಹರನ್ನು ಸೌಲಭ್ಯದಿಂದ ದೂರ ಇಡುವ ಕೆಲಸ ಮಾಡುತ್ತೇವೆ ಎಂದು ಹೇಳಿದರು.

ರಾಜ್ಯದಲ್ಲಿ 1.80 ಕೋಟಿ ಜನ ಅಸಂಘಟಿತ ಕಾರ್ಮಿಕರಿದ್ದು, ಈಗಾಗಲೇ 45 ಲಕ್ಷ ಕಾರ್ಮಿಕರ ಕಾರ್ಡ್ ವಿತರಣೆ ಮಾಡಲಾಗಿದೆ. 10 ಲಕ್ಷ ಅರ್ಜಿಗಳು ಪೆಂಡಿಂಗ್ ಇವೆ. ಇನ್ನೂ ಅನೇಕರು ಅಜಿರ್ ಹಾಕುತ್ತಿದ್ದಾರೆ. ಎಲ್ಲವನ್ನು ಪರಿಶೀಲನೆ ಮಾಡಬೇಕಾಗಿದೆ. 6500 ಕೋಟಿ ರೂ. ಮಂಡಳಿಯಲ್ಲಿದೆ. ಇದರ ಸದುಪಯೋಗ ಆಗಬೇಕಿದೆ ಎಂದರು.

ಕಾರ್ಮಿಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಬೇಕು. ಉನ್ನತ ಶಿಕ್ಷಣಕ್ಕೆ ಮಾತ್ರ ಮಂಡಳಿಯ ಸೌಲಭ್ಯ ಪಡೆದುಕೊಳ್ಳಬೇಕು. ಇದರಿಂದ ಹೆಚ್ಚಿನ ಕಾಮಿರ್ಕರು ಹಾಗೂ ಅವರ ಮಕ್ಕಳಿಗೆ ಅನುಕೂಲವಾಗಲಿದೆ ಎಂದು ಸಲಹೆ ನೀಡಿದರು.

ಮಂಡಳಿಯಲ್ಲಿ ಅರ್ಹರನ್ನು ಮಾತ್ರ ನೋಂದಣಿ ಮಾಡುವ ಸಲುವಾಗಿ ಹೊಸ ತಂತ್ರಜ್ಞಾನ ಅಭಿವೃದ್ಧಿ ಪಡಿಸಲಾಗುತ್ತಿದೆ. ಈಗಾಗಲೇ ನೋಂದಣಿಯಾದವರ ಜಿಯೋ ಮ್ಯಾಪಿಂಗ್ ಮಾಡಿ ಸಮಗ್ರ ವಿವರ ಪಡೆಯಲಾಗುವುದು. ಇದರಿಂದ ನಿಜವಾದ ಕಾಮಿರ್ಕರ ಪತ್ತೆಯಾಗಲಿದೆ ಎಂದರು.

ಪತ್ರಿಕೆ ಹಂಚುವವರು, ಇ ಕಾಮರ್ಸ್ನಲ್ಲಿ ಕೆಲಸ ಮಾಡುವವರು, ಪತ್ರಕರ್ತರು, ಛಾಯಾಗ್ರಾಹಕರು, ಹೋಟೆಲ್ ಕೆಲಸಗಾರರು, ನೇಕಾರರು ಹೀಗೆ ಅಸಂಟಿತ ವಲಯದಲ್ಲಿ ಕೆಲಸ ಮಾಡುವವರಿಗೆ ಸೌಲಭ್ಯ ಒದಗಿಸಲು ಹೊಸ ಯೋಜನೆ ರೂಪಿಸಲಾಗುತ್ತಿದೆ ಎಂದು ಸಚಿವ ಲಾಡ್ ಹೇಳಿದರು.

ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಶಿವಕುಮಾರ ಬಂಡಿವಡ್ಡರ ಮಾತನಾಡಿ, ನಕಲಿ ಕಾರ್ಮಿಕರ ಸಮಸ್ಯೆ ನಿವಾರಿಸಿ, ಅರ್ಹರ ನೋಂದಣಿ ಪ್ರಕ್ರಿಯೆ ಚುರುಕುಗೊಳಿಸಬೇಕೆಂದು ಮನವಿ ಮಾಡಿದರು.

ಒಕ್ಕೂಟದ ಅಧ್ಯಕ್ಷ ದುರಗಪ್ಪ ಚಿಕ್ಕತುಂಬಳ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಕಾಮಿರ್ಕರಾದ ನಾರಾಯಣ ಬಳ್ಳಾರಿ, ಲಕ್ಷ್ಮಣ ಸೋಮಪ್ಪನವರ, ಶಿವಲಿಂಗಯ್ಯ ಇತರರನ್ನು ಸನ್ಮಾನಿಸಲಾಯಿತು.
ಧಾರವಾಡ ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ಅನಿಲಕುಮಾರ ಪಾಟೀಲ, ದೇವಕಿ ಯೋಗಾನಂದ, ಮಂಜುನಾಥಗೌಡ ಮುರಳಿ, ಸುರೇಶ ನಾಡಗೇರ, ಸಂಗೀತಾ, ರೋಹಿತ್ ನಾಯ್ಕರ್, ಎಸ್.ಆರ್. ಪಾಟೀಲ, ಮೋತಿಲಾಲ ಮಾಳಗಿಮನಿ, ಚಂದ್ರಶೇಖರ ಜುಟ್ಟಲ್, ಇತರರು ಪಾಲ್ಗೊಂಡಿದ್ದರು.

ಆಶಾದೇವಿ ಅಳಗವಾಡಿ ಪ್ರಾಸ್ತಾವಿಕ ಮಾತನಾಡಿದರು.