ಜಿಲ್ಲೆ

ಕೆಂಪು ಕಲ್ಲು, ಮರಳು ಪೂರೈಕೆಯಾಗದೆ ತೊಂದರೆ : ಜಯರಾಜ್ ಸಾಲಿಯಾನ್ ಅಸಮಾಧಾನ

ಸೌಮ್ಯ ಆರ್

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ

ಜಿಲ್ಲಾಡಳಿತ, ಪೊಲೀಸ್ ವರಿಷ್ಠಾಧಿಕಾರಿಗಳು ತೆಗೆದುಕೊಳ್ಳುತ್ತಿರುವ ತೀರ್ಮಾನಗಳಿಂದ ಕೆಂಪು ಕಲ್ಲು, ಮರಳು ಪೂರೈಕೆಯಲ್ಲಿ ತೊಂದರೆ ಉಂಟಾಗಿದೆ. ಇದರಿಂದಾಗಿ ಕಾರ್ಮಿಕರು ಕೆಲಸ ಇಲ್ಲದೆ ಬಳಲುವಂತಾಗಿದೆ ಎಂದು ಬಿಎಂಎಸ್ ರಾಜ್ಯ ಕಾರ್ಯದರ್ಶಿ ಜಯರಾಜ್ ಸಾಲಿಯಾನ್ ಅಸಮಾಧಾನ ವ್ಯಕ್ತಪಡಿಸಿದರು.

ಬೆಳ್ತಂಗಡಿ ಭಾರತೀಯ ಮಜ್ದೂರ್ ಸಂಘ ತಾಲೂಕು ಸಮಿತಿ ವತಿಯಿಂದ ಕಟ್ಟಡ, ಇತರ ನಿರ್ಮಾಣ ಕಾರ್ಮಿಕರಿಗೆ ಮರಳು ಹಾಗೂ ಕೆಂಪು ಕಲ್ಲು ಪೂರೈಕೆಯಲ್ಲಿ ಆಗಿರುವ ತೊಂದರೆ ಕುರಿತು, ಕಾರ್ಮಿಕ ಇಲಾಖೆ ಕಟ್ಟಡ ಮಂಡಳಿಯ ಟೆಂಡರ್ ಭ್ರಷ್ಟಾಚಾರ ವಿರೋಧಿಸಿ ಬೃಹತ್ ಕಾರ್ಮಿಕ ಜಾಗೃತಿ ಆಂದೋಲನ ಆಯೋಜಿಸುವ ಕುರಿತು ಬೆಳ್ತಂಗಡಿಯಲ್ಲಿ ನಡೆದ ಸಮಾಲೋಚನಾ ಸಭೆಯಲ್ಲಿ ಮಾತನಾಡಿದರು.

ತಹಸೀಲ್ದಾರ್, ಪೊಲೀಸ್ ನಿರೀಕ್ಷಕರು ಸಮಸ್ಯೆ ಪರಿಹರಿಸಬೇಕು. ಈ ಮನವಿಗೆ ಒಂದು ವಾರದೊಳಗೆ ಸ್ಪಂದಿಸದಿದ್ದರೆ ಜನಾಂದೋಲನ ಸಭೆ ನಡೆಸಲಾಗುವುದು. ಜುಲೈ 7ರಂದು ಈ ಕುರಿತು ಬೆಳ್ತಂಗಡಿ ತಾಲೂಕಿನ ತಹಸೀಲ್ದಾರ್ ಕಚೇರಿ ಎದುರು ಬೃಹತ್ ಕಾರ್ಮಿಕ ಜಾಥಾವನ್ನು ಭಾರತೀಯ ಮಜ್ದೂರ್ ಸಂಘದ ವತಿಯಿಂದ ಆಯೋಜಿಸಲಾಗುವುದು ಎಂದರು.

ಬಿಎಂಎಸ್ ಜಿಲ್ಲಾಧ್ಯಕ್ಷ ಅನಿಲ್ ಕುಮಾರ್, ಬಿಎಂಎಸ್ ತಾಲೂಕು ಸಮಿತಿ ಅಧ್ಯಕ್ಷ ಉದಯ್ ಬಿ.ಕೆ. ಅಧ್ಯಕ್ಷತೆ ವಹಿಸಿದ್ದರು. ಬಿಎಂಎಸ್ ರಾಜ್ಯ ಕಾರ್ಯದರ್ಶಿ ಜಯರಾಜ್ ಸಾಲಿಯನ್, ಬಿಎಂಎಸ್ ಜಿಲ್ಲಾಧ್ಯಕ್ಷ ಅನಿಲ್ ಕುಮಾರ್, ಪ್ರಮುಖರಾದ ಉದಯ್ ಕುಮಾರ್, ಉಜಿರೆ ಗಣೇಶ್ ಪೂಜಾರಿ ಪೆರಾಡಿ ಉಪಸ್ಥಿತರಿದ್ದರು. ಕಟ್ಟಡ, ಇತರ ನಿರ್ಮಾಣ ಕಾರ್ಮಿಕ ಸಂಘದ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಕುಮಾರ್ ನಾಥ್ ಶೆಟ್ಟಿ ಸ್ವಾಗತಿಸಿದರು. ಗಣೇಶ್ ಪೂಜಾರಿ ವಂದಿಸಿದರು.

ಕಾರ್ಮಿಕರ ಪರವಾಗಿ ಸದಾ ನಾವು ಧ್ವನಿ ಎತ್ತಲಿದ್ದೇವೆ. ಇದೀಗ ಕಾರ್ಮಿಕರಿಗೆ ಕಟ್ಟಡ ನಿರ್ಮಾಣದ ಸಾಮಗ್ರಿ ದೊರಕದೆ ಕೆಲಸ ಇಲ್ಲದೆ ಬಳಲುವಂತಾಗಿದೆ. ಈ ಸಮಸ್ಯೆಯನ್ನು ಶೀಘ್ರವಾಗಿ ಪರಿಹರಿಸಬೇಕು. ಅನಿಲ್ ಕುಮಾರ್, ಬಿಎಂಎಸ್ ಜಿಲ್ಲಾಧ್ಯಕ್ಷ https://www.vijayavani.net/heart-disease-alert-for-auto-drivers https://www.vijayavani.net/sand-meeting