ಕುಶಾಲನಗರ:
ಶ್ರಮ ಸಂಸ್ಕ್ರತಿಯ ಸತ್ಯ ಶುದ್ಧ ಕಾಯಕ ಯೋಗಿಗಳು ದೇಶದ ಭದ್ರ ಬುನಾದಿಯಾಗಿದ್ದು, ಕಾರ್ಮಿಕರನ್ನು ಬಸವಾದಿ ಶರಣರು ಕಾಯಕ ಯೋಗಿಯೆಂದು ಗೌರವದಿಂದ ಕಂಡಿದ್ದರು. ಈಗಲು ಕೂಡ ಕಾರ್ಮಿಕರನ್ನು ಮಾಲೀಕರು ಕಾಯಕ ಯೋಗಿಗಳೆಂದು ಗೌರವಿಸಬೇಕೆಂದು ಕೊಡಗು ಜಿಲ್ಲಾ ಶರಣ ಸಾಹಿತ್ಯ ಪರಿಷತು ಅಧ್ಯಕ್ಷ ಕೆ.ಎಸ್. ಮೂರ್ತಿ ಹೇಳಿದರು. ಕುಶಾಲನಗರ ತಾಲೂಕು ಕೂಡ್ಲೂರು ಕೈಗಾರಿಕಾ ಪ್ರದೇಶದ ಇಂಟಕ್ ವರ್ಕರ್ಸ್ ಯೂನಿಯನ್ ವತಿಯಿಂದ ಗುರುವಾರ ಹಮ್ಮಿಕೊಂಡಿದ್ದ ಕಾರ್ಮಿಕರ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಅತ್ಯಾಧುನಿಕ ಯಂತ್ರಗಳ ವ್ಯಾಪಕ ಬಳಕೆಯಿಂದಾಗಿ ಕರ್ಮದ ಜೀವನ ಶೈಲಿಯ ಕಾರ್ಮಿಕರ ಬದುಕು ಇತ್ತೀಚಿನ ದಿನಗಳಲ್ಲಿ ಬೀದಿಗೆ ಬೀಳುತ್ತಿದೆ. ಆದ್ದರಿಂದ ಸರ್ಕಾರ ಅಥವಾ ಜಿಲ್ಲಾಡಳಿತ ಕಾರ್ಮಿಕರ ಹಿತಕಾಯಲು ಮುಂದಾಗಬೇಕು ಎಂದರು.
ಇAಟಕ್ ಯೂನಿಯನ್ ಕಾರ್ಯಕಾರಿ ಸಮಿತಿ ನಿರ್ದೇಶಕ ನವಗ್ರಾಮ ಮಂಜು ಮಾತನಾಡಿ, ಕೂಡ್ಲೂರು ಕೈಗಾರಿಕಾ ಬಡಾವಣೆಯಲ್ಲಿನ ಕೆಲವು ಕಾಫಿ ಸಂಸ್ಕರಣಾ ಘಟಕಗಳಲ್ಲಿ ಬಿಹಾರಿಗಳು ಹಾಗೂ ಅಸ್ಸಾಮಿಗಳ ಮಹಿಳಾ ಕಾರ್ಮಿಕರನ್ನು ಕರೆತಂದು ಸ್ಥಳೀಯ ಕಾರ್ಮಿಕರಿಗೆ ಕೆಲಸ ತಪ್ಪಿಸಲಾಗುತ್ತಿದೆ. ಕೆಲವು ಘಟಕಗಳಲ್ಲಿ ಮಹಿಳಾ ಕಾರ್ಮಿಕರಿಗೆ ಅಗತ್ಯವಾಗಿ ನೀಡಲೇ ಬೇಕಾದ ಪಿಎಫ್, ಇಎಫ್, ರಜೆ ದಿನದ ಸಂಬಳ ಕಡಿತ ಸೇರಿದಂತೆ ಇನ್ನೂ ಮೊದಲಾದ ಸೌಲಭ್ಯಗಳನ್ನು ಒದಗಿಸಬೇಕು ಎಂದು ಒತ್ತಾಯಿಸಿದರು.
ಮಹಿಳಾ ಕಾರ್ಮಿಕರ ಘಟಕದ ಅಧ್ಯಕ್ಷೆ ಲೀಲಾವತಿ ಮಾತನಾಡಿ, ಕೂಡ್ಲೂರು ಕೈಗಾರಿಕಾ ಪ್ರದೇಶಗಳಿಗೆ ಶಿರಂಗಾಲ ಹಾಗೂ ಕುಶಾಲನಗರ ಭಾಗದ ಹಲವು ಗ್ರಾಮಗಳಿಂದ ಆಗಮಿಸುವ ಕಾರ್ಮಿಕರಿಗೆ ಕೂಡ್ಲೂರು ಕೈಗಾರಿಕಾ ಪ್ರದೇಶದಲ್ಲಿ ಸಾರಿಗೆ ಸಂಸ್ಥೆಯ ಬಸ್ ಗಳನ್ನು ನಿಲ್ಲಿಸುತ್ತಿಲ್ಲ. ಹಾಗಾಗಿ ಕೂಡಿಗೆ ಅಥವಾ ಕುಶಾಲನಗರದಿಂದ ಆಟೋದಲ್ಲಿ ಬರಲು 50 ರೂ. ತಗುಲುತ್ತಿದೆ. ಆದ್ದರಿಂದ ಕಾರ್ಮಿಕರ ಹಿತದೃಷ್ಟಿಯಿಂದ ಬಸ್ಸುಗಳು ನಿಲ್ಲುವಂತೆ ಮಾಡಬೇಕೆಂದು ಒತ್ತಾಯಿಸಿದರು.
ಮಹಿಳಾ ಕಾರ್ಮಿಕರ ಘಟಕದ ಕಾರ್ಯದರ್ಶಿ ಶಾಂತ ಅಶೋಕ್, ಖಜಾಂಚಿಯೂ ಆದ ಕೂಡುಮಂಗಳೂರು ಗ್ರಾಪಂ ಸದಸ್ಯೆ ಹೆಚ್.ಜೆ. ಗೌರಮ್ಮ, ಸಮಿತಿಯ ಪ್ರಮುಖರಾದ ಪದ್ಮಮ್ಮ, ಮಲ್ಲಿಗೆ, ರುಕ್ಮಿಣಿ, ಓಲಂ ಸುಜಾತ, ಇಂದ್ರಮ್ಮ, ಕಮಲಮ್ಮ, ಮಣಿಯಮ್ಮ, ಸುಮ, ಗುಲಾಬಿ ಮೊದಲಾದವರಿದ್ದರು.