ಪಾಂಡವಪುರ: ಕೈ ಕುಳಿ ಮೂಲಕ ಗಣಿಗಾರಿಕೆಯಲ್ಲಿ ತೊಡಗಿರುವ ಕೂಲಿ ಕಾರ್ಮಿಕರಿಗೆ ಪೊಲೀಸರು ನೀಡುತ್ತಿರುವ ಕಿರುಕುಳದಿಂದಲೇ ಕಾರ್ಮಿಕ ಆತ್ಮಹತ್ಯೆಗೆ ಶರಣಾಗಿದ್ದಾನೆ. ಇದಕ್ಕೆ ಪೊಲೀಸ್ ಇನ್ಸ್‌ಪೆಕ್ಟರ್ ಕೆ.ಪ್ರಭಾಕರ್ ಅವರೇ ನೇರಹೊಣೆ ಎಂದು ಶಾಸಕ ಸಿ.ಎಸ್.ಪುಟ್ಟರಾಜು ಹೇಳಿದರು.
ತಾಲೂಕಿನ ಕಾವೇರಿಪುರ ನಿವಾಸಿ ಮಂಜುನಾಥ್ (33) ಸಾಲದ ಸುಳಿಗೆ ಸಿಲುಕಿ ಬುಧವಾರ ಬೇಬಿ ಬೆಟ್ಟದ ಜಾತ್ರೆಮಾಳದಲ್ಲಿ ಆತ್ಮಹತ್ಯೆ ಮಾಡಿಕೊಂಡ ಹಿನ್ನೆಲೆಯಲ್ಲಿ ಪಟ್ಟಣದ ಉಪವಿಭಾಗೀಯ ಆಸ್ಪತ್ರೆಗೆ ಭೇಟಿ ನೀಡಿ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದ ಬಳಿಕ ಅವರು ಮಾತನಾಡಿದರು.
ಗಣಿಗಾರಿಕೆ ಮೇಲೆ ಅವಲಂಬಿತವಾಗಿರುವ ಕೂಲಿ ಕಾರ್ಮಿಕರಿಗೆ ಯಾರೂ ತೊಂದರೆ ಕೊಡಬಾರದು ಎಂದು ಜಿಲ್ಲಾ ಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ತೀರ್ಮಾನವಾಗಿದೆ. ಆದರೆ, ಪೊಲೀಸ್ ಇನ್ಸ್‌ಪೆಕ್ಟರ್ ಕಾರ್ಮಿಕರಿಂದ ಹಣ ವಸೂಲಿ ಮಾಡುವ ಉದ್ದೇಶದಿಂದ ಪದೇ ಪದೆ ಕ್ವಾರಿಗಳಿಗೆ ಭೇಟಿ ನೀಡಿ ಕಿರುಕುಳ ನೀಡಿದ್ದರ ಪರಿಣಾಮ ಇಂತಹ ಘಟನೆ ನಡೆದಿದೆ. ಇದಕ್ಕೆ ಸಂಬಂಧಪಟ್ಟಂತೆ ಐಜಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಉಸ್ತುವಾರಿ ಮಂತ್ರಿಗಳ ಜತೆ ಮಾತನಾಡಿದ್ದು, ಕೂಡಲೇ ಆತನನ್ನು ಅಮಾನತು ಪಡಿಸಲು ಕ್ರಮ ಕೈಗೊಳ್ಳುವಂತೆ ತಿಳಿಸಿದ್ದೇನೆ ಎಂದು ತಿಳಿಸಿದರು.