ಆದರ್ಶ್ ಅದ್ಕಲೇಗಾರ್ ಮಡಿಕೇರಿ
ನಕಲಿ ದಾಖಲೆಗಳನ್ನು ನೀಡಿ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ನೋಂದಣಿಯಾದವರ ವಿರುದ್ಧ ಕಾರ್ಮಿಕ ಇಲಾಖೆ ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹ ಕೇಳಿಬಂತು.
ಕೊಡಗು ಜಿಲ್ಲಾ ಕಾರ್ಮಿಕ ಇಲಾಖೆಯಲ್ಲಿ ೧೦೬೯೪ ಕಟ್ಟಡ ಹಾಗೂ ಇತರೆ ಕಾರ್ಮಿಕರು ನೋಂದಣಿಯಾಗಿ, ಕಾರ್ಮಿಕರ ಕಾರ್ಡ್ ಪಡೆದಿದ್ದಾರೆ. ಅದರಲ್ಲಿ ೧೦೭ ಕಾರ್ಮಿಕರು ನಕಲಿ ದಾಖಲೆಗಳನ್ನು ನೀಡಿ, ಕಾರ್ಮಿಕರ ಕಾರ್ಡ್ ಪಡೆದುಕೊಂಡು, ಸರ್ಕಾರ ಕಾರ್ಮಿಕರಿಗೆ ನೀಡುವ ಸವಲತ್ತುಗಳನ್ನು ಪಡೆದುಕೊಂಡಿದ್ದಾರೆ. ೧೦೧ ಬೋಗಸ್ ಕಾರ್ಡ್‌ನಲ್ಲಿ ಮಹಿಳೆಯರೇ ಹೆಚ್ಚಾಗಿ ಕಂಡುಬಂದಿದ್ದಾರೆ.
ಕೋವಿಡ್ ಬಳಿಕ ಸರ್ಕಾರ ಕಟ್ಟಡ ಕಾರ್ಮಿಕರು ಹಾಗೂ ಇತರೆ ಕಾರ್ಮಿಕರಿಗೆ ವಿಶೇಷ ಸೌಲಭ್ಯಗಳನ್ನು ನೀಡಲಾಗುತ್ತಿದೆ. ಇದರ ಸದುಪಯೋಗವನ್ನು ಪಡೆದುಕೊಳ್ಳಲು ಮಧ್ಯವರ್ತಿಗಳ ಮೂಲಕ ಕಾರ್ಮಿಕರ ಕಾರ್ಡ್ ಪಡೆದುಕೊಂಡು ಕೋವಿಡ್ ಸಂದರ್ಭದಲ್ಲಿ ಕೂಡ ಕಾರ್ಮಿಕ ಇಲಾಖೆಯಿಂದ ಯೋಜನೆಗಳನ್ನು ಪಡೆದುಕೊಂಡಿದ್ದಾರೆ.
ಕಾರ್ಮಿಕ ಕೆಲಸದಲ್ಲಿ ತೊಡಗಿಸಿಕೊಳ್ಳದ ಮಹಿಳೆಯರು ಕೋವಿಡ್ ಬಳಿಕ ಕಾರ್ಮಿಕ ಕಾರ್ಡ್ ಮಾಡಿಸಿಕೊಂಡು, ಸರ್ಕಾರದ ಯೋಜನೆಗಳನ್ನು ಪಡೆದಿದ್ದಾರೆ ಎಂದು ಬೋಗಸ್ ಕಾರ್ಡ್ ಅಭಿಯಾನದಲ್ಲಿ ಪತ್ತೆಯಾಗಿದೆ. ಜಿಲ್ಲೆಯಲ್ಲಿ ಇನ್ನೂ ಅನೇಕ ಕಾರ್ಮಿಕ ಬೋಗಸ್ ಕಾರ್ಡ್ ಇದೆ ಎನ್ನಲಾಗುತ್ತಿದೆ. ಕಾರ್ಮಿಕ ಇಲಾಖೆ ಪತ್ತೆಹಚ್ಚುವ ಕಾರ್ಯದಲ್ಲಿ ತೊಡಗಿದೆ ಈ ಸಂಬಂಧ ಜಿಲ್ಲೆಯ ಕಾರ್ಮಿಕ ಮುಖಂಡರ, ಜನಸಾಮಾನ್ಯರ ಹಾಗೂ ಅಧಿಕಾರಿಗಳ ಅಭಿಪ್ರಾಯ ಲೌಡ್ ಸ್ಪೀಕರ್‌ನಲ್ಲಿ ಅನಾವರಣಗೊಂಡಿದೆ.
ಕಾರ್ಮಿಕ ಇಲಾಖೆಯಲ್ಲಿ ನಡೆದಿದೆ ಎನ್ನಲಾದ ನಕಲಿ ಕಾರ್ಡ್ ಹಾವಳಿಯಿಂದ ನಿಜವಾದ ಕಾರ್ಮಿಕರಿಗೆ ಅನ್ಯಾಯವಾಗಿದೆ. ಕಾರ್ಡ್ ಪಡೆದಿರುವ ಕಾರ್ಮಿಕರು ಪ್ರತಿವರ್ಷ ನವೀಕರಣ ಮಾಡಬೇಕು. ಆದರೆ ಇಲಾಖೆಯಲ್ಲಿ ನವೀಕರಣವಾಗುತ್ತಿಲ್ಲ. ಇಲಾಖೆ ಇನ್ನಾದರೂ ಎಚ್ಚೆತ್ತುಕೊಳ್ಳಲಿ. ಮಧ್ಯವರ್ತಿಗಳು ನಕಲಿ ಕಾರ್ಡ್ ಮಾಡಿಸುತ್ತಿದ್ದಾರೆ. ಕಾರ್ಮಿಕ ಅಧಿಕಾರಿಗಳು ಈ ಬಗ್ಗೆ ಎಚ್ಚರ ವಹಿಸಬೇಕು.
-ಎಚ್.ಎಂ.ಸೋಮಪ್ಪ, ಕಾರ್ಮಿಕ ಮುಖಂಡರು, ಸೋಮವಾರಪೇಟೆ
ನಕಲಿ ದಾಖಲೆ ನೀಡಿ ಕಾರ್ಮಿಕ ಇಲಾಖೆಯಲ್ಲಿ ಬೋಗಸ್ ಕಾರ್ಡ್ ಮಾಡಿಕೊಂಡು ಸರ್ಕಾರದ ಸೌಲಭ್ಯ ಪಡೆದುಕೊಳ್ಳುತ್ತಿರುವುದು ಬೆಳಕಿಗೆ ಬಂದಿದೆ. ಸೂಕ್ತ ತನಿಖೆಯ ಆಗಬೇಕು. ಕಾರ್ಡ್ ನೋಂದಣಿ ನಿಯಮ ಗಾಳಿಗೆ ತೂರಬಾರದು. ನಿಜವಾದ ಕಾರ್ಮಿಕರಿಗೆ ನೋಂದಣಿ, ನವೀಕರಣ ಶುಲ್ಕ ಬೇಡ.
-ಎಂ.ಎ.ಗಣೇಶ್, ಸಿಪಿಐ, ತಾಲೂಕು ಸಹ ಕಾರ್ಯದರ್ಶಿ
ಖಾಸಗಿ ಮಾಲೀಕತ್ವದ ಅಂಗಡಿ ಹೋಟೆಲ್‌ಗಳಲ್ಲಿ ಕಷ್ಟಪಟ್ಟು ದುಡಿಯುವ ಕಾರ್ಮಿಕರಿಗೆ ಸಹಾಯ ಮಾಡಿ ಎಂದರೆ ಅಧಿಕಾರಿಗಳು ಒಪ್ಪುವುದಿಲ್ಲ. ಈಗ ಈ ಅಕ್ರಮ ಬಯಲಿಗೆ ಬಂದ ಮೇಲೆ ಗೋತಾಗುತ್ತಿದೆ. ಅಂತಹ ಭ್ರಷ್ಟ ಅಧಿಕಾರಿಗಳ ಮೇಲೆ ಕಠಿಣ ಕಾನೂನು ಕ್ರಮವಹಿಸಬೇಕು.
ಎ.ಜೆ.ಯೇಸುದಾಸ್, ಹೋಟೆಲ್ ಉದ್ಯಮಿ, ಕುಶಾಲನಗರ
ಬೋಗಸ್ ಕಾರ್ಮಿಕ ಕಾರ್ಡ್ ವಿತರಣೆ ಮಾಡುತ್ತಿರುವ ಅಧಿಕಾರಿಗಳಿಗೆ ಮೊದಲು ಕಠಿಣ ಶಿಕ್ಷೆಯಾಗಬೇಕು. ನೈಜ ಕಾರ್ಮಿಕರು ಸೌಲಭ್ಯ ವಂಚಿತರಾಗಿದ್ದಾರೆ. ಈ ಸಂಬಂಧ ಸರ್ಕಾರದಿಂದ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಬೇಕು.
ಎಸ್.ಆರ್.ವಸಂತ್, ಅಧ್ಯಕ್ಷರು, ಕೊಡಗು ಜಿಲ್ಲಾ ಛಾಯಾಗ್ರಾಹಕರ ಕ್ಷೇಮಾಭಿವೃದ್ಧಿ ಸಂಘ
ಕಾರ್ಮಿಕ ಇಲಾಖೆಯ ಕಾರ್ಡ್ ನಿಜವಾದ ಪಲನುಭವಿಗೆ ಇದರ ಪ್ರಯೋಜನ ದೊರೆಯಬೇಕು. ಕಾರ್ಮಿಕ ವರ್ಗಕ್ಕೆ ಸೇರದವರು ಸೌಲಭ್ಯ ಪಡೆಯಲು ಅವಕಾಶ ನೀಡಬಾರದು. ಅನೇಕರು ಕಾರ್ಮಿಕ ಕಾರ್ಡ್ ಬಳಸಿ ಸೌಲಭ್ಯ ಪಡೆದಿದ್ದರೆ, ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು.
ಉಷ ಜಯೇಶ್, ಆಶಾ ಕಾರ್ಯಕರ್ತೆ, ಶನಿವಾರಸಂತೆ
ಬೋಗಸ್ ಕಾರ್ಮಿಕ ಕಾರ್ಡ್ ಬಳಸಿ ಸೌಲಭ್ಯ ಪಡೆಯುತ್ತಿರುವುದು ಹಗಲು ದರೋಡೆಯಾಗಿದೆ. ಸರ್ಕಾರವನ್ನು ವಂಚಿಸಿ ಬಡ ಕಾರ್ಮಿಕರಿಗೆ ದ್ರೋಹ ಎಸಗಲಾಗುತ್ತಿದೆ. ಅರ್ಹರಿಗಷ್ಟೇ ಸರ್ಕಾರದ ಸೌಲಭ್ಯ ಲಭಿಸಸಬೇಕು. ಸರ್ಕಾರ, ಸಂಬಂಧಪಟ್ಟ ಇಲಾಖಾಧಿಕಾರಿಗಳು ಸೂಕ್ತ ತನಿಖೆ ನಡೆಸಿ ಕಠಿಣ ಕ್ರಮ ಕೈಗೊಳ್ಳಬೇಕು.
ಶ.ಗ.ನಯನತಾರಾ, ಸಾಹಿತಿ, ಶನಿವಾರಸಂತೆ
ಕಾರ್ಮಿಕ ಮಂಡಳಿಯ ಸೌಲಭ್ಯವನ್ನು ನಕಲಿ ದಾಖಲೆ ಸೃಷ್ಟಿಸಿ ಸೌಲಭ್ಯ ಪಡೆಯುತ್ತಿರುವುದು ಅಪರಾಧ. ಇದರಿಂದ ನೈಜ ಕಟ್ಟಡ ಕಾರ್ಮಿಕಕರಿಗೆ ವಂಚನೆಯಾಗುತ್ತಿದೆ. ಈ ಬಗ್ಗೆ ಸೇವಾ ಸಿಂಧು ತಂತ್ರಾಂಶದಲ್ಲಿ ನಕಲಿ ಕಾರ್ಮಿಕರನ್ನು ಪತ್ತೆ ಹಚ್ಚಿ ಸೌಲಭ್ಯ ಸ್ಥಗಿತಗೊಳಿಸಬೇಕು.
ಚಿಮ್ಮಂಗಡ ಗಣೇಶ್, ಅಧ್ಯಕ್ಷರು, ಜಿಲ್ಲಾ ರೈತ ಸಂಘ
ನಕಲಿ ದಾಖಲೆ ಸೃಷ್ಟಿಸಿ ಕಾರ್ಮಿಕರಿಗೆ ಸರ್ಕಾರ ನೀಡುವ ಸೌಲಭ್ಯ ಪಡೆಯುತ್ತಿರುವುದು ಕಾರ್ಮಿಕ ಅಧಿಕಾರಿಗಳು ಪತ್ತೆ ಹಚ್ಚಬೇಕು. ಸೌಲಭ್ಯಕ್ಕಾಗಿ ನೀಡಿರುವ ದಾಖಲೆಗಳು ಅಸಲಿಯೋ, ನಕಲಿಯೋ ಎಂಬ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳಬೇಕು. ನೈಜ ಫಲಾನುಭವಿಗಳು ಸೌಲಭ್ಯದಿಂದ ವಂಚಿತರಾಗದಂತೆ ಎಚ್ಚರ ವಹಿಸಬೇಕು.
ಮಲ್ಲಮಾಡ ಪ್ರಭು ಪೂಣಚ್ಚ, ಬೆಕ್ಕೆಸೊಡ್ಲೂರು ಗ್ರಾಮ
ಇತ್ತೀಚೆಗೆ ನೋಂದಾಯಿಸಿಕೊಂಡ ಬಹುತೇಕರು ನೈಜ ಕಾರ್ಮಿಕರಿದ್ದಾರೆ. ಆದರೆ, ಹಿಂದೆ ಮನೆಯಲ್ಲಿ ಕೂತ ಮಹಿಳೆಯರಿಗೆ ನಾಯಕರೆನಿಸಿಕೊಂಡವರು ಕಾರ್ಡ್ ಮಾಡಿಸಿಕೊಟ್ಟಿದ್ದಾರೆ. ಇದರಿಂದ ನೈಜ ಕಾರ್ಮಿಕರಿಗೆ ಅನ್ಯಾಯವಾಗುತ್ತಿದೆ. ಕಾರ್ಡ್ ಮಾಡಿಸಿಕೊಡಲು ೧೦೦೦ ರೂ.ಯನ್ನು ಮದ್ಯವರ್ತಿಗಳು ಪಡೆಯುತ್ತಿರುವ ಆರೋಪ ಕೂಡ ಇದೆ. ಇಂತವರನ್ನು ಜೈಲಿಗೆ ಕಳುಹಿಸುವ ಕೆಲಸ ಮಾಡಬೇಕಿದೆ.
-ಕೆ.ವಿ.ಸುನಿಲ್, ಜಿಲ್ಲಾಧ್ಯಕ್ಷರು, ಕಾಫಿನಾಡು ಕಟ್ಟಡ ಕಾರ್ಮಿಕರ ಸಂಘ
ನಕಲಿ ದಾಖಲೆ ನೀಡಿ ಕಾರ್ಡ್ ಪಡೆದವರಿಗೆ ಫೆ.೨೫ರವರೆಗೆ ಕಾರ್ಡ್ ಹಿಂತಿರುಗಿಸಲು ಅವಕಾಶ ಕಲ್ಪಿಸಲಾಗಿತ್ತು. ಈವರೆಗೆ ೧೦೭ ನಕಲಿ ಕಾರ್ಡ್‌ಗಳು ಲಭ್ಯವಾಗಿದೆ. ಇಲಾಖೆಯಿಂದ ತಂಡ ರಚಿಸಿ ಪರಿಶೀಲನೆ ನಡೆಸಲಾಗುತ್ತಿದೆ.
ಯತ್ನಟ್ಟಿ, ಕಾರ್ಮಿಕ ಇಲಾಖೆ ಅಧಿಕಾರಿ, ಮಡಿಕೇರಿ ತಾಲೂಕು
ಜಿಲ್ಲೆಯಲ್ಲಿ ಬೋಗಸ್ ಕಾರ್ಡ್ ಪತ್ತೆ ಅಭಿಯಾನ ನಿರಂತರವಾಗಿ ನಡೆಯಲಿದೆ. ಐದಾರು ಜನ ಸ್ವಯಂಪ್ರೇರಿತರಾಗಿ ಬೋಗಸ್ ಕಾರ್ಡ್ ಹಿಂತಿರುಗಿಸಿದ್ದಾರೆ. ಎಲ್ಲಾ ಸೈಬರ್ ಸೆಂಟರ್ ಹಾಗೂ ಸೇವಾ ಸಿಂಧು ಕೇಂದ್ರಗಳಿಗೆ ಕಾರ್ಮಿಕ ಕಾರ್ಡ್ ನೋಂದಣಿ ಬಗ್ಗೆ ಕಡಕ್ ಸೂಚನೆ ನೀಡಿದ್ದೇವೆ. ಕಾರ್ಮಿಕ ಕಾರ್ಡ್ ನೋಂದಣಿ ಹಾಗೂ ನವೀಕರಣದ ಬಗ್ಗೆ ಇಲಾಖೆ ಕಟ್ಟುನಿಟ್ಟಾದ ನಿಯಮಗಳನ್ನು ತೆಗೆದುಕೊಳ್ಳುತ್ತೇವೆ.
ವಿಲ್ಮಾ ಎಲಿಜಬೆತ್, ಕಾರ್ಮಿಕ ಇಲಾಖೆ ಅಧಿಕಾರಿ, ಕೊಡಗು