ಜಿಲ್ಲೆ

ಹಕ್ಕು ಕಸಿದುಕೊಂಡಿರುವ ಬಂಡವಾಳಶಾಹಿಗಳು: ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಸಿ.ಕುಮಾರಿ ಆರೋಪ

ಕೆ.ಎನ್.ರಾಘವೇಂದ್ರ

ಮಂಡ್ಯ: ದುಡಿಯುವ ಜನರ ಹಕ್ಕುಗಳನ್ನು ಬಂಡವಾಳಶಾಹಿಗಳು ಕಸಿದುಕೊಂಡಿದ್ದಾರೆ ಎಂದು ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಸಿ.ಕುಮಾರಿ ದೂರಿದರು.

ನಗರದ ಗುರುಮಠದ ಸೆಂಟರ್ ಆಫ್ ಒಂಡಿಯನ್ ಟ್ರೇಡ್ ಯೂನಿಯನ್ಸ್ ಕಚೇರಿ ಆವರಣದಲ್ಲಿ ಮಂಡ್ಯ ಸಂಚಾಲನಾ ಸಮಿತಿಯಿಂದ ಮೇ ದಿನದ ಅಂಗವಾಗಿ ಆಯೋಜಿಸಿದ್ದ ಕಾರ್ಮಿಕ ವರ್ಗದ ಮುಷ್ಕರದಲ್ಲಿ ಮಾತನಾಡಿದ ಅವರು, 1886ರಲ್ಲಿ ಅಮೆರಿಕಾದ ಚಿಕಾಗೋದಲ್ಲಿ ನಡೆದ ಹೋರಾಟದಲ್ಲಿ ಹಲವು ಕಾರ್ಮಿಕ ಮುಖಂಡರು ಮೃತಪಟ್ಟರು. ಅವರ ರಕ್ತ ಚೆಲ್ಲಿದ ಬಣ್ಣದ ಕುರುಹಾಗಿ ಕೆಂಪು ಬಣ್ಣದ ಬಾವುಟವನ್ನೇ ಚಿಹ್ನೆಯಾಗಿ ಬಳಸಲಾಗುತ್ತಿದೆ. ಕಾರ್ಮಿಕರ ಸಮಸ್ಯೆ ಈಡೇರಿಸುವುದು ನಮ್ಮ ಸಂಘಟನೆಯ ಮೂಲ ಉದ್ದೇಶವಾಗಿದ್ದು, ಅದರಂತೆ ಹೋರಾಟ ರೂಪಿಸಿಕೊಂಡು ಸರ್ಕಾರವನ್ನು ಎಚ್ಚೆತ್ತುಕೊಳ್ಳುವ ಕೆಲಸ ಮಾಡುತ್ತಿದ್ದೇವೆ ಎಂದರು.

ನಮ್ಮ ದುಡಿಮೆಯ ಹಕ್ಕನ್ನು ಪಡೆದುಕೊಳ್ಳಬೇಕು. ಆಳುವ ವರ್ಗವು ದುಡಿಯುವ ಜನರ ಪರವಾಗಿಲ್ಲ. ಕೇವಲ ಬಂಡವಾಳ ಶಾಹಿಗಳು ಕಾರ್ಮಿಕರನ್ನು ಹಿಡಿತದಲ್ಲಿಟ್ಟುಕೊಂಡಿವೆ. ಇವರಿಂದ ಮುಕ್ತಿಗೊಳಿಸಬೇಕಿದೆ. ಅದರಂತೆ ಮೇ 20 ರಂದು ದೇಶವ್ಯಾಪಿ ಬಂದ್ ಆಗುವ ನಿಟ್ಟಿನಲ್ಲಿ ಹೋರಾಟ ಮಾಡಲಾಗುತ್ತಿದ್ದು, ಈ ಹೋರಾಟದ ಮೂಲಕ ಕಾರ್ಮಿಕ ನೀತಿ ರದ್ದಾಗಬೇಕು. ಮಸೂದೆಗಳು ವಾಪಸ್ ಆಗಬೇಕು. ರೈತ ವಿರೋಧಿ ವಿದ್ಯುತ್ ಮಸೂದೆ ಹಿಂಪಡೆಯುವ ಜತೆಗೆ ಮೀಟರ್ ಅಳವಡಿಕೆ ನಿಲ್ಲಿಸಬೇಕು ಎಂಬ ಹಲವು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಹೋರಾಟ ನಡೆಸಲಾಗುತ್ತಿದೆ ಎಂದು ತಿಳಿಸಿದರು.

ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಟಿ.ಎಲ್.ಕೃಷ್ಣೇಗೌಡ ಮಾತನಾಡಿ, ಮೇ ದಿನಾಚರಣೆ ಕಾರ್ಮಿಕ ವರ್ಗದ ಹಬ್ಬವಾಗಿದೆ. ಹಿಂದುಗಳಿಗೆ ಯುಗಾದಿ, ದೀಪಾವಳಿ, ಮುಸಲ್ಮಾನರಿಗೆ ರಂಜಾನ್, ಬಕ್ರೀದ್, ಕ್ರೈಸ್ತರಿಗೆ ಕ್ರಿಸ್‌ಮಸ್ ಇದೆ. ಆದರೆ ಎಲ್ಲ ಜಾತಿ ಧರ್ಮದ ದುಡಿಯುವ ಜನರಿಗೆ ಮೇ ದಿನಾಚರಣೆ ಸಂಭ್ರಮದ ಹಬ್ಬವಾಗಿದೆ ಎಂದು ಅಭಿಪ್ರಾಯ ಪಟ್ಟರು.

ಸಿಐಟಿಯುನ ಸಂಚಾಲಕ ಚಂದ್ರಶೇಖರ್‌ಮೂರ್ತಿ, ಬಿಸಿಯೂಟ ನೌಕರರ ಸಂಘದ ಜಿಲ್ಲಾ ಕಾರ್ಯದರ್ಶಿ ಎ.ಬಿ.ಶಶಿಕಲಾ, ಪುಟ್ಟಮ್ಮ, ಎಂ.ಲಕ್ಷ್ಮೀ, ಅಂಗನವಾಡಿ ನೌಕರರ ಸಂಘದ ಗಾಯತ್ರಿ, ಮಂಗಳಾ, ಜಯಲಕ್ಷ್ಮೀ, ಉದ್ಯೋಗ ಖಾತ್ರಿ ಕಾರ್ಮಿಕರಾದ ಪ್ರೇಮಾ, ರೇಣುಕಾ, ಸುಷ್ಮಾ, ಔಷಧ ವ್ಯಾಪಾರ ಪ್ರತಿನಿಧಿಗಳ ಸಂಘದ ಎನ್.ರವೀಂದ್ರ, ಗಾರ್ಮೆಂಟ್ಸ್ ಯೂನಿಯನ್‌ನ ಮಮತಾ, ಆಟೋ ಯೂನಿಯನ್ ಸಂಘದ ಕೃಷ್ಣ ಇದ್ದರು.