ಕಾಸರಗೋಡು: ಅಯಿತ್ತಲ ಕರಾವಳಿಯಲ್ಲಿ ಮೀನುಗಾರಿಕಾ ದೋಣಿ ಮಗುಚಿಬಿದ್ದ ಪರಿಣಾಮ ಒಬ್ಬ ಕಾರ್ಮಿಕ ಮೃತಪಟ್ಟಿದ್ದು, ಇನ್ನೊಬ್ಬ ನಾಪತ್ತೆಯಾಗಿದ್ದಾರೆ. ಉಳಿದ 35 ಮಂದಿ ಈಜಿ ದಡ ಸೇರಿದ್ದಾರೆ. ನಾಪತ್ತೆಯಾಗಿರುವ ಕಾರ್ಮಿಕನಿಗಾಗಿ ಹುಡುಕಾಟ ಮುಂದುವರಿದಿದೆ. ದೋಣಿಯಲ್ಲಿ ಕೇರಳ, ತಮಿಳ್ನಾಡು, ಒಡಿಶಾ ನಿವಾಸಿಗಳಿದ್ದರು. ಮಲಪ್ಪುರಂ ಪರಪ್ಪನಂಗಾಡಿ ನಿವಾಸಿ ಕೋಯಾ ಮೋನ್ ಮೃತಪಟ್ಟವರು. ನಾಪತ್ತೆಯಾದವರನ್ನು ಮುನೀರ್ ಎಂದು ಗುರುತಿಸಲಾಗಿದೆ.
ಅಯಿತ್ತಲ ಕರಾವಳಿ ಪೊಲೀಸ್ ಠಾಣೆ ಸಮೀಪ ಪವಲಿಯಪರಂಬ ಕಡೆಯಿಂದ ಬರುತ್ತಿದ್ದ ದೋಣಿ ಅಪಘಾತಕ್ಕೀಡಾಗಿದೆ.ದೋಣಿಯಲ್ಲಿ 37 ಮಂದಿ ಇದ್ದರು. 35 ಕಾರ್ಮಿಕರನ್ನು ರಕ್ಷಿಸಲಾಗಿದೆ. ಜಿಲ್ಲಾಧಿಕಾರಿ ಕೆ.ಇನ್ಬಾಶೇಖರ್ ಮತ್ತು ಕಣ್ಣೂರು ಡಿಐಜಿ ರಾಜ್‌ಪಾಲ್ ಮೀನಾ ಅಯಿತ್ತಲ ಅಳಿವೆ ಪ್ರದೇಶಕ್ಕೆ ಭೇಟಿಯಿತ್ತರು. ಶಾಸಕ ಎಂ.ರಾಜಗೋಪಾಲನ್, ನೀಲೇಶ್ವರ ನಗರಸಭೆ ಅಧ್ಯಕ್ಷೆ ಟಿ.ವಿ.ಶಾಂತಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ಶಿಲ್ಪಾ, ಅಪರ ಜಿಲ್ಲಾಧಿಕಾರಿ ಪ್ರತೀಕ್ ಜೈನ್ ಕಾರ್ಯಾಚರಣೆಯಲ್ಲಿ ಸಹಕರಿಸಿದರು.